ಒಳ ರಸ್ತೆಯಲ್ಲಿ ಬಂದಿದ್ದೆ ಕೇಂದ್ರ ಸಚಿವರಿಗೆ ಕಂಟಕವಾಯ್ತು: ಸಚಿವರ ಪತ್ನಿ ಸಾವು

ಅಂಕೋಲಾ : ಕೇಂದ್ರ ಆಯಷ್ ಸಚಿವ ಗೋವಾದ ಶ್ರೀಪಾದ ಯಶೋ ನಾಯಕ ಇವರು ಕುಟುಂಬ ಸಮೇತ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿರುವ ಮಾರ್ಗ ಮಧ್ಯ ಅಂಕೋಲಾ ತಾಲೂಕಿನ ಹಿಲ್ಲೂರು-ಹೊಸಕಂಬಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮುಗುಚಿ ಬಿದ್ದ್ ಪರಿಣಾಮ ಸಚಿವ ಪತ್ನಿ ವಿಜಯಾ, ಆಪ್ತ ಕಾರ್ಯದರ್ಶಿ ದೀಪಕ ಗುಮೆ ದುರ್ಮರಣ ಹೊಂದಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಚಂದಗುಳಿ, ಕವಡಿಕೇರಿ, ಇನ್ನಿತರ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆದು ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದ್ದು, ಶಿವನ ದರ್ಶನ ಪಡೆಯುವ ಮುನ್ನವೇ ಸಚಿವರ ಪತ್ನಿ ಶಿವನ ಪಾದ ಸೇರುವಂತಾಗಿರುವುದು ವಿಧಿ ಲಿಖಿತವೇ ಸರಿ. ಅಪಘಾತದ ತೀವ್ರತಗೆ ಕಾರ್ ಸಂಪೂರ್ಣ ನುಜ್ಜಾಗಿದೆ. ಕಾರ್‍ನಲ್ಲಿ ಒಟ್ಟೂ 6 ಜನ ಪ್ರಯಾಣಿಸುತ್ತಿದ್ದು, ಸಚಿವ ಶ್ರೀಪಾದ ನಾಯ್ಕರಿಗೆ ಗಂಭೀರ ಗಾಯವಾಗಿ ಪಟ್ಟಣದ ಆರ್ಯಾ ಮೆಡಿಕಲ್‍ನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ ಸಾಗಿಸಲಾಗಿದೆ. ಸಚಿವರ ಜೊತೆಗಿದ್ದ ತುಕರಾಮ ಪಾಟೀಲ್, ಚಂದನ ಮತ್ತು ಅವರ್ಸಾದ ಸಾಯಿಕಿರಣ ಶೇಟಿಯಾ ಇವರಿಗೂ ಗಾಯಗಳಾಗಿವೆ.

ಒಳ ರಸ್ತೆಯಲ್ಲಿ ಬಂದ ಸಚಿವರ ಕಾರು;

ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಹೆದ್ದಾರಿ ಬದಲು ಕಡಿಮೆ ದೂರ ಇರುವ ಕಾರಣ ಒಳ ರಸ್ತೆಯಲ್ಲಿ ಆಗಮಿಸಿದ್ದು, ಅರೆಬರೆ ರಸ್ತೆ ಕಾಮಗಾರಿಯಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆಗಮಿಸಬೇಕಾಗಿದ್ದವರು ಕಡಿಮೆ ದೂರದ ಹಿನ್ನೆಲೆಯಲ್ಲಿ ಯಲ್ಲಾಪುರ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು ಎನ್ನಲಾಗಿದೆ.

ಆದರೆ ಮಾರ್ಗಮಧ್ಯೆ ಹೊಸಕಂಬಿ ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಕಾರಿನ ಗಾಲಿಗಳು ರಸ್ತೆ ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಕಂದಕಕ್ಕೆ ಬಿದ್ದು ಮರಕ್ಕೆ ಬಡಿದಿದೆ. ತಕ್ಷಣ ಸಚಿವರನ್ನು ಹಾಗು ಅವರ ಪತ್ನಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಮತ್ತು ಬಿಜೆಪಿ ಪ್ರಮುಖರು ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ನೀಡುವಲ್ಲಿ ಮತ್ತು ಗಾಯಾಳುಗಳನ್ನು ಸಾಗಿಸುವಲ್ಲಿ ಮುತುವರ್ಜಿ ವಹಿಸಿದರು. ಎಸ್ಪಿ ಶಿವಪ್ರಕಾಶ ದೇವರಾಜ್, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ನೀಡಿದರು. ಸಿಪಿಐ ಕೃಷ್ಣಾನಂದ ನಾಯಕ ಮತ್ತು ಪಿಎಸ್‍ಐ ಈ.ಸಿ. ಸಂಪತ್ ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Exit mobile version