Big News
Trending

ಶೃಂಗಾರ ಸೌಂದರ್ಯದ ಅದ್ಬುತ ಶಿಖರ ಮುಳ್ಳಯ್ಯನ ಗಿರಿಧಾಮ:ಇದರ ಸೌಂದರ್ಯ ಹೇಗಿದೆ ನೋಡಿ

ಸಚಿತ್ರ ಲೇಖನ – ಉಮೇಶ ಮುಂಡಳ್ಳಿ ಭಟ್ಕಳ

ಅಬ್ಬ ನಾನೇನು ದೇವ ಲೋಕಕ್ಕೆ ಬಂದಿರುವೆನೆ, ಶಿವ ಪಾರ್ವತಿ ಲಕ್ಷ್ಮೀ ನಾರಾಯಣರು ಮಾತ್ರ ಕಾಣುತ್ತಿಲ್ಲ ಉಳಿದೆಲ್ಲವೂ ಕಣ್ಣಿಗೆ ಕಟ್ಟುತ್ತಿದೆ ಮನಸ್ಸಿಗೂ ನಾಟುತ್ತಿದೆ. ಎಷ್ಟು ಕಣ್ಣು ಹಾಯಿಸಿದರೂ ಹಾಲಿನ ಹೊಳೆಯಾಗಿ ಹರಿದಂತಿರುವ ಬೆಣ್ಣೆಯಂತೆ ಹೆಪ್ಪುಗಟ್ಟಿರುವ ಮುದ್ದಾದ ಮಂಜಿನ ಮುಸುಕುಗಳು.ಪ್ರೇಯಸಿಯಂತೆ ಕಿವಿಯಲ್ಲೇನೊ ಪಿಸುಗುಡುತ್ತಾ ಮುತ್ತಿಡಲು ಹಾತೊರೆಯುವ ತಂಪು ಗಾಳಿ.ತಂಪು ಗಾಳಿಯ ಅಪ್ಪುಗೆಯಲಿ ನಡುಗುತ್ತಲೇ ಅದೆಂತ ಸುಖಾನುಭವ.ಇನ್ನೇನು ತುಸು ಪ್ರಯಾಸ ಪಟ್ಟು ಕೈಚಾಚಿದರೂ ಆಗಸ ಮುಟ್ಟಬಲ್ಲೆ ಎಂಬ ಆತ್ಮವಿಶ್ವಾಸ ಮಧುರ ವಿಶಿಷ್ಟ ದಿವ್ಯ ಅನುಭವ. ಹೌದು  ನನಗಾದ ಈ ಅನುಭವ ನಿಮಗಾಗುವುದರಲ್ಲಿ ನನಗಂತೂ ಯಾವ ಅನುಮಾನವಿಲ್ಲ. ಈ ಎಲ್ಲ ಅನುಭವ ಸಾಧ್ಯವಾಗುವುದು   ಕಾಫಿ ನಾಡು ಎಂದು  ಪ್ರಸಿದ್ದಿ  ಪಡೆದಿರುವ  ಚಿಕ್ಕಮಗಳೂರು  ಜಿಲ್ಲೆಯಲ್ಲಿರುವ  ಮುಳ್ಳಯ್ಯನಗಿರಿ  ಬೆಟ್ಟದಲ್ಲಿ. ಈ ಬಗ್ಗೆ ಇನ್ನೂ ಕೆಲವನ್ನು ತಿಳಿಯೋಣ ಬನ್ನಿ.


ಚಿಕ್ಕಮಗಳೂರಿನಿಂದ ತಾಲೂಕು ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ಕಾಫಿ ಎಸ್ಟೆಟ್ ಮಾರ್ಗವಾಗಿ ಕಾಫಿ ತೋಟದ ಅಚ್ಚ ಹಸಿರನ್ನು  ಸವಿಯುತ್ತಾ ಸಂಚರಿಸಿದರೆ ದ್ರೋಣ ಪರ್ವತ ಸೀತಾಯ್ಯನ ಬೆಟ್ಟ ಮುಳ್ಳಯ್ಯನಗಿರಿ ಬೆಟ್ಟಗಳ ಸಾಲು  ತಣ್ಣನೆಯ ಗಾಳಿ ಜೊತೆಗೆ ಬೆಳ್ಳಿ ಮೋಡ ಗಳೊಂದಿಗೆ  ಪ್ರವಾಸಿಗರನ್ನು  ಆಕರ್ಷಿಸುತ್ತದೆ.

ಮುಳ್ಳಯ್ಯನಗಿರಿಗೆ ತೆರಳುವ ಚಾರಣಿಗರಿಗೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಮಳೆ ಇರದ ಕಾರಣ ಚಾರಣ ಮಾಡಲು ಉತ್ತಮ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ.ಹೌದು ಜನವರಿ ಹತ್ತರಂದು ನಾನು ನಮ್ಮ ಯೂನಿಯನ್ ಸಭೆಯ ಕಾರಣ ಚಿಕ್ಕಮಗಳೂರು ಹೊರಟಿದ್ದೆ.ಪೂರ್ವ ನಿರ್ಧಾರದಂತೆ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ನನ್ನ ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಬೆನಕ ವಸತಿ ಗೃಹ ದಲ್ಲಿ ವಾಸ್ತವ್ಯ ಮಾಡಿದ್ದೆ. ಬೆಳಿಗ್ಗೆ ೫ ಗಂಟೆಗೆ ನಾವು ಮುಳ್ಳಯ್ಯನ ಗಿರಿ ಬೆಟ್ಟಕ್ಕೆ ತೆರಳುವ ನಿರ್ಧಾರವೂ ಆಯಿತು. ಪೂರ್ವನಿರ್ಧಾರದಂತೆ ನಸುಕಿನಲ್ಲೆ ಎದ್ದು ನಾವು ಐವರು ಮುಳ್ಳಯ್ಯನ ಗಿರಿ ಕಡೆಗೆ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು.

ಮುಳ್ಳಯ್ಯನ ಗಿರಿ ಈ ಹೆಸರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ರಾಜ್ಯದಲ್ಲೇ  ಅತೀ  ಎತ್ತರ  ಗಿರಿಧಾಮ  ಎಂಬ ಖ್ಯಾತಿಯನ್ನು  ಪಡೆದಿರುವ ಈ ಗಿರಿಧಾಮ    ಸಮುದ್ರ ಮಟ್ಟದಿಂದ  ಸರಿ ಸುಮಾರು  6330  ಅಡಿಗಳಷ್ಟು ಎತ್ತರದಲ್ಲಿದೆ  ಆದುದರಿಂದಲೇ ಇದು  ಚಾರಣಿಗರಿಗೆ  ಹೇಳಿಮಾಡಿಸಿದ  ಸ್ಥಳವಾಗಿದೆ. ಪ್ರಕೃತಿ ಪ್ರೀಯರಿಗೆ ಛಾಯಾಗ್ರಾಹಕರಿಗೆ ಇದು ಸ್ವರ್ಗ. ಬೆಟ್ಟದ  ಬುಡದಲ್ಲಿ ನಿಂತು  ತಲೆ ಎತ್ತಿ ಮೇಲೆ  ನೋಡಿದರೆ  ಮೋಡಗಳು  ತನ್ನ ಬಾಹುಗಳಲ್ಲಿ ಗಿರಿಶಿಖರವನ್ನು ಅಪ್ಪಿಕೊಂಡಿರಬಹುದು ಅನ್ನಿಸತ್ತದೆ. ಬೆಟ್ಟವೇರಿ ನೋಡಿದ ಮೇಲೆ ಎಲ್ಲೆಲ್ಲೂ ಬೆಟ್ಟಗಳ ಸಾಲು ಕಣ್ಣಿಗೆ ಹಬ್ಬ ತರುತ್ತದೆ.ನಾವು ಬೆಳಂಬೆಳಗ್ಗೆ ಹೊರಟಿರುವುದರಿಂದ   ಸುತ್ತಲೂ ಮಂಜಿನ ಹನಿಗಳು ಹಾಲಿನ ಮೋಡವೇ ಆಗಿ ಆವರಿಸಿಕೊಂಡಂತೆ  ಅನುಭವವಾಯಿತು.

ಇಲ್ಲಿನ ಗಿರಿಶಿಖರವನ್ನು ಹತ್ತುವಾಗಲಂತೂ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಅನ್ನಿಸುತ್ತದೆ. ನನ್ನ ಸೆಳೆದ ಈ ಮುಳ್ಳಯ್ಯನಗಿರಿ ಅನ್ನೋ ಹೆಸರು ನಿಮ್ಮನ್ನೂ ಆಕರ್ಷಿಸಿಸದೆ ಇರಲಾರದು. ಒಂದು ಸಲ ಆ ನೆಲಕ್ಕೆ ಕಾಲಿಟ್ಟರೆ ಈ ಊರು ಬಹುಬೇಗ ನಿಮ್ಮನ್ನೂ ಬಿಟ್ಟು ಹೋಗದು.

ಕಿರಿದಾದ ಮಾರ್ಗ ಕಾರು ಬೈಕ್ ಗಳ ಹಾರನ್ ಸದ್ದು ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ  ಜೊತೆಗೆ ಸಣ್ಣಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಈ ಕಂದಕಗಳೆಲ್ಲವೂ ಮಂಜಿನಿಂದ ಆವರಿಸಿ ಹಾಲಿನ ಹೊಳೆಯಂತೆ ಕಾಣುತ್ತವೆ. ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು  ಇದರಲ್ಲಿ ಸಂಚರಿಸುವಾಗ ಮೈ ಜುಮ್ಮೆನ್ನುವ ರೋಮಾಂಚಕ ಅನುಭವವಾಗುತ್ತದೆ.ಈ ಅನುಭವಕ್ಕೆ ತುಸು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ ಅನ್ನಿಸುತ್ತದೆ. 

ಮುಳ್ಳಯ್ಯನಗಿರಿ ತಲುಪುವ ಮೊದಲು ಸಿಗುವ ಸ್ಥಳ ಶೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಶೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಶೀತಾಳಯ್ಯನ ಗಿರಿ ಎಂದು ಹೆಸರು ಬಂದಿದೆ ಎನ್ನುತ್ತಾರೆ ಸ್ಥಳಿಯರು.ಈ ಸೀತಾಳಯ್ಯನ ಬೆಟ್ಟದಲ್ಲಿ  ಈಶ್ವರನ ದೇವಾಲಯ ಇದೆ. ಇಲ್ಲಿಂದ ಪೂರ್ವದಿಕ್ಕಿನ   ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಳಯ್ಯನ ಗಿರಿ ಶಿಖರದ ಕಲಶ ನಮಗೆ ಕಾಣಸಿಗುತ್ತದೆ.

ಈ ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು ನಂತರದ ಅನುಭವಕ್ಕಾಗಿ  ನಾವು 300ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕು. ಇದರಲ್ಲಿ ಸಿಗುವ ರೋಚಕ ಅನುಭವ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಬಲವಾಗಿ ಬೀಸುವ ಗಾಳಿ ಅವುಗಳನ್ನು ಸೀಳಿಕೊಂಡು ಮುನ್ನುಗುವ ಅನುಭವವೇ ರೋಚಕ, ಈ ಚಳಿಗಾಳಿಗೆ ಒಮ್ಮೆ ಮೈಯೊಡ್ಡಿ ನಿಂತರಂತೂ ಹಿತವಾದ ಅನುಭವ. ಚಿಕ್ಕಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಕೂಡ ಈ ಬೆಟ್ಟವನ್ನು ಪ್ರಯಾಸದಿಂದ ಏರುವುದನ್ನು ಕಾಣಬಹುದು. ನಾನೂ ಬೆಟ್ಟದ ತುದಿ ತಲುಪಬೇಕು ಎನ್ನುವ ಛಲ, ಇವೆಲ್ಲವನ್ನು ದಾಟಿ ಬೆಟ್ಟದ ತುದಿಗೆ ತಲುಪಿದಾಗ ಸಿಗುವುದೇ ಶ್ರೀ ಗುರು ಮುಳ್ಳಯ್ಯ ಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ದೇವಾಲಯದ ಆವರಣದಲ್ಲಿ ಬಂದು ನಿಂತಾಗಲೂ ಕಿವಿಯಲ್ಲಿ ಗುಯ್ ಎನ್ನುವ ಗಾಳಿಯ ನಿನಾದ ಹೊರಹೊಮ್ಮುತ್ತಿರುತ್ತದೆ.  ಸೂರ್ಯೋದಯವನ್ನು ಈ ಬೆಟ್ಟದಲ್ಲಿ ನೋಡುವುದೇ ಒಂದು ಭಾಗ್ಯ ಎನ್ನಬಹುದು.

ಸೂರ್ಯನನ್ನ ಪ್ರಕೃತಿಯೇ ತನ್ನ ಕೈಯಾರಿ ಎತ್ತಿ ಮುದ್ದಾಡುತ್ತಿರುವಂತೆ ಒಂದು ಕ್ಷಣ ಭಾಸವಾಗುವುದು. ಅರೆಕ್ಷಣ ಹಾಲಿನ ಹೊಳೆಯಂತೆ ಕಾಣುವ ಮೋಡಗಳು,  ಬಿಸಿಲು  ಬೀಳ ತೊಡಗಿದ್ದಂತೆ ಮೋಡಗಳೆಲ್ಲ ಒಮ್ಮೆಲೆ ಓಡೋಡಿ ಹೋಗುವ ದೃಶ್ಯ ಯಾರೋ ಈ ಶಿಖರಕ್ಕೆ ಕೃತಕವಾಗಿ ಬೆಳಕು ಬಿಡುತ್ತಿದ್ದಾರೊ ಎನ್ನುವಂತೆ ಹೊಳೆಯುವ ಬೆಟ್ಟ. ಹೀಗೆ ಬೆಳಿಗ್ಗೆ ಸೂರ್ಯೋದಯ ಆದಾಗಿನಿಂದ ಮಧ್ಯಾಹ್ನ ವರೆಗೆ ಒಂದೇ ಬೆಟ್ಟದಲ್ಲಿ ಮೂರು ನಾಲ್ಕು ರೀತಿಯಲ್ಲಿ  ಪಕೃತಿ ನಳನಳಿಸುವುದನ್ನು ನಮ್ಮ ಕಣ್ಣಾರೆ ನಾವು ಮುಳ್ಳಯ್ಯನಗಿರಿಯಲ್ಲಿ ನೋಡಬಹುದಾಗಿದೆ. ಮಳೆಗಾಲದಲ್ಲಿ ಪ್ರಯಾಣ ತುಸು ಕಷ್ಟವಾದರೂ ಇನ್ನಷ್ಟು  ವಿಶಿಷ್ಟ ಅನುಭವವನ್ನು ಕಾಣಬಹುದಾಗಿದೆ.

ಈ ಗಿರಿಧಾಮಕ್ಕೆ ಭೇಟಿ ನೀಡಿದವರಿಗೆಲ್ಲ   ನಿಸರ್ಗದ ಈ ವಿಸ್ಮಯದ ಅನುಭವ ಖಂಡಿತ ಆಗಿರಲೇಬೇಕು. ಒಂದು ವೇಳೆ ನೀವೇನಾದರೂ  ಈ ಗಿರಿಧಾಮಕ್ಕೆ ಭೇಟಿ ನೀಡಿಲ್ಲವಾದಲ್ಲಿ ಒಮ್ಮೆ ಬಿಡುವು ಮಾಡಿಕೊಂಡಾದರೂ ಚಿಕ್ಕಮಗಳೂರು ಜಿಲ್ಲೆಯನ್ನು ಸುತ್ತಿ ಮುಳ್ಳಯ್ಯನಗಿರಿಯ ನಿಸರ್ಗದ ಸ್ಪರ್ಶವನ್ನು ಅನುಭವಿಸಿ ಈ ದಿವ್ಯಾನುಭವವನ್ನು ಪಡಿಯಿರಿ ಎನ್ನುವೆ ಲೇಖಕನಾಗಿ.

Back to top button