ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿಶ್ಲೇಷಣೆ ಮತ್ತು ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ
ಕುಮಟಾ: ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿಶ್ಲೇಷಣೆ ಮತ್ತು ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ನಮ್ಮ ಉತ್ತರ ಕನ್ನಡ ಜಿಲ್ಲೆಯ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಂದ ಸುಮಾರು 85 ಶಿಕ್ಷಕರು ರಾಷ್ಟ್ರೀಯ ಶಿಕ್ಷಣ ನೀತಿ-2020ರ ವಿಶ್ಲೇಷಣೆ ಮತ್ತು ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶಿವಮೊಗ್ಗದ ಪ್ರಾಂಶುಪಾಲರಾದ ಶ್ರೀ ಗುರುರಾಜರವರು ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮಾನ್ಯ ಕುಮಟಾ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ ರವರು ‘ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರು ಈ ತರಬೇತಿಯ ಮೂಲಕ ಆಳವಾದ ಜ್ಞಾನವನ್ನು ಪಡೆದುಕೊಳ್ಳುವಂತಾಗಲಿ ಎಂದು ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಕುಮಟಾ ಡಯಟ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಈಶ್ವರ ನಾಯ್ಕರವರು ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೆ ಶ್ರೀ ಮಠವು ಕಾರ್ಯಾಗಾರವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕಮಲಾ ಬಾಳಿಗಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಪ್ರೀತಿ ಭಂಢಾರ್ಕರ್ ರವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಮುಂಬರುವ ದಿನಗಳಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಶಿಕ್ಷಕರೆಲ್ಲರೂ ಯಶಸ್ವಿಯಾಗಲೆಂದು ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ|| ಹರಿಪ್ರಸಾದ ಜಿ. ವಿ, ಹಿರಿಯ ಉಪನ್ಯಾಸಕರು, ಡಯಟ್, ಶಿವಮೊಗ್ಗ ‘ರಾಷ್ಟ್ರೀಯ ಶಿಕ್ಷಣ ನೀತಿಯ ರೂಪುರೇಷೆ’ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ, ಶಿಕ್ಷಕರೊಂದಿಗೆ ಸಂವಾದದ ಮೂಲಕ, ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಈ ಸಂಧರ್ಭದಲ್ಲಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಲೀನಾ ಎಂ. ಗೊನೇಹಳ್ಳಿ, ವಿದೂಷಿ ರಂಜನಾ, ಪೂಜಾ ಭಟ್, ಶ್ರೀಮತಿ ನಿರ್ಮಲಾ ಪ್ರಭು, ಶ್ರೀಧರ ಭಟ್ , ಚಿತ್ರ ನಿರ್ದೇಶಕ ಕಾರ್ತಿಕ ಸರಗೂರ್ ಮುಂತಾದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ