ಆಂಬುಲೆನ್ಸ್ ಬಡಿದು ಪಾದಾಚಾರಿ ಸಾವು| ಹೆದ್ದಾರಿ ಕ್ರಾಸ್ ಮಾಡುವಾಗ ನಡೆದ ಆವಾಂತರ
ಐಆರ್ ಬಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಹೆಚ್ಚುತ್ತಿರುವ ಬಗ್ಗೆ ಜನಾಕ್ರೋಶ ?
ಅಂಕೋಲಾ: ಅಂಬುಲೆನ್ಸ್ ವಾಹನ ಬಡಿದು ವ್ಯಕ್ತಿ ಒರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಅಂಕೋಲಾ ತಾಲೂಕ ಆಸ್ಪತ್ರೆಯ ಅಂಬುಲೆನ್ಸ್ ಒಂದು ರಾ.ಹೆ. 66 ರ ಕಾರವಾರ – ಅಂಕೋಲಾ ಮಾರ್ಗ ಮಧ್ಯೆ ಅವರ್ಸಾ ಬಳಿ ಸಾಗುತ್ತಿರುವಾಗ, ಪಾದಾಚಾರಿ ಒರ್ವರಿಗೆ ಡಿಕ್ಕಿ ಹೊಡೆದಿದ್ದು, ತಲೆ ಮತ್ತಿತರ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಅದೇ ಆಂಬುಲೆನ್ಸ್ ನಲ್ಲಿ ತಾಲೂಕ್ ಆಸ್ಪತ್ರೆಗೆ ಕರೆತಂದು,ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಗಂಭೀರ ಗಾಯಗೊಂಡಿದ್ದ ಆತ ಚಿಕಿತ್ಸೆಗೆ ಸ್ಪಂದಿಸದೇ ಅಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. ಅಂಕೋಲಾ ತಾಲೂಕಿನ ಮಠಾಕೇರಿಯ ಸದಾನಂದ ಕಾಮತ (55) ಮೃತ ದುರ್ದೈವಿಯಾಗಿದ್ದು,ಅವರು ಅವರ್ಸಾದ ಮಂಗಲ ಕಾರ್ಯವೊಂದಕ್ಕೆ ಹೋಗಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಅವರ್ಸಾ ಹಟ್ಟಿಕೇರಿ ಭಾಗದಲ್ಲಿ ಈ ಹಿಂದಿನಿಂದಲೂ ಸರ್ವಿಸ್ ರೋಡಿಗಾಗಿ ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದರೂ,ಕ್ಯಾರೆ ಅನ್ನದ ಐ ಆರ್ ಬಿ ಯ ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತಿತರ ಕಾರಣಗಳು ಈ ಭಾಗದಲ್ಲಿ ಅಪಘಾತ ಹೆಚ್ಚಲು ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಅಂಚಿನಲ್ಲಿ ಸಾಲುಸಲಾಗಿ ನಿಲ್ಲುತ್ತಿರುವ ಕೆಲ ಬಾರಿ ವಾಹನಗಳಿಂದ, ಪಕ್ಕದ ರಸ್ತೆಗಳಿಂದ ಹೆದ್ದಾರಿ ಕ್ರಾಸ್ ಗೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಬರುವುದು ಕಾಣದೇ ಹೆದ್ದಾರಿಯಲ್ಲಿ ಸಂಚರಿಸುವ ಇತರೆ ವಾಹನ ಚಾಲಕರು ಒಮ್ಮೆಲೆ ದಿಗಿಲುಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನಲಾಗಿದೆ.
ಈ ದಿನದ ಅಪಘಾತವು ಇದೇ ರೀತಿ ಆಗಿರ ಬಹುದು ಎನ್ನುತ್ತಾರೆ. ಸ್ಥಳೀಯರು. ಹೊರಗುತ್ತಿಗೆ ಆಧಾರದ ಮೇಲೆ ಇತ್ತೀಚಿಗಷ್ಟೇ ಅಂಕೋಲಾದ ಅಂಬುಲೆನ್ಸ್ ಸೇವೆಗೆ ಬಂದಿದ್ದ ಚಾಲಕ , ಅಪಘಾತ ತಪ್ಪಿಸಲು ಬಹಳ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಇನ್ನು ಮುಂದಾದರು ಈ ಭಾಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತಿತರ ಸಾರ್ವಜನಿಕರಿಗೆ ಅನುಕೂಲವಾಗುವಂತೆ,ವ್ಯವಸ್ಥಿತ ಬಸ್ ನಿಲ್ದಾಣ,ಸರ್ವಿಸ್ ರೋಡ್ ನಿರ್ಮಿಸಲು ಸಂಬಂಧಿಸಿದವರು ಮುಂದಾಗ ಬೇಕಿದೆ.
ಅಪಘಾತದಲ್ಲಿ ಮೃತಪಟ್ಟ ಸದಾನಂದ ಕಾಮತ ವಿದ್ಯಾವಂತನಾಗಿದ್ದರೂ ಕೆಲ ಕಾರಣಾಂತರಗಳಿಂದ ಚಿಕ್ಕ ಪುಟ್ಟ ಕೆಲಸ ನಿರ್ವಹಿಸಿ ಸಂಸಾರ ಸಾಗಿಸಬೇಕಾದ ಅನಿವಾರ್ಯತೆ ಇತ್ತು ತನಗೆ ಆರೈಕೆ ಮಾಡುತ್ತಿದ್ದ ಮಗ ಸಂಜೆಯಾದರೂ ಮನೆಗೆ ಬರುವದಿರುವುದರಿಂದ,ಆತಂಕಗೊಂಡ ವೃದ್ಧ ತಾಯಿ ಮಗನ ಬರುವಿಕೆಗಾಗಿ ಹಂಬಲಿಸುತ್ತಿರುವ ದೃಶ್ಯ ಅಕ್ಕ ಪಕ್ಕದ ಮನೆಯವರ ಕರಳು ಚುರ್ ಎನ್ನುವಂತಿತ್ತು. ಮೃತನ ಸಹೋದರಿ ಒರ್ವಳು ಪಕ್ಕದ ರಾಜ್ಯದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದ್ದು ,ಅವರು ಬಂದ ನಂತರವಷ್ಟೇ ಮೃತ ಸದಾನಂದ ಕಾಮತ ನ ಶವವನ್ನು ಮನೆಗೆ ತರುವುದು,ಅಂತ್ಯಸಂಸ್ಕಾರ ಮತ್ತಿತರ ಕಾರ್ಯಗಳು ನಡೆಯಲಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ