ಕುಸಿದು ಬಿದ್ದ ನಿವೃತ್ತ ಉದ್ಯೋಗಿ ಸಾವು: ಆ್ಯಂಬುಲೆನ್ಸ್ ಗೆ 108 ಸಮಸ್ಯೆ; ಸಕಾಲದಲ್ಲಿ ಸಿಗುತ್ತಿಲ್ಲ ತುರ್ತು ಸೇವೆ
ಅಂಕೋಲಾ: ಬೆಳಗಿನ ವಾಯು ವಿಹಾರ ಮುಗಿಸಿ ಮರಳುತ್ತಿರುವ ವ್ಯಕ್ತಿಯೋರ್ವರು ಮನೆಯ ಬಳಿ ಕುಸಿದು ಬಿದ್ದು ಮೃತ ಪಟ್ಟ ಘಟನೆ ಪಟ್ಟಣದ ಜೊಗಳಸೆಯಲ್ಲಿ ನಡೆದಿದ್ದು ವ್ಯಕ್ತಿ ಕುಸಿದು ಬಿದ್ದ ತಕ್ಷಣ ಕರೆ ಮಾಡಿದರೂ ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ದೊರಕದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಗಾಬೀತಕೇಣಿ ಮೂಲದ ಸದ್ಯ ಜೊಗಳಸೆಯಲ್ಲಿ ವಾಸವಾಗಿದ್ದ ಬಿಲ್ಟ್ ನಿವೃತ್ತ ಉದ್ಯೋಗಿ ಬಾಬು ಪಾಂಡುರಂಗ ಅಂಕೋಲೆಕರ್ (75) ಮೃತ ವ್ಯಕ್ತಿಯಾಗಿದ್ದು ಇವರು ತಮ್ಮ ದಿನಚರಿಯಂತೆ ವಾಯುವಿಹಾರಕ್ಕೆ ತೆರಳಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನು ಗಮನಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರು ಪುರಸಭೆ ಸದಸ್ಯ ಜಯಪ್ರಕಾಶ ನಾಯ್ಕ ಅವರ ಮೂಲಕ ತಕ್ಷಣದಲ್ಲೇ ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ.
ಆದರೆ ಸುಮಾರು 45 ನಿಮಿಷಗಳು ಕಳೆದರೂ ಯಾವುದೇ ಆಂಬ್ಯುಲೆನ್ಸ್ ಘಟನಾ ಸ್ಥಳಕ್ಕೆ ಬಂದಿರಲಿಲ್ಲ. ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಈ ವಿಷಯವನ್ನುಚಿನ್ನದಗರಿ ಯುವಕ ಸಂಘದ ದವರ ಗಮನಕ್ಕೆ ತಂದಾಗ ಅವರು ಅಲ್ಲಿ ಹೋಗಿ ಪರಿಸ್ಥಿತಿ ನೋಡಿ, ಕುಟುಂಬ ಸದಸ್ಯರ ಮತ್ತು ಸ್ಥಳೀಯರಾದ ನವೀನ ಶೆಟ್ಟಿ, ಪ್ರಶಾಂತ, ವಿನಾಯಕ ನಾಯ್ಕ ಹಾಗೂ ಪುರಸಭಾ ಸದಸ್ಯ ಜೆ. ಪಿ. ಮತ್ತಿತರರ ಸಹಕಾರದಲ್ಲಿ ಬೆಡ್ ಶಿಟ್ (ಚಾದರ ) ದ ಮೇಲೆ ವೃದ್ಧರನ್ನು ಹೊತ್ತು ಸಾಗಿಸಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಈ ವೇಳೆ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದಾಗಿ ದೃಡಪಡಿಸಿದ್ದಾರೆ ಎನ್ನಲಾಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಶೀಘ್ರವಾಗಿ ಸೇವೆಗೆ ಲಭ್ಯವಿರಬೇಕಿದ್ದ ಆಂಬ್ಯುಲೆನ್ಸ್ ಸಕಾಲದಲ್ಲಿ ಬಂದಿದ್ಧರೆ ವ್ಯಕ್ತಿಯ ಜೀವ ಉಳಿಸಬಹುದಿತ್ತೇನೋ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದೆ. ಜನವರಿ 17 ರಂದು ಅವರ್ಸಾದ ಹಿರಿಯ ವ್ಯಕ್ತಿಯೋರ್ವರಿಗೂ ಅಂಬುಲೆನ್ಸ್ ಸೇವೆ ಸಕಾಲದಲ್ಲಿ ದೊರೆತಿರಲಿಲ್ಲ. ವಿಳಂಬವಾಗಿ ಸೇವೆ ದೊರೆಯಿತಾದರೂ ಅವರನ್ನು ಅಂಕೋಲಾ ಆಸ್ಪತ್ರೆಗೆ ಕರೆತಂದು – ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಸಾಗಿಸಲಾಗಿತ್ತಾದರೂ ಅಲ್ಲಿ ಅವರು ಕೊನೆಯುಸಿರೆಳೆದರು ಎನ್ನಲಾಗಿದೆ.
ಜ. 18 ರಂದು ಕೇಣಿಯ ವ್ಯಕ್ತಿಯೋರ್ವರಿಗೆ ಕುಮಟ ಮಾರ್ಗವಾಗಿ ಮಣಿಪಾಲಕ್ಕೆ ಸಾಗಬೇಕಾದ ತುರ್ತು ಕಾಲದಲ್ಲಿ , ಕುಮಟಾದ ಅಂಬುಲೆನ್ಸ್ ಅನ್ನು ಅಂಕೋಲಕ್ಕೆ ಕರೆಯಿಸಿ ಆ ಬಳಿಕ ರೋಗಿಯನ್ನು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದ್ದು ಈ ಕುರಿತು ಅವರ್ಸಾದ ಸಾಮಾಜಿಕ ಕಾರ್ಯಕರ್ತ ಶಿವಾ ನಾಯ್ಕ ಸಾಮಾಜಿಕ ಜಾಲ ತಾಣಗಳ ಮೂಲಕ ಧ್ವನಿಯೆತ್ತಿದ್ದರು. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ ಸಿಗದಿರುವ ಕುರಿತು ನಾಗರಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ತಾಲೂಕಿನ ಜನರ ಆರೋಗ್ಯ ಭಾಗ್ಯ ವೃದ್ಧಿಸಲು ಶಾಸಕಿ ರೂಪಾಲಿ ನಾಯ್ಕ ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಲ್ಲದೇ ರಾಜ್ಯದಾದ್ಯಂತ ಇರುವ 108 ಅಂಬುಲೆನ್ಸ್ ಸೇವೆ ಇಲ್ಲಿಯೂ ಇದೆ. ಇದರ ಹೊರತಾಗಿ ಇನ್ಪೋಸಿಸ್ ಸಂಸ್ಥೆ ಕೊಡಮಾಡಿದ ಅಂಬುಲೆನ್ಸ್ ಸಹ ಇದೆ. ಇವೆಲ್ಲ ಇದ್ದು ಸಕಾಲದಲ್ಲಿ ಸೇವೆ ಸಿಗದೆ ಹಲವರು ಹೈರಾಣಾಗುವಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ಗೆ ಕರೆ ಮಾಡಿದರೆ ನಾನಾ ಕಾರಣಗಳಿಂದ ತಾಸುಗಟ್ಟಲೆ ಕಳೆದರೂ ಆಂಬ್ಯುಲೆನ್ಸ್ ಸೇವೆ ಸಿಗುತ್ತಿಲ್ಲ ಎನ್ನುವ ದೂರು ಕೇಳಿ ಬರಲಾರಂಭಿಸಿದೆ..
ಕೆಲವು ಆಂಬ್ಯುಲೆನ್ಸ್ ಗಳನ್ನು ಚಾಲನೆ ಮಾಡಲು ಹಿಂಬದಿಯಿಂದ ತಳ್ಳಬೇಕಾದ ಪರಿಸ್ಥಿತಿ ಇದೆ ಪಟ್ಟಣದಲ್ಲೇ ಈ ಪರಿಸ್ಥಿತಿ ಆದರೆ ಹಳ್ಳಿ ಜನರ ಪಾಡೇನು ಎಂದು ಜನರು ಆಡಿಕೊಳ್ಳುವಂತಾಗಿದೆ.ಸಂಬಂಧಿಸಿದವರು ಈ ಕೂಡಲೇ ಎಚ್ಚೆತ್ತು ಅಂಬುಲೆನ್ಸ್ ನ 108 ಸಮಸ್ಯೆಗಳನ್ನು ದೂರ ಮಾಡಿ ಜನತೆಯ ಆರೋಗ್ಯ ಕಳಕಳಿಗೆ ಮುಂದಾಗಬೇಕಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ