ದೂರದಿಂದ ನೋಡಿದರೆ ಬೃಹತ್ ಮೀನು! ಗಮನಸೆಳೆದ ಉಸುಕಿನಿಂದ ನಿರ್ಮಿಸಿದ ಮೀನಿನ ಮರಳು ದಿಬ್ಬ ಕಲಾಕೃತಿ
ಅಂಕೋಲಾ: ಅಂತಾರಾಷ್ಟ್ರೀಯ ಸಾಗರ ಸ್ವಚ್ಛತಾ ದಿನಾಚರಣೆಯ ಪ್ರಯುಕ್ತ ಕರಾವಳಿ ಕಾವಲುಪಡೆ ಉಡುಪಿ ಮತ್ತು ಕರಾವಳಿ ಕಾವಲು ಪಡೆ ಠಾಣೆ ಬೇಲೆಕೇರಿ -ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಹಾಗೂ ಗ್ರಾಮ ಪಂಚಾಯತ ಹಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಾರವಾಡ ಕಡಲು ತೀರದ ಸ್ವಚ್ಛತೆ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಬೆಲೇಕೇರಿ ಹಾಗೂ ಹಾರವಾಡ ವ್ಯಾಪ್ತಿಯ ನೈಸರ್ಗಿಕ ಸುಂದರ ಕಡಲ ತೀರದಲ್ಲಿ ಬೆಳಿಗ್ಗೆಯಿಂದಲೇ ಸ್ವಚ್ಛತಾ ಶ್ರಮದಾನ ನಡೆಯಲಾಯಿತು.
ಉಸುಕಿನಿಂದ ನಿರ್ಮಿಸಿದ ಮೀನಿನ ಮರಳು ದಿಬ್ಬ ಕಲಾಕೃತಿ ವಿಶೇಷ ಆಕರ್ಷಣೆ
ಬೆಟ್ಟ ಗುಡ್ಡಗಳನ್ನು ಹಾದು ಹರಿದ ನೀರು ಮತ್ತಿತರ ಕಾರಣಗಳಿಂದ ಕಡಲ ತೀರ ಕಪ್ಪು ಕೊಚ್ಚೆಯಂತೆ ಕಂಡು ರಾಶಿ ರಾಶಿ ಕಸ ಸಂಗ್ರಹಗೊಂಡಿತ್ತು. ಶೇಖರಣೆಗೊಂಡ ನಿರುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಇತರ ಅಪಾರ ಪ್ರಮಾಣದ ಕಸದ ರಾಶಿಗಳನ್ನು ತೆಗೆದು ಕಡಲ ತೀರವನ್ನು ಸ್ವಚ್ಛಗೊಳಿಸಲಾಯಿತು. ಕರವಳಿ ಕಾವಲು ಪಡೆಯ ಕೆಂಪಂಗಿ ಯೋಧರು, ಎನ್ ಸಿ ಸಿ ಕೆಡೆಟ್ ಗಳು ಹಾಗೂ ಸ್ಥಳೀಯ ಮುಖಂಡರು ಮತ್ತಿತರರು ಬಹು ಹೊತ್ತು ಸ್ವಚ್ಛತಾ ಶ್ರಮದಾನ ನಡೆಸಿ ಕಡಲ ತೀರ ಸ್ವಚ್ಛತೆಗೆ ಪಣತೊಟ್ಟರು. ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಬೇಲೆಕೇರಿ ಕರಾವಳಿ ಕಾವಲು ಪಡೆಯ ಪಿಎಸ್ಐ ಸುರೇಶ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ ಕಡಲ ತೀರಗಳ ಸ್ವಚ್ಛತೆ ತಮ್ಮ ಇಲಾಖೆ ಜೊತೆ ಸ್ಥಳೀಯರ ಸಹಕಾರದ ಅವಶ್ಯಕತೆ ಕುರಿತು ತಿಳಿಸಿದರು.
ಉಸುಕಿನಿಂದ ನಿರ್ಮಿಸಿದ ಮೀನಿನ ಮರಳು ದಿಬ್ಬ ಕಲಾಕೃತಿ ವಿಶೇಷ ಆಕರ್ಷಣೆ
ಕಾರವಾರದ ಮರೈನ್ ಬಯೊಲಜಿಯ ಚೇರಮನ್ ಜಿ.ಎಲ್.ರಾಥೋಡ್ ವಿಶೇಷ ಉಪನ್ಯಾಸವನ್ನು ನೀಡಿ ಕಡಲು ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಸ್ವಚ್ಛ ಸಾಗರ ಪರಿಕಲ್ಪನೆ ಮುಂದಿನ ಜನಾಂಗಕ್ಕೆ ತುಂಬ ಉಪಕಾರಿಯಾಗುವದು ಎಂದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಎಸ್ ಟಾಕೇಕರ, ಕರಾವಳಿ ಕಾವಲು ಪಡೆ ಕಾರವಾರ ಠಾಣೆಯ ಪೊಲೀಸ ನಿರೀಕ್ಷಕ ನಿಶ್ಚಲ ಕುಮಾರ್, ಹೊನ್ನಾವರ ಠಾಣೆಯ ಪೊಲೀಸ್ ನಿರೀಕ್ಷಕ ಮುರುಗೇಶ, ಕುಮಟಾ ಠಾಣೆಯ ಪೊಲೀಸ್ ನಿರೀಕ್ಷಕಿ ರೇವತಿ, ಕೆಎಲ್ಇ ಸಂಸ್ಥೆಯ ಎನ್ ಸಿಸಿ ಘಟಕದ ಮುಖ್ಯಸ್ಥೆ ಗಿರಿಜಾ ತಳವಾರ ಮತ್ತಿತರರು ವೇದಿಕೆಯಲ್ಲಿ ಉಪಸಿತರಿದ್ದರು. ಕರಾವಳಿ ಕಾವಲು ಪಡೆಯ ಮೋಹನದಾಸ ಶೇಣ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಮುರುಗೇಶ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಾರವಾಡ ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ ಕಾಂಚನ್, ಪಿಡಿಓ ಲಕ್ಷ್ಮಿ ಗೌಡ, ಗ್ರಾ.ಪಂ. ಸದಸ್ಯರು, ಆರೋಗ್ಯ ಕಾರ್ಯಕರ್ತರು, ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಎನ್.ಸಿ.ಸಿ ಕೆಡೆಟಗಳು, ಶಾಲಾ ವಿದ್ಯಾರ್ಥಿಗಳು, ಪ್ರಿಯಾಂಕಾ ನ್ಯಾಮಗೌಡ ಸೇರಿದಂತೆ ಕರಾವಳಿ ಕಾವಲು ಪಡೆಯ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಹಾರವಾಡದ ಗ್ರಾಮಸ್ಥರು ಉಪಸ್ಥಿತರಿದ್ದರು. ಸ್ವಚ್ಛತಾ ಅಭಿಯಾನದ ಅಂಗವಾಗಿ ಹಾರವಾಡ ಭಾಗದ ಮೀನುಗಾರರು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪುರುಷರಿಗಾಗಿ ನಡೆದ ದೋಣಿ ಸ್ಪರ್ಧೆಯಲ್ಲಿ ಸಂತೋಷ ಸಾದಿಯೇ ಮತ್ತು ಸಂದೀಪ್ (ಪ್ರಥಮ), ರೂಪೇಶ ಮತ್ತು ರಾಘವೇಂದ್ರ (ದ್ವಿತೀಯ), ದಿಲೀಪ ಬಾಂದೇಕರ ಮತ್ತು ವಿನಾಯಕ ಅಂಕೋಲೆಕರ (ತೃತೀಯ) ಸ್ಥಾನ ಪಡೆದರು. ಗುಂಡು ಎಸೆತ ಸ್ಪರ್ಧೆಯಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಟಾಕೇ ಕರ (ಪ್ರಥಮ) ಸ್ಥಾನ ಪಡೆದು ಗಮನ ಸೆಳೆದರೆ, ಆಕಾಶ (ದ್ವಿತೀಯ), ದಿಲೀಪ ದುರ್ಗೇಕರ (ತೃತೀಯ) ಸ್ಥಾನ ಪಡೆದರು. ಮಹಿಳೆಯರ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಪಿಡಿಓ ಲಕ್ಷ್ಮಿ ಗೌಡ (ಪ್ರಥಮ) ಸ್ಥಾನ ಪಡೆದರೆ, ಅನಿತಾ ಆರ್ ನಾಯ್ಕ (ದ್ವಿತೀಯ), ಅಮೂಲ್ಯ ತಾಂಡೇಲ (ತೃತೀಯ), ಹಗ್ಗ ಜಗ್ಗಾಟ ಸಮೂಹ ಸ್ಪರ್ಧೆಯಲ್ಲಿ ಗೆಳೆಯರ ಬಳಗ ಹಾರವಾಡ ತಂಡ ಪ್ರಥಮ ಮತ್ತು ಗಜರಾಜ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಿಗೆ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಯಿತು.
ಕಡಲು ತೀರದಲ್ಲಿ ಕಲಾವಿದರಾದ ಗಜಾನನ ಆಚಾರಿ ಮತ್ತು ಸತ್ಯಾನಂದ ಆಚಾರಿ ಕಾಗಲ ಕುಮಟಾ ಇವರು ಉಸುಕಿನಿಂದ ನಿರ್ಮಿಸಿದ ಮೀನಿನ ಮರಳು ದಿಬ್ಬ ಕಲಾಕೃತಿ ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು. ಕಾರವಾರ ಕಡಲ ಜೀವ ಶಾಸ್ತ್ರ ವಿಭಾಗದ ರೇವಣಕರ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಬೆಲೇಕೇರಿ ಕರಾವಳಿ ಕಾವಲು ಪಡೆಯ ಸುರೇಶ್ ನಾಯಕ್ ನೇತ್ರತ್ವದಲ್ಲಿ ಸಂತೋಷ ಮತ್ತಿತರರ ಸಹಕಾರದಿಂದ ಕಡಲ ತೀರದ ಸ್ವಚ್ಛತೆ ನಡೆಸಿ ಕ್ರೀಡೆ ಮತ್ತು ಮನೋರಂಜನೆ ಏರ್ಪಡಿಸಿ ತಮ್ಮ ಗ್ರಾಮೀಣ ಭಾಗದಲ್ಲಿ ಉತ್ಸಾಹ ತುಂಬಿದ ಅಧಿಕಾರಿಗಳಿಗೆ ಸ್ಥಳೀಯರು ಮೆಚ್ಚುಗೆಯ ಮಾತುಗಳನ್ನಾಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ