ನಾಟಕದಲ್ಲಿ ಪಾತ್ರ ನಿರ್ವಹಣೆಯಲ್ಲಿ ತೊಡಗಿದ್ದಾಗಲೆ ಕುಸಿದುಬಿದ್ದ ಕಲಾವಿದ: ತೀವ್ರ ಹೃದಯಾಘಾತದಿಂದ ಸಾವು
ಅಂಕೋಲಾ ; ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎಂಬ ಮಾತಿನಂತೆ ಜೀವನವೆಂಬ ನಾಟಕ ರಂಗದಲ್ಲಿ ನಾವೆಲ್ಲ ಪಾತ್ರಧಾರಿಗಳು ಮಾತ್ರ ಎನ್ನುವುದು ಅಕ್ಷರಶಹ ಸತ್ಯ ಎನ್ನುವಂತೆ ರಂಗಭೂಮಿಕೆಯಲ್ಲಿ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದ ಹವ್ಯಾಸಿ ರಂಗಭೂಮಿ ಕಲಾವಿದನೊಬ್ಬ ವಿಧಿಯ ಕರೆಗೆ ಓಗೊಟ್ಟು ಬದುಕಿನ ಪಯಣವನ್ನು ಮುಗಿಸಿದ ಘಟನೆ ಅಂಕೋಲಾ ತಾಲೂಕಿನ ಬೆಲೇಕೇರಿಯ ಸೀ ಬರ್ಡ್ ಕಾಲನಿಯಲ್ಲಿ ಸಂಭವಿಸಿದೆ.
ಬೆಲೇಕೇರಿ ಸೀಬರ್ಡ್ ಕಾಲನಿ ನಿವಾಸಿ ಹೂವಪ್ಪ ಗೌಡ (45) ನಾಟಕದಲ್ಲಿ ಪಾತ್ರ ನಿರ್ವಹಣೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಮರಣ ಹೊಂದಿರುವುದು ಕಲಾಭಿಮಾನಿಗಳು ಮತ್ತು ಆಪ್ತರು ಮರುಗುವಂತಾಗಿದೆ. ಹೂವಪ್ಪ ಗೌಡ ಒಬ್ಬ ಬಹುಮುಖಿ ಕಲಾವಿದನಾಗಿ,ಕಳೆದ ಎರಡು ದಶಕಗಳಿಂದ ಬೆಲೇಕೇರಿ ಸುತ್ತ ಮುತ್ತ ನಡೆಯುವ ಸಾಮಾಜಿಕ ನಾಟಕ, ಯಕ್ಷಗಾನ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸುಗ್ಗಿ ಕುಣಿತ ಮೊದಲಾದ ಕಲೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಹತ್ತಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಂಘಟಕನಾಗಿ ,ಸಮಾಜಮುಖಿ ಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು ಲವಲವಿಕೆಯಿಂದ ಇದ್ದ.ಮಂಗಳವಾರ ರಾತ್ರಿ ಬೆಲೇಕೇರಿ ಸೀಬರ್ಡ್ ಕಾಲನಿಯ ಮಹಾಗಣಪತಿ ದೇವಾಲಯದ ವರ್ದಂತಿ ಉತ್ಸವದ ಪ್ರಯುಕ್ತ ನಡೆದ ಸಾಮಾಜಿಕ ನಾಟಕದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿ ಮೊದಲ ಪ್ರವೇಶದಲ್ಲಿ ಅದ್ಭುತ ಅಭಿವಯ ನೀಡಿ ,ಇನ್ನೇನು ಎರಡನೇ ಪ್ರವೇಶಕ್ಕೆ ಸಿದ್ದರಾಗುತ್ತಿರುವ ಸಂದರ್ಭದಲ್ಲಿ ಎದೆ ನೋವಿನಿಂದ ಕುಸಿದು ಬಿದ್ದ ಎನ್ನಲಾಗಿದ್ದು, ಅವರನ್ನು ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿಯೇ ತೀವ್ರ ಹೃದಯಾಘಾತದಿಂದ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಕಳೆದ ಏಳು ವರ್ಷಗಳ ಹಿಂದೆ ನಡೆದ ಭಾವೀಕೇರಿ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತದ ಸಂದರ್ಭದಲ್ಲಿ ಆಕರ್ಷಕ ಸುಗ್ಗಿ ತುರಾಯಿ ಸ್ವತಃ ತಾವೇ ನಿರ್ಮಿಸಿ ಅವರು ಗಮನ ಸೆಳೆದಿದ್ದರು.ಸ್ನೇಹ ಜೀವಿ ಸರಳ, ಸಜ್ಜನ ಹೂವಪ್ಪ ಗೌಡರ ಆಕಸ್ಮಿಕ ನಿಧನದಿಂದ ಅವರ ಸ್ನೇಹಿತರು, ಅಭಿಮಾನಿ ಬಳಗದವರಲ್ಲಿ ನೋವಿನ ಛಾಯೆ ಆವರಿಸಿದ್ದು ,ಮಡದಿ ಮಕ್ಕಳು ಮತ್ತು ಕುಟುಂಬ ವರ್ಗದಲ್ಲಿ ಶೋಕ ಮಡುಗಟ್ಟಿದೆ.
ಪ್ರಸಿದ್ಧ ಕಲಾವಿದನನ್ನು ಹಳೆದುಕೊಂಡು ರಂಗಭೂಮಿ ಬಡವಾದಂತಿದ್ದು,ಹಿಂದೆ ವಿಶ್ವರಂಗಭೂಮಿ ದಿನಾಚರಣೆಯಿಂದೇ ಕಾರವಾರದ ‘ತೊಡರಿನ ನಾಟಕಕ್ಕೆ ಅಭಿನಯಿಸಲು ಬರುತ್ತಿದ್ದ ನಟಿಮಣಿಗಳೀರ್ವರು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವ ಕಹಿ ಘಟನೆ ಮರೆಯುವ ಮುನ್ನವೇ ಮತ್ತೆ ಕಲಾಭಿಮಾನಿಗಳ ಹಾಗೂ ಕಲಾರಂಗದ ಪಾಲಿಗೆ ಆಘಾತದ ಸುದ್ದಿ ಕೇಳಿ ಬರುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.