Big News
Trending

ಕಾನನದ ಮಾವಿನ ಮರದ‌ ಕೆಳಗೊಂದು ವಿಭಿನ್ನ ಮದುವೆ: ಕನ್ನಡ, ಇಂಗ್ಲೀಷ್, ಮರಾಠಿ ಭಾಷೆಯಲ್ಲಿ ಹೇಳಿದ ಮಾಂಗಲ್ಯ ಮಂತ್ರ ?ರಾಷ್ಟ್ರ ಕವಿ ಕುವೆಂಪು ಮದುವೆ ಆದದ್ದು ಹೇಗೆ?

ಅಂಕೋಲಾ: ಅದೊಂದು ಸರಳ ಸುಂದರ ವಿವಾಹ ಸಮಾರಂಭ. ಕಲ್ಯಾಣ ಮಂಟಪದ ಅನಿವಾರ್ಯತೆ, ಬ್ಯಾಂಡ್ ಸದ್ದುಗಳ ಗದ್ದಲವಿಲ್ಲದ ಅಪರೂಪದ ವಿವಾಹ ಮಹೋತ್ಸವ.

ಇಲ್ಲಿ ಗಿಡ ಮರಗಳೇ ಚಪ್ಪರ, ಸುಂದರ ಲತೆ – ಬಳ್ಳಿಗಳು ಹಾಗೂ ನಿಸರ್ಗದತ್ತ ಕೊಡುಗೆಗಳೇ ಭವ್ಯ ಅಲಂಕಾರ.ಯಕ್ಷಗಾನದ ಚಂಡೆ ಮದ್ದಲೆಗಳ ಇಂಪಾದ ಹಾಡುಗಾರಿಕೆ, ಕೊಳಲು ವಾದನ,ಪಕ್ಷಿಗಳ ಕಲರವವೇ ರಸಮಂಜರಿ. ಇಂಥ ಒಂದು ಸರಳ ಸುಂದರ ಮದುವೆಗೆ ಅಂಕೋಲಾ ತಾಲೂಕಿನ ಅಂಗಡಿಬೈಲ್ ಎಂಬ ಪ್ರಶಾಂತ ಪರಿಸರದ ಹಳ್ಳಿ ಸಾಕ್ಷಿಯಾಯಿತು.

ನಾಡಿನ ಖ್ಯಾತ ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ ಹಾಗೂ ಶಾಂತಿ ನಾಯಕ ಅವರ ಮೊಮ್ಮಗನ ವಿವಾಹ ಸಮಾರಂಭ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಡಾ.ಸವಿತಾ ನಾಯಕ ಹಾಗೂ ಉದಯ ನಾಯಕ ಅವರ ಮಗ ಆತ್ಮೀಯ ಅವರ ಮದುವೆ ಮಾಧವಿಯೊಂದಿಗೆ ಅಂಗಡಿಬೈಲಿನ ಕಾನನದ ನಡುವೆ ಇರುವ ಮನೆಯ ಬಳಿ ನಡೆಯಿತು.

ಮಾವಿನ ಮರದ ಕೆಳಗೆ ನಿರಾಡಂಬಲತೆಯಿಂದ ನಡೆದ ಈ ಮದುವೆ, ಕುವೆಂಪು ಅವರ ಮಂತ್ರ ಮಾಂಗಲ್ಯದ ಪರಿಕಲ್ಪನೆಯೊಂದಿಗೆ ನಡೆದಿದ್ದು, ರಾಷ್ಟ್ರಕವಿ ಕುವೆಂಪು ಹಾಗೂ ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹ ಇದೇ ಮಾದರಿಯಲ್ಲಿ ನಡೆದಿತ್ತು ಎನ್ನುವುದನ್ನು ಸ್ಮರಿಸಿ, ಈ ವಿವಾಹ ನಡೆದಿದೆಯಂತೆ.

ಇದೀಗ ಅಂಕೋಲಾದಲ್ಲಿ ಮಂತ್ರ ಮಾಂಗಲ್ಯ ಎಂಬ ವಿಶಿಷ್ಟ ಮದುವೆ ಸಮಾರಂಭ ನಡೆದಿದೆ. ಈ ಮದುವೆಯಲ್ಲಿ ಮಂತ್ರಗಳ ಬದಲಿಗೆ ವಿವಾಹ ಸಂಹಿತೆಯನ್ನು ಕನ್ನಡಲ್ಲಿ ಕವಿಯತ್ರಿ ಅಕ್ಷತಾ ಕೃಷ್ಣ ಮೂರ್ತಿ, ಮರಾಠಿಯಲ್ಲಿ ಕನ್ನಡದ ಗೀತಾ ಸಿನೆಮಾ ನಾಯಕಿ ಅಕ್ಷತಾ ರಾವ್, ಇಂಗ್ಲಿಷ್ ಭಾಷೆಯಲ್ಲಿ ಲಿಂಗ ಸಮಾನತೆ ಆಧಾರಿತ ಯಶಸ್ವಿ ನಾಟಕ ನಿರ್ದೇಶಕಿ ಶರಣ್ಯಾ ಓದುವ ಮೂಲಕ ಮದವೆ ನೆರವೇರಿತು.

ಇಪ್ಪಳಿ ಹೂವಿನ ಮಾಲೆಯನ್ನು ವಧು ವರರು ಬದಲಾಯಿಸಿ ಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇರಿಸಿದರು.
ಇಲ್ಲಿ ವೇದಿಕೆ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ನಿಭಾಯಿಸಿದ್ದು ಕುಟುಂಬ ವರ್ಗದವರೇ ಹೆಚ್ಚಿದ್ದಾರೆ.

ಹುರಿ ಅಕ್ಕಿ ಉಂಡೆ, ಕಬ್ಬಿನ ಹಾಲಿನ ಜೊತೆಯಲ್ಲಿ ಸಾಂಪ್ರದಾಯಿಕ ದೇಸಿಯ ಅಡುಗೆ, ಉಡುಗೆ ಎಲ್ಲದರಲ್ಲೂ ಹಳ್ಳಿಯ ಗಟ್ಟಿತನ ಅಡಗಿದಂತಿತ್ತು. ಲಕ್ಷಗಟ್ಟಲೆ ಹಣ ಸುರಿದು ನಡೆಯುವ ಅದ್ಧೂರಿಯ ವಿವಾಹ, ಕಲ್ಯಾಣ ಮಂಟಪಕ್ಕೆ ಪೈಪೋಟಿ, ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಸಾಧ್ಯವೇ ಎಂಬ ಪರಿಸ್ಥಿತಿ ನಡುವೆ ಇಂತಹ ಅಪರೂಪದ ಸರಳ ಸುಂದರ ಮದುವೆ ಎಲ್ಲವನ್ನೂ ಮೀರಿಸುವಂತಿತ್ತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button