ಕಾರವಾರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದಲ್ಲಿ ನಗರದ ಹಿಂದೂ ಹೈಸ್ಕೂಲ್ ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಆಹಾರ ಮೇಳ ಹಾಗೂ ಕನ್ನಡ ನಾಡಿನ ವೇಷ ಭೂಷಣಗಳ ಉಡುಗೆ ತೊಡುಗೆಗಳ ಪ್ರದರ್ಶನ ಗಮನ ಸೆಳೆಯಿತು.
ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ಹಾಗೂ ಶಿಕ್ಷಕರು ತಾವು ತಯಾರಿಸಿದ ಮತ್ತು ಮನೆಯಲ್ಲಿ ತಯಾರು ಮಾಡಿ ತಂದ ಕರಾವಳಿ, ಉತ್ತರಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ವಿವಿಧ ಬಗೆಯ ಖಾದ್ಯಗಳ ವಿಭಿನ್ನವಾಗಿ ಪ್ರದರ್ಶಿಸಿದರು. ಪ್ರಮುಖವಾಗಿ ಮೀನು ಹಾಗೂ ಚಿಕನ್ ಖಾದ್ಯಗಳು, ರಾಗಿ ಮುದ್ದೆ, ಜೋಳದ ರೊಟ್ಟಿ, ಕಾಳು ಪಲ್ಯ, ವಿವಿಧ ಬಗೆಯ ಸ್ವೀಟ್, ಉಪ್ಪಿನಕಾಯಿ, ಹೋಳಿಗೆ ತುಪ್ಪ, ಉಪ್ಪಿಟ್ಟು, ಕೇಸರಿ, ನೀರು ದೋಸೆ ಸೇರಿದಂತೆ 150ಕ್ಕೂ ಹೆಚ್ಚಿನ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.ಮಾತ್ರವದಲ್ಲದೆ ಇದೇ ವೇಳೆ ಕನ್ನಡ ನಾಡಿನ ಉಡುಗೆ ತೋಡುಗೆಗಗಳ ವೇಷಭೂಷಣ ಕೂಡ ಗಮನ ಸೆಳೆಯಿತು.
ಉತ್ತರಕರ್ನಾಟಕ ಭಾಗದ ವಿವಿಧ ಶೈಲಿಯ ಉಡುಗೆಗಳನ್ನು ಉಟ್ಟು ಬಂದಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.ಇನ್ನು ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯ್ಕ ಮಾತನಾಡಿ, ಹಿಂದಿನ ಕಾಲದ ಆಚಾರ ವಿಚಾರ ಉಡುಗೆ ತೊಡುಗೆಗಗಳು ಹಾಗೂ ಆಹಾರಗಳು ನಮಗೆ ಹಾಗೂ ಮುಂದಿನ ಪಿಳಿಗೆಗೆ ಮಾದರಿಯಾಗಬೇಕಿದೆ. ಆದರೆ ಇಂದು ಅದೆಲ್ಲವೂ ಮರೆಯಾಗುತ್ತಿದ್ದು ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಬಳಿಕ ಆಹಾರ ಮೇಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ಎನ್.ಎಸ್ ನರೋನಾ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲದೆ ವಿದ್ಯಾರ್ಥಿಗಳು ತಂದ ಆಹಾರ ಪದಾರ್ಥಗಳ ಸವಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ನರೇಂದ್ರ ದೇಸಾಯಿ, ಅರುಣ್ ರಾಣೆ, ಸುರೇಶ ಗಾಂವಕರ್, ಗಣೇಶ ಭೀಷ್ಠಣ್ಣನವರ ಉಪಸ್ಥಿತರಿದ್ದರು.