ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು ಅದರ ಅಂಗವಾಗಿ ಅಂಕೋಲಾ ತಾಲೂಕಿನಲ್ಲಿಯೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ತಾಲೂಕು ಆಡಳಿತ ಅಂಕೋಲಾ ಮತ್ತು ಅರಣ್ಯ ಇಲಾಖೆಯ ವತಿಯಿಂದ ಪ್ರತ್ಯೇಕ – ಪ್ರತ್ಯೇಕ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು ಅಂಕೋಲಾ ತಹಶೀಲ್ಧಾರರ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ ತಹಶೀಲ್ಧಾರ ಉದಯ ಕುಂಬಾರ ತಾಲೂಕು ಆಡಳಿತ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ತಾಲೂಕಿನ ಸರ್ಕಾರಿ ಶಾಲೆಗಳ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಗುವುದು ಎಂದು ತಿಳಿಸಿದರು.
ಸಹಾಯಕ ಆಯುಕ್ತ ರಾಹುಲ್ ರತನ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ತಾಲೂಕಿನ 152 ಪ್ರಾಥಮಿಕ ಮತ್ತು 11 ಪ್ರೌಢ ಶಾಲೆಗಳಲ್ಲಿ ಅರಣ್ಯ ಇಲಾಖೆ ನರ್ಸರಿಗಳಿಂದ ಪೂರೈಸಲಾಗಿರುವ ವಿವಿಧ ಬಗೆಯ 1024 ಗಿಡಗಳನ್ನು ನೆಡುವ ಮೂಲಕ ಹಸೀರಿಕರಣದ ಸಂಕಲ್ಪ ತೊಡಲಾಗುವುದು ಎಂದ ಅವರು ಕಾರ್ಯಕ್ರಮದ ಯಶಸ್ಸಿಗಾಗಿ ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಿ ಜವಾಬ್ದಾರಿಗಳನ್ನು ನೀಡಲಾಗಿದೆ . ಅರಣ್ಯ ಇಲಾಖೆಯ ಹಾರವಾಡ, ಗುಂಡಬಾಳ, ಅಗಸೂರು, ಮತ್ತು ಮೂಲೆಮನೆ ನರ್ಸರಿಗಳಿಂದ ಗಿಡಗಳನ್ನು ಪೂರೈಸಲಾಗಿದ್ದು ತಾಲೂಕಿನಲ್ಲಿ ಒಟ್ಟು 13 ಕ್ಲಸ್ಟರ್ ಗಳನ್ನು ರಚಿಸಿ ಶಾಲೆಗಳಿಗೆ ಗಿಡಗಳನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳಿಗೆ ತಾಲೂಕಿನ 163 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದ್ದು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರ ಸಹಕಾರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಕೃಷ್ಣ ಅಣ್ಣಯ್ಯ ಗೌಡ, ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ, ಉಪ ತಹಶೀಲ್ಧಾರ ಸುರೇಶ ಹರಿಕಂತ್ರ ಉಪಸ್ಥಿತರಿದ್ದರು.
ಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಅವರು ಸರ್ಕಾರದ ಆದೇಶ ಮತ್ತು ಅರಣ್ಯ ಇಲಾಖೆಯ ನಿರ್ದೇಶನದಂತೆ ವಿಶ್ವ ಪರಿಸರ ದಿನಾಚರಣೆ ಹಸಿರು ಕರ್ನಾಟಕ ಅಭಿಯಾನದ ಅಂಗವಾಗಿ ಇರುವುದೊಂದೇ ಭೂಮಿ ಧ್ಯೇಯ ಉದ್ದೇಶದೊಂದಿಗೆ ಜೂನ್ 5 ರಿಂದ 12 ರ ವರೆಗೆ ಬೀಜ ಬಿತ್ತನೆ ಅಭಿಯಾನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರವಾರ ವಿಭಾಗದ 9 ವಲಯಗಳಲ್ಲಿ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು ಅಂಕೋಲಾ ವಲಯದಲ್ಲಿ ಜೂನ್ 5 ರಂದು ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹುಲಿದೇವರವಾಡದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದ ಅವರು ಅಭಿಯಾನದ ಅವಧಿಯಲ್ಲಿ ಸುಮಾರು 80 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸ್ಥಳೀಯವಾಗಿ ಹೊಂದಿಕೊಳ್ಳುವ ಮುರಗಲ, ರಾಮಪತ್ರೆ, ಮಾವು, ಹಲಸು ಸೇರಿದಂತೆ ವಿವಿಧ ಜಾತಿಯ ಗಿಡಗಳ ಬೀಜಗಳನ್ನು ಶಿಕ್ಷಕರು, ಶಿಕ್ಷಕರ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬಿತ್ತನೆ ಮಾಡಿ ಭೂಮಿಯ ಹಸಿರು ಹೊದಿಕೆ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಅಂಕೋಲಾ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ಮಾತನಾಡಿ ಗಿಡಗಳನ್ನು ಬೆಳೆಸುವ ದಿಶೆಯಲ್ಲಿ ನಡೆಯುತ್ತಿರುವ ಬೀಜ ಬಿತ್ತನೆ ಅಭಿಯಾನಕ್ಕೆ ಪ್ರತಿಯೊಬ್ಬರೂ ಅರಣ್ಯ ಇಲಾಖೆ ಜೊತೆಯಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.ಸಂಗಾತಿ ರಂಗಭೂಮಿ ಸೇರಿ ವಿವಿಧ ಸಂಘ ಸಂಸ್ಥೆಗಳು,ಇತರರೂ ಸಹ ತಾಲೂಕಿನ ಬೇರೆ ಬೇರೆ ಕಡೆ ಪರಿಸರ ಜಾಗೃತಿ , ವನಮಹೋತ್ಸವ ಮತ್ತಿತರ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ