Important
Trending

ಕ್ಲಿನಿಕ್ ನಿಂದ ಮನೆಗೆ ಮರಳಿದ್ದ ಮಹಿಳೆ ಮರಳಿ ಬಾರದ ಲೋಕಕ್ಕೆ ಹೋಗುವಂತಾದದ್ದು ಯಾಕೆ ? ಖಾಸಗಿ ಕ್ಲಿನಿಕ್ ಗೆ ಕರೆದುಕೊಂಡು ಹೋದ ಬಳಿಕ ಏನಾಯ್ತು?

ಅಂಕೋಲಾ:  ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದ ಮಹಿಳೆ ಮನೆಗೆ ಮರಳಿ, ವೈದ್ಯರು ನೀಡಿದ್ದ ಮಾತ್ರೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತ ಪಟ್ಟಳು ಎನ್ನಲಾಗಿದ್ದು ಈ ಘಟನೆ ಹಲವು ಉಹಾಪೋಹ ಹಾಗೂ ಸಂಶಯಕ್ಕೆ ಕಾರಣವಾದಂತಿದೆ.  ಕೇಣಿ ನಿವಾಸಿ ಗೀತಾ ರಾಜು ನಾಯ್ಕ(53) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ, ಗುರುವಾರ ರಾತ್ರಿ ವೇಳೆ ಆಕೆಯಲ್ಲಿ ಕಾಣಿಸಿಕೊಂಡಿತ್ತು ಎನ್ನಲಾದ ಬೆನ್ನು ನೋವು ಲಕ್ಷಣದ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಅವಳನ್ನು ಕೇಣಿ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದ ವೇಳೆ ಅವಳನ್ನು ಪರೀಕ್ಷಿಸಿದ್ದ ವೈದ್ಯರು ಆಕೆಗೆ ಇಂಜೆಕ್ಷನ್ ನೀಡಿ, 2 ಮಾತ್ರೆಗಳನ್ನು ನೀಡಿ ಮನೆಗೆ ತೆರಳಿದ  ನಂತರ 1 ಮಾತ್ರೆ ಸೇವಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಕ್ಲಿನಿಕ್‌ನಿಂದ ಮನೆಗೆ ಮರಳಿದ ಮಹಿಳೆ ವೈದ್ಯರ ಸಲಹೆಯಂತೆ ಮಾತ್ರೆ ಸೇವಿಸಿದ್ದು ಅದಾದ ನಂತರ, ವಾಂತಿ ಮಾಡಿಕೊಂಡು ಅಲ್ಲಿಯೇ ಕುಸಿದು ಬಿದ್ದಳು ಎನ್ನಲಾಗಿದೆ. ತಕ್ಷಣ 108 ಅಂಬುಲೆನ್ಸ್ ವಾಹನದ ಮೂಲಕ ಅವಳನ್ನು ತಾಲೂಕಾ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಆ ವೇಳೆಗೆ ಗೀತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡ ಪಡಿಸಿದ್ದಾರೆ.

ಈ  ಕುರಿತು ವೈದ್ಯರ ನಿರ್ಲಕ್ಷವೇ  ಸಾವಿಗೆ ಕಾರಣ ಎಂದು ಹೇಳಿ, ಮೃತಳ ಕುಟುಂಬಸ್ಥರು ಪೋಲೀಸ್ ದೂರು ನೀಡಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಸಂತೋಷ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.,ಪಿಎಸ್ಐ ಮಹಾಂತೇಶ ವಾಲ್ಮೀಕಿ, ಹೆಚ್ ಸಿ ಪರಮೇಶ ಹಾಗೂ ಇತರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.ಇದೊಂದು ಸಂಶಯಾಸ್ಪದ ಸಾವಿನ ಪ್ರಕರಣವಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು  ಕಾರವಾರ ಕ್ರಿಮ್ಸ್ ಗೆ  ಸಾಗಿಸಲಾಗಿದ್ದು ಫಾರೆನಿಕ್ಸ್ ಹಾಗೂ ಸಂಬಂಧಿತ ನುರಿತ ತಜ್ಞರು ಹಾಗೂ ಸಿಬ್ಬಂದಿಗಳು ಹೆಚ್ಚಿನ ಪರೀಕ್ಷೆ ನಡೆಸಲಿದ್ದಾರೆ. ಎನ್ನಲಾಗಿದೆ.  ಶಾಸಕಿ ರೂಪಾಲಿ ನಾಯ್ಕ ತಮ್ಮ ಕುಟುಂಬದ ಟ್ರಸ್ಟ್ ವತಿಯಿಂದ ಈ ಹಿಂದೆ ಕೊಡುಗೆಯಾಗಿ ನೀಡಿದ್ದ ಶ್ರದ್ಧಾಂಜಲಿ ವಾಹನದ ಮೂಲಕ  ಸಾಮಾಜಿಕ ಕಾರ್ಯಕರ್ತ ಅವರ್ಸಾದ ಶಿವಾ ನಾಯ್ಕ,  ಅಂಕೋಲಾದಿಂದ ಕಾರವಾರಕ್ಕೆ ಮೃತದೇಹವನ್ನು ಸಾಗಿಸಿದರು.

ಭಾವಿಕೇರಿ ಗ್ರಾಪಂ ಅಧ್ಯಕ್ಷ ಪಾಂಡು ಗೌಡ, ಪ್ರಮುಖರಾದ ರಾಜು ನಾಯ್ಕ,ಹಾಗೂ ಪೊಲೀಸ್ ಸಿಬ್ಬಂದಿ ಗಳಿದ್ದರು. ಬಬ್ರುವಾಡ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಕಾಂತ ನಾಯ್ಕ, ನ್ಯಾಯವಾದಿಗಳಾದ ಉಮೇಶ್ ನಾಯ್ಕ,ವಿನೋದ್ ಶ್ಯಾನಭಾಗ, ಮತ್ತಿತರರು ಅಂಕೋಲಾ ತಾಲೂಕು ಆಸ್ಪತ್ರೆಗೆ . ಬಂದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಮೃತ ಮಹಿಳೆಯ ಮೈದುನ ಗುರು ವಕೀಲ,ಕುಟುಂಬಸ್ಥರು ಊರ ನಾಗರಿಕರು,ಕುಟುಂಬದ ಹಿತೈಷಿಗಳು, ಸಂಬಂಧಿಗಳು ಇದ್ದರು.

ಮಹಿಳೆಗೆ ಚಿಕಿತ್ಸೆ ನೀಡಿದ್ದರೆನ್ನಲಾದ ವೈದ್ಯರು ಈ ಹಿಂದೆ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿ, ನಿರಂತರ ಖಾಸಗಿ  ಸೇವೆ ಸಲ್ಲಿಸುತ್ತಿದ್ದು  ಅಪಾರ ವೈದ್ಯಕೀಯ ಅನುಭವ ಹೊಂದಿದ್ದಾರೆ ಹಾಗೂ ಈಗಲೂ ಜಿಲ್ಲೆಯ ಪ್ರಖ್ಯಾತ ಸಂಸ್ಥೆಯೊಂದರಡಿ ಕಾರ್ಯನಿರ್ವಹಿಸುತ್ತಾ ಮೊಬೈಲ್ ಕ್ಲಿನಿಕ್ ವಾಹನದ ಮೂಲಕ ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿಯೂ ಸೇವೆಸಲ್ಲಿಸುತ್ತಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಒಂದೆಡೆಯಿಂದ ಕೇಳಿಬಂದರೆ, ವೈದ್ಯರ ನಿರ್ಲಕ್ಷವೇ ಗೀತಾ ನಾಯ್ಕ ಸಾವಿಗೆ ಕಾರಣ  ಎಂಬ ನೇರ ದೂರು  ಇನ್ನೊಂದೆಡೆಯಿಂದ ಕೇಳಿಬರುತ್ತಿದ್ದು, ವೈದ್ಯರ ಸುತ್ತ ಅನುಮಾನದ ಹುತ್ತ ಮೂಡುವಂತಾಗಿದೆ.

ಪ್ರಕರಣದ ಕುರಿತಂತೆ ಪೊಲೀಸ್ ತನಿಖೆ ಹಾಗೂ ಮರಣೋತ್ತರ ವಿಶೇಷ ಪರೀಕ್ಷೆಯ ನಂತರವಷ್ಟೇ ಸತ್ಯಾಂಶ ತಿಳಿದುಬರಬೇಕಿದೆ. ವಿಕಲಚೇತನ ಗಂಡ,ಪಿಯುಸಿ ಓದುತ್ತಿರುವ ಮಗಳು,ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಮಗ, ತಮ್ಮ ಕುಟುಂಬದ ಯಜಮಾನತಿಯನ್ನು ಕಳೆದುಕೊಂಡು ಕಂಗಾಲಾಗಿ ಶೋಕಸಾಗರದಲ್ಲಿ ಮುಳುಗುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button