Follow Us On

WhatsApp Group
Important
Trending

ಅಂಕದ ಕೋಳಿಗೆ ಭಾರೀ ಡಿಮ್ಯಾಂಡ್ : ಪೊಲೀಸ್ ಠಾಣೆ ಎದುರೇ ಬಹಿರಂಗ ಹರಾಜು

ಅಂಕೋಲಾ: ತಾಲೂಕಿನ ರಾಮನಗುಳಿಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಪಡೆ ಮೇಲೆ ಅಂಕೋಲಾ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಕೋಳಿಗಳನ್ನು ಇಂದು ಠಾಣೆಯ, ಆವರಣದಲ್ಲಿ ಬಹಿರಂಗ ಹರಾಜು ಮಾಡಿದರು.

ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು,ದಾಳಿಯ ಕಾಲಕ್ಕೆ ಒಟ್ಟೂ 8 ಕೋಳಿಗಳು, 4 ಮೋಟಾರು ಬೈಕುಗಳು ಹಾಗೂ 4000 ನಗದು ಹಣವನ್ನು ವಶಪಡಿಸಿಕೊಂಡು ಮೂವರ ಮೇಲೆ ಪ್ರಕರಣ ದಾಖಲಿಸಿದ್ದರು.

ಹಿಲ್ಲೂರು ತಿಂಗಳೆಬೈಲ್ ನಿವಾಸಿ ಸದಾನಂದ ರಾಮಾ ಬಾಂದೇಕರ (60) ಗಣಪತಿ ಬೊಮ್ಮಾಯ್ಯ ನಾಯಕ ಮತ್ತು ಅಚವೆ ಚನಗಾರ ನಿವಾಸಿ ಸತೀಶ ನಾಗಪ್ಪ ಪಟಗಾರ ಅವರ ಮೇಲೆ ಪ್ರಕರಣ ದಾಖಲಾಗಿದ್ದು ಉಳಿದ ಕೆಲವರು ಓಡಿ ತಪ್ಟಿಸಿಕೊಂಡಿದ್ದರು ಎನ್ನಲಾಗಿತ್ತು.

ಗುರುವಾರ ಸಂಜೆ ಅಂಕೋಲಾ ಪೊಲೀಸ್ ಠಾಣೆ ಆವರಣದಲ್ಲಿ ಎಲ್ಲಾ 8 ಕೋಳಿಗಳನ್ನು ಬಹಿರಂಗ ಹರಾಜು ಮಾಡಲಾಗಿ, ಓರ್ವರು 8300 ರೂ ಗರಿಷ್ಠ ಮೊತ್ತಕ್ಕೆ ಹರಾಜು ಮಾಡಿ ಕೋಳಿಗಳನ್ನು ಪಡೆದುಕೊಂಡರು.

ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ವಾಯ ನಾಯ್ಕ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಇಲಾಖಾ ಸಿಬ್ಬಂದಿಗಳು ಸಹಕರಿಸಿದರು. ಪೊಲೀಸ್ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೋಳಿ ಹರಾಜು ನಡೆಯುತ್ತಿರುವ ಸುದ್ದಿ ಕೇಳಿ ಠಾಣೆ ಯತ್ತ ಕೆಲವರು ದೌಡಾಯಿಸಿ ಬಂದರಾದರೂ ಆ ವೇಳೆಗೆ ಹರಾಜು ಪ್ರಕ್ರಿಯೆ ಮುಗಿದಿದ್ದು ತಾವು ಸ್ವಲ್ಪ ಮೊದಲು ಬಂದಿದ್ದರೆ ಹರಾಜಿನಲ್ಲಿ ಭಾಗವಹಿಸಿ ಅಂಕದ ಕೋಳಿಗಳನ್ನು ಪಡೆದುಕೊಳ್ಳಬಹುದಿತ್ತೆಂದು ಮರುಕ ಪಟ್ಟಂತಿತ್ತು. ಒಂದೆರಡು ಕೋಳಿಗಳು ಸ್ಥಳ ಯಾವುದಾದರೇನು ನಾವು ಅಂಕಕ್ಕೆ ಸದಾ ರೆಡಿ ಎಂಬಂತೆ ಪೊಲೀಸರೆದುರೇ ರೆಕ್ಕೆ ಬಿಚ್ಚಿ ಕಾದಾಟಕ್ಕೆ ಶುರು ಹಚ್ಚಿಕೊಂಡಿದ್ದವು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button