ಸಮಾನ್ಯ ಸೈಕಲ್ ಎಲೆಕ್ಟ್ರಾನಿಕ್ ಸೈಕಲ್ ಆಯ್ತು: ಪಿಯುಸಿ ವಿದ್ಯಾರ್ಥಿಗಳ ಸಾಹಸ ನೋಡಿ
ಕಾರವಾರ: ಅವರಿಬ್ಬರೂ ಇನ್ನೂ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು. ಪ್ರತಿನಿತ್ಯ ಕಾಲೇಜಿಗೆ ಸೈಕಲ್‌ನಲ್ಲಿ ತೆರಳುವವರಿಗೆ ತಮ್ಮ ಸೈಕಲ್‌ಗಳನ್ನ ಮೋಟಾರ್ ಚಾಲಿತವನ್ನಾಗಿ ಮಾಡುವ ಯೋಚನೆ ಹೊಳೆದಿತ್ತು. ಅದರಂತೆ ತಿಂಗಳ ಕಾಲ ಪರಿಶ್ರಮವಹಿಸಿದ ವಿದ್ಯಾರ್ಥಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ. ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧವಾಗಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಒಂದೆಡೆ ಪೆಡಲ್‌ಗಳನ್ನ ತುಳಿಯದೇ ಸೈಕಲನ್ನೇರಿ ಬರುತ್ತಿರುವ ವಿದ್ಯಾರ್ಥಿಗಳು. ಇನ್ನೊಂದೆಡೆ ತಮ್ಮ ಸೈಕಲ್‌ನಲ್ಲಿರುವ ವಿಶೇಷತೆಯನ್ನ ಒಂದೊoದಾಗಿ ವಿವರಿಸುತ್ತಿರುವ ವಿದ್ಯಾರ್ಥಿ. ಮತ್ತೊಂದೆಡೆ ಮಕ್ಕಳು ತಯಾರಿಸಿದ ಸೈಕಲ್ ಕಂಡು ಸಂತಸ ವ್ಯಕ್ತಪಡಿಸುತ್ತಿರುವ ಪಾಲಕರು. ಈ ಎಲ್ಲ ದೃಶ್ಯಗಳು ಕಂಡುಬoದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ನಗರದ ನಂದನಗದ್ದಾ ನಿವಾಸಿಗಳಾದ ತನ್ವಿ ಚಿಪ್ಕರ್ ಹಾಗೂ ಕುನಾಲ್ ನಾಯ್ಕ ತಮ್ಮ ಸಾಮಾನ್ಯ ಸೈಕಲ್‌ಗಳನ್ನ ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ನಗರದ ಸೇಂಟ್ ಜೋಸೆಫ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿಗಳಿಬ್ಬರೂ ಪ್ರತಿನಿತ್ಯ ಕಾಲೇಜಿಗೆ ಸೈಕಲ್‌ನ್ನ ತುಳಿದುಕೊಂಡೇ ತೆರಳುತ್ತಿದ್ದರು. ಮನೆಯಿಂದ ಸುಮಾರು 6 ಕಿಲೋ ಮೀಟರ್ ದೂರದ ಕಾಲೇಜಿಗೆ ಪ್ರತಿನಿತ್ಯ ಸೈಕಲ್ ತುಳಿಯುವುದು ಬೇಸರ ಮೂಡಿಸಿದ್ದು ತಮ್ಮ ಸೈಕಲ್‌ನ್ನ ಕೂಡಾ ಬೈಕಿನಂತೆ ಎಕ್ಸಿಲೇಟರ್ ಮೂಲಕ ಓಡಿಸುವ ಯೋಚನೆಯನ್ನ ಮಾಡಿದ್ದರು. ಕೂಡಲೇ ಈ ಕುರಿತು ಇಂಟರ್‌ನೆಟ್‌ನಿoದ ಮಾಹಿತಿ ಕಲೆಹಾಕಿದ್ದು ಬ್ಯಾಟರಿ ಮೂಲಕ ಸೈಕಲ್‌ನ್ನ ಚಲಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಸೈಕಲ್‌ನಲ್ಲಿ 12 ವೋಲ್ಟ್ನ ಎರಡು ಬ್ಯಾಟರಿಗಳನ್ನ ಅಳವಡಿಸಲಾಗಿದ್ದು ಇವು 12 ವೋಲ್ಟ್ನ ಡಿಸಿ ಮೋಟಾರ್‌ಗೆ ವಿದ್ಯುತ್ ಒದಗಿಸುತ್ತವೆ. ಸೈಕಲ್‌ನ ಹಿಂಬದಿ ಚಕ್ರವನ್ನ ಚೈನ್ ಮೂಲಕ ತಿರುಗಿಸುವ ಪ್ರೀವ್ಹೀಲ್ ಪಕ್ಕದಲ್ಲಿಯೇ ಇನ್ನೊಂದು ಪ್ರೀವ್ಙೀಲ್‌ನ್ನ ಅಳವಡಿಸಲಾಗಿದ್ದು ಅದಕ್ಕೆ ಇನ್ನೊಂದು ಸಣ್ಣ ಚೈನ್ ಮೂಲಕ ಮೋಟಾರ್ ಸಂಪರ್ಕ ನೀಡಲಾಗಿದೆ.
ಮೋಟರಿನ ಸ್ವಿಚ್‌ನ್ನ ಬೈಕಿನ ಎಕ್ಸಿಲೇಟರ್ ಮಾದರಿಯಲ್ಲಿ ಸೈಕಲ್‌ನ ಹ್ಯಾಂಡಲ್‌ಗೆ ಜೋಡಿಸಲಾಗಿದ್ದು ಸೈಕಲ್ ಓಡಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಬ್ಯಾಟರಿಯಿಂದ ಮೋಟರ್ ಚಾಲನೆಯನ್ನ ಪ್ರಾರಂಭಿಸಲು ಕೀ ಒಂದನ್ನು ಅಳವಡಿಸಲಾಗಿದ್ದು ಅದನ್ನು ಆನ್ ಮಾಡಿದಾಗ ಮಾತ್ರ ಸೈಕಲ್ ಮೋಟರ್ ಸಹಾಯದಿಂದ ಚಲಿಸುತ್ತದೆ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಸೈಕಲ್‌ನಂತೆ ಪೆಡಲ್ ತುಳಿದು ಸಹ ಈ ಸೈಕಲ್‌ನ್ನು ಚಲಾಯಿಸಬಹುದಾಗಿದೆ. ಇನ್ನು ಬ್ಯಾಟರಿಯನ್ನ ತೆಗೆಯದೇ ಸೈಕಲ್‌ನಲ್ಲಿಯೇ ಇರಿಸಿ ಚಾರ್ಜ್ ಮಾಡಬಹುದಾಗಿದ್ದು ಸೈಕಲ್‌ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 3 ರಿಂದ 4 ಗಂಟೆಗಳು ತಗುಲಲಿದ್ದು ಒಮ್ಮೆ ಚಾರ್ಜ್ ಮಾಡಿದಲ್ಲಿ ಸುಮಾರು 25 ರಿಂದ 30 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು ಅಂತಾರೇ ವಿದ್ಯಾರ್ಥಿಗಳು.
ಇನ್ನು ಆನ್‌ಲೈನ್‌ನಲ್ಲಿ ಬ್ಯಾಟರಿ ಚಾಲಿತ ಸೈಕಲ್‌ಗಳಿಗೆ 30 ರಿಂದ 50 ಸಾವಿರದವರೆಗೆ ತಗುಲಲಿದ್ದು ವಿದ್ಯಾರ್ಥಿಗಳು ತಯಾರಿಸಿದ ಸೈಕಲ್‌ಗೆ 16 ರಿಂದ 18 ಸಾವಿರ ರೂಪಾಯಿ ವೆಚ್ಚ ತಗುಲಿದ್ದು ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಕಾರವಾರ