ಯಲ್ಲಾಪುರ ಅರೆಬೈಲ್ ಬಳಿ ಕುಸಿಯುತ್ತಲೇ ಇದೆ ರಸ್ತೆ: ಭಯದ ವಾತಾವರಣ: ಅಂಕೋಲಾ -ಹುಬ್ಬಳ್ಳಿ ಸುಗಮ ಸಂಚಾರಕ್ಕೆ ಮತ್ತೆ 2-3 ದಿನದ ವಿಳಂಬ? ಸಚಿವ ಹೆಬ್ಬಾರ ಹೇಳಿದ್ದೇನು?
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63 ಅಂಕೋಲಾ -ಹುಬ್ಬಳ್ಳಿ ಮಾರ್ಗದ ಮಧ್ಯೆ, ಯಲ್ಲಾಪುರ ಸಮೀಪದ ಅರೆಬೈಲ್ ಘಾಟ್ ಬಳಿ ,ಮತ್ತೆ ಮತ್ತೆ ಭೂಕುಸಿತ ಕಾಣಿಸಿಕೊಳ್ಳುತ್ತಿದ್ದು,ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿದ್ದು,ಈ ಪ್ರದೇಶ ಕಂದಕದಂತೆ ಕಂಡುಬಂದು,ಹತ್ತಿರ ಹೋಗಿ ನೋಡಲೂ ಭಯಪಡುವಂತಾಗಿದೆ. ಭೂಕುಸಿತ ಪ್ರದೇಶದ ಆಜುಬಾಜು ಗಳಲ್ಲಿ ಹೆದ್ದಾರಿಯ ಮಧ್ಯೆ ಅಲ್ಲಲ್ಲಿ ಬಿರುಕು ಕಂಡು ಬಂದಿದ್ದು,ಯಾವುದೇ ಸಮಯದಲ್ಲಿ ರಸ್ತೆ ಮತ್ತಷ್ಟು ಕುಸಿಯವ ಅಪಾಯವಿದೆ.
ಭೂಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದ್ದು,ಮುಂದಿನ ಎರಡು ಮೂರು ದಿನಗಳು ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.ಈ ಕುರಿತು ಪ್ರತಿಕ್ರಿಯಿಸಿದ ಯಲ್ಲಾಪುರ ಕ್ಷೇತ್ರದ ಶಾಸಕ ಹಾಗೂ ಕಾರ್ಮಿಕ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ್ ಹೆಬ್ಬಾರ್ ಮಾತನಾಡಿ,ಪ್ರಕೃತಿ ಮುನಿಸಿನಿಂದ ಹೀಗಾಗಿದ್ದು ಜನರ ಜೀವರಕ್ಷಣೆ ಸವಾಲು ಸರ್ಕಾರಕ್ಕಿದೆ.
ಇದೇ ವೇಳೆ ಭೂಕುಸಿತ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ಕೈಗೊಂಡು ಹೆದ್ದಾರಿ ಸಂಚಾರ ಆರಂಭಿಸಲೇಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ,ಜುಲೈ 25ರಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಸಂಬಂಧಿಸಿದ ಇಲಾಖೆಗಳ ಉನ್ನತಮಟ್ಟದ ತಂಡ ಸ್ಥಳಕ್ಕೆ ಭೇಟಿ ನೀಡಲಿದ್ದು,ಸಮಾಲೋಚಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದೆಂದರು.
ರವಿವಾರದಂದು ಸಣ್ಣ ವಾಹನಗಳ ಓಡಾಟಕ್ಕೆ ಆದರೂ ಅನುವು ಮಾಡಿಕೊಟ್ಟು,ನಂತರದ ಒಂದೆರಡು ದಿನಗಳಲ್ಲಿ ಬಾರಿ ವಾಹನಗಳ ಓಡಾಟಕ್ಕೂ ವ್ಯವಸ್ಥೆ ಕಲ್ಪಿಸಿ,ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 63 ರ ಸಂಚಾರ ವ್ಯತ್ಯಯದಿಂದ,ಕಳೆದೆರಡು ದಿನಗಳಿಂದ ಅಂಕೋಲಾದ ಬಾಳೇಗುಳಿ ಮತ್ತಿತರೆಡೆ ಸಾಲು ಸಾಲಾಗಿ ನಿಂತಿರುವ ಸಾವಿರಾರು ವಾಹನಗಳು ಮತ್ತೆ ಕಾಯಬೇಕಾದ ಅನಿವಾರ್ಯತೆ ಇದೆ.
ಹಾಲು, ದಿನಪತ್ರಿಕೆ,ತರಕಾರಿ , ಕಿರಾಣಿ ಸಾಮಾನುಗಳು ಸೇರಿ ಅಗತ್ಯವಸ್ತು ಮತ್ತು ಸೇವೆಗಳ ಸಾಗಾಟಕ್ಕೂ ತೊಡಕಾಗಿದೆ.ಅಂಕೋಲಾ ಹುಬ್ಬಳ್ಳಿ ಮಾರ್ಗವಾಗಿ ಹೋಗಿ -ಬರುವ ಎಲ್ಲಾ ಸ್ತರದ ಪ್ರಯಾಣಿಕರು,ವಾಹನ ಸವಾರರು ರಾ.ಹೆ ಸುಗಮ ಸಂಚಾರಕ್ಕೆಮತ್ತೆ ಎರಡು-ಮೂರು ದಿನ ಕಾಯಲೇ ಬೇಕಾದ ಅನಿವಾರ್ಯತೆ ಇದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.