ಕಾಲು ಕೋಟಿಗೂ ಅಧಿಕ ಮೌಲ್ಯದ ವಿವಿಧ ಬ್ರ್ಯಾಂಡ್ ಗಳ ಅಕ್ರಮ ಗೋವಾ ಸರಾಯಿ ಸಾಗಾಟ: ಕಂಟೇನರ್ ವಾಹನದೊಂದಿಗೆ ಚಾಲಕನ ವಶ : ಮಾಲಿಕನ ಪತ್ತೆಗೆ ಮುಂದಾದ ಪೊಲೀಸರು
ಗಡಿಯಲ್ಲಿ ಚೆಕ್ ಪೋಸ್ಟ್ ಇದ್ದರೂ ಭಾರೀ ಪ್ರಮಾಣದ ಅಕ್ರಮ ಸಾಗಾಟ ?
ಕಾರವಾರ: ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಗೋವಾ ಸರಾಯಿಯನ್ನು ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ವಿಭಾಗದ ಪೊಲೀಸರ ತಂಡ ವಶಪಡಿಸಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಪೋಸ್ಟ್ ಆಫೀಸ್ ಬಳಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿರೂರ್ ತಾಲೂಕಿನ ನಿವಾಸಿ ಸುಧಾಕರ ಅರ್ಜುನ ಗೋಲಾಂಡೆ ಬಂಧಿತ ಆರೋಪಿಯಾಗಿದ್ದು ಈತ ಕಂಟೇನರ್ ಲಾರಿಯಲ್ಲಿ ಗೋವಾದಿಂದ ಅಂಕೋಲಾ ಮಾರ್ಗವಾಗಿ ಹೈದರಾಬಾದ್ ಕಡೆಗೆ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ ಒಟ್ಟೂ 814 ಬಾಕ್ಸ್ ಗಳಲ್ಲಿ ಗೋವಾ ಸರಾಯಿ ಬಾಟಲಿಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ, ನಿಖರ ಮಾಹಿತಿ ಆಧಾರದ ಮೇಲೆ ಜಿಲ್ಲಾ ವಿಶೇಷ ದಳದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಕಂಟೇನರ್ ಸಹಿತ ಅಕ್ರಮ ಸರಾಯಿ ವಶಪಡಿಸಿಕೊಂಡಿದ್ದಾರೆ.
( MH 04 FJ 9979) ನೇ ನಂಬರಿನ ಕಂಟೇನರ್ ಲಾರಿಯ ಮಾಲಿಕನ ಹೆಸರು ಹಾಗೂ ವಿಳಾಸ ಪತ್ತೆಗೆ ಪೊಲೀಸರು ಮುಂದಾಗಿದ್ದರೆ,ಕಂಟೇನರ್ ನಲ್ಲಿ ಸುಮಾರು 17ಲಕ್ಷ 45 ಸಾವಿರ ರೂಪಾಯಿ ಮೌಲ್ಯದ 180 ಎಂ.ಎಲ್ ನ ಇಂಪೀರಿಯಲ್ ಬ್ಲೂ ಗ್ರೀನ್ ವಿಸ್ಕಿ (27264 ಬಾಟಲಿಗಳು), 3ಲಕ್ಷ 24 ಸಾವಿರ ಮೌಲ್ಯದ 750 ಎಂ.ಎಲ್ ಇಂಪೀರಿಯಲ್ ಬ್ಲೂ ಗ್ರೀನ್ ವಿಸ್ಕಿ (1200 ಬಾಟಲಿಗಳು), 5ಲಕ್ಷ 61 ಸಾವಿರ ಮೌಲ್ಯದ 750 ಎಂ.ಎಲ್ ನ ರಾಯಲ್ ಛಾಲೆಂಜ್ ಪ್ರಿಮಿಯಮ್ ವಿಸ್ಕಿ (1752 ಬಾಟಲಿಗಳನ್ನು ) ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ವಶಪಡಿಸಿಕೊಂಡ ಕಂಟೇನರ್ ಮೌಲ್ಯ 20 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ತಂಡಕ್ಕೆ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗೋವಾ ಹಾಗೂ ಕರ್ನಾಟಕ ಗಡಿಯಲ್ಲಿ ವಿಶೇಷ ಚೆಕ್ ಪೋಸ್ಟಗಳಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ಸಾಗಾಟ ನಡೆಯುತ್ತಿರುವುದು ಚೆಕ್ ಪೋಸ್ಟ್ ತಪಾಸಣೆಯ ಕಾರ್ಯವೈಖರಿ ಕುರಿತು ಪ್ರಶ್ನಿಸುವಂತಾಗಿದೆ*. ಈ ಹಿಂದೆ ಇದೇ ರೀತಿ ಕಳ್ಳ ಸಾಗಾಟ ನಡೆಸುತ್ತಿದ್ದ ದೊಡ್ಡ ಕಂಟೇನರ್ ಲಾರಿಯೊಂದು ರಾ.ಹೆ. 63 ರ ಅಂಕೋಲಾ ಯಲ್ಲಾಪುರ ಮಾರ್ಗಮಧ್ಯೆ ಅಪಘಾತಕ್ಕೆ ಈಡಾಗಿ ಮದ್ಯದ ಬಾಕ್ಸ್ ಚೆಲ್ಲಾಪಿಲ್ಲಿಯಾಗಿ ಬೀಳುವ ಮೂಲಕ ಅಕ್ರಮ ಸಾಗಾಟ ಬಯಲಾಗಿತ್ತು.
ಇಂತಹ ಮತ್ತೆ 2-3 ಘಟನಾವಳಿಗಳನ್ನು ಗಮನಿಸಿದಾಗ ಈ ಅಕ್ರಮ ಸಾಗಾಟದ ಹಿಂದೆ ವ್ಯವಸ್ಥಿತ ಜಾಲವಿದ್ದು, ಸಂಬಂಧಿಸಿದ ಕೆಲ ಇಲಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ