ದೋಣಿಗಳಲ್ಲಿ ತೆರಳಿ ದೇವರ ದರ್ಶನ ಪಡೆದ ಅಪಾರ ಭಕ್ತರು
ಕಳೆದೆರಡು ವರ್ಷಗಳ ಹಿಂದೆ ದೋಣಿದುರಂತದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮ
ಕಾರವಾರ: ಸಮುದ್ರದ ನಡುಗಡ್ಡೆಯಲ್ಲಿ ನಡೆಯುವ ವಿಶೇಷ ಜಾತ್ರೆ. ದ್ವೀಪ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಜಾತ್ರೆಗೆ ನೂರಾರು ಭಕ್ತರು ದೋಣಿಗಳಲ್ಲಿ ತೆರಳಿ ದೇವರ ದರ್ಶನ ಪಡೆದುಕೊಳ್ಳುವುದೇ ವಿಶಿಷ್ಟ ಅನುಭವ. ಆದ್ರೆ ಕಳೆದೆರಡು ವರ್ಷಗಳ ಹಿಂದೆ ದೋಣಿ ದುರಂತ ಉಂಟಾಗಿ ಸಾವು ನೋವು ಸಂಭವಿಸಿದ್ದರಿಂದಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಜಾತ್ರೆಗೆ ಅವಕಾಶ ನೀಡಲಾಗಿತ್ತು.
ಒಂದೆಡೆ ತಳಿರು ತೋರಣ, ಹೂವಿನ ಹಾರಗಳಿಂದ ಮಧುವಣಗಿತ್ತಿಯಂತೆ ಸಿದ್ಧವಾಗಿರುವ ಬೋಟುಗಳು. ಇನ್ನೊಂದೆಡೆ ಜಾತ್ರೆಗೆ ತೆರಳಲು ತಂಡೋಪತಂಡವಾಗಿ ಆಗಮಿಸುತ್ತಿರುವ ಜನರು. ಮತ್ತೊಂದೆಡೆ ಲೈಫ್ ಜಾಕೆಟ್ ಕಡ್ಡಾಯವಾಗಿ ಧರಿಸಿಯೇ ಬೋಟುಗಳಲ್ಲಿ ತೆರಳುವಂತೆ ಮುಂಜಾಗ್ರತೆ ವಹಿಸುತ್ತಿರುವ ಪೊಲೀಸರು. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ ಬಂದರಿನಲ್ಲಿ. ಮೀನುಗಾರರ ಆರಾಧ್ಯದೈವ ಎಂದೇ ಕರೆಸಿಕೊಳ್ಳುವ ನರಸಿಂಹ ದೇವರ ಜಾತ್ರೆ ಪ್ರತಿವರ್ಷದಂತೆ ಈ ಬಾರಿ ಸಹ ಅದ್ದೂರಿಯಾಗಿ ನಡೆಯಿತು.
ಕಾರವಾರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಜರುಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬೋಟುಗಳಲ್ಲಿ ತೆರಳುವ ಹಿನ್ನಲೆ ಮೀನುಗಾರರು ಮಾತ್ರ ಅಲ್ಲದೆ ಸಾಕಷ್ಟು ಜನರು ಜಾತ್ರೆಗೆ ಆಗಮಿಸುತ್ತಾರೆ. ಆದ್ರೆ ಕಳೆದೆರಡು ವರ್ಷಗಳ ಹಿಂದೆ ಜಾತ್ರೆಗೆ ತೆರಳಿ ಆಗಮಿಸುತ್ತಿದ್ದ ವೇಳೆ ದೋಣಿಯೊಂದು ಸಮುದ್ರದಲ್ಲಿ ಪಲ್ಟಿಯಾಗಿದ್ದು 16 ಮಂದಿ ಜಲಸಮಾಧಿಯಾಗಿದ್ದರು.
ಈ ಹಿನ್ನಲೆ ಈ ಬಾರಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನ ಕೈಗೊಂಡಿದ್ದು 9 ಪರ್ಸಿನ್ ಹಾಗೂ 19 ಟ್ರಾಲರ್ ಬೋಟುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅಲ್ಲದೇ ಕೇವಲ ಬೈತಕೋಲ ಬಂದರಿನಿಂದ ಮಾತ್ರ ಜನರನ್ನ ಕರೆದೊಯ್ಯಲು ಅವಕಾಶ ನೀಡಿದ್ದು ಭಕ್ತರು ಲೈಫ್ ಜಾಕೆಟ್‍ಗಳನ್ನ ಧರಿಸಿಯೇ ಬೋಟುಗಳಲ್ಲಿ ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಸಾಕಷ್ಟು ಮಂದಿ ಭಕ್ತರು ಯಾವುದೇ ಆತಂಕವಿಲ್ಲದೇ ದ್ವೀಪ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಇನ್ನು ನರಸಿಂಹ ದೇವರಿಗೆ ಬಾಳೆ ಗೊನೆ ಸೇವೆ ನೀಡುವುದು ವಿಶೇಷವಾಗಿದ್ದು ದೇವರಲ್ಲಿ ಹರಕೆ ಹೊತ್ತುಕೊಂಡರೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.
ಇನ್ನು ಕೊರೊನಾ ಹಿನ್ನಲೆ ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲವಾಗಿದ್ದು ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೇ ಕಳೆದ ಬಾರಿ ದುರಂತ ಸಂಭವಿಸಿದ ಹಿನ್ನಲೆ ಜಾತ್ರೆಗೆ ತೆರಳುತ್ತಿರುವ ಪ್ರತಿಯೊಬ್ಬರ ಹೆಸರನ್ನೂ ನೋಂದಾಯಿಸಿಕೊಳ್ಳಲಾಗುತ್ತಿದ್ದು ದ್ವೀಪದಲ್ಲೂ ಸಹ ಬೋಟುಗಳಿಂದ ಜನರನ್ನ ಸುರಕ್ಷಿತವಾಗಿ ದಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗಿತ್ತು.
ಒಟ್ಟಾರೇ ಹಿಂದೆ ನಡೆದ ಕರಾಳ ದುರಂತ ಹಾಗೂ ಕೊರೊನಾ ಆತಂಕದ ನಡುವೆ ದ್ವೀಪ ದೇವರ ಜಾತ್ರೆ ಸಾಂಗವಾಗಿ ನೆರವೇರಿದ್ದು ಕಟ್ಟುನಿಟ್ಟಿನ ಭದ್ರತಾ ಕ್ರಮಗಳಿಂದಾಗಿ ಜಾತ್ರೆಗೆ ಸೇರುತ್ತಿದ್ದ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿದ್ದಂತೂ ಸತ್ಯ.
ವಿಸ್ಮಯ ನ್ಯೂಸ್, ಕಾರವಾರ