Jannah Theme License is not validated, Go to the theme options page to validate the license, You need a single license for each domain name.
Focus NewsImportant
Trending

ಕೊನೆಗೂ ಬೋನಿಗೆ ಬಿದ್ದ ಕಪ್ಪು ಚಿರತೆ: ಗ್ರಾಮಸ್ಥರು ನಿರಾಳ

ಹೊನ್ನಾವರ: ತಾಲ್ಲೂಕಿನ ವಂದೂರು ಗ್ರಾಮದ ಜಡ್ಡಿಗದ್ದೆಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಕಪ್ಪು ಚಿರತೆಯೊಂದು ಸೆರೆ ಸಿಕ್ಕಿದೆ. ಇತ್ತೀಚಿಗೆ ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶದ ಹಲವಾರು ಕಡೆ ಚಿರತೆ ದಾಳಿ, ಚಿರತೆ ಕಾಣಿಸಿಕೊಂಡ ಬಗ್ಗೆ ಸುದ್ದಿ ಆಗಿತ್ತು.

ಅದೇ ರೀತಿ ತಾಲೂಕಿನ ವಂದೂರು ಜಡ್ಡಿಗದ್ದೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿಯ ಕುರಿತು ಆಗಾಗ ವರದಿಯಾಗುತ್ತಿದೆ. ಮೇಯಲು ಹೋಗುವ ಆಕಳು ಹಾಗೂ ಮನೆಯಂಗಳದಲ್ಲಿನ ನಾಯಿಗಳು ಚಿರತೆಗೆ ಬಲಿಯಾಗುವ ಘಟನೆಗಳು ನಡೆಯುತ್ತಿರುವ ಬಗ್ಗೆ ಇಲ್ಲಿನ ಗ್ರಾಮಸ್ಥರು ದೂರುತ್ತ ಬಂದಿದ್ದಾರೆ.

ಕಾಡಿನಿಂದ ನಾಡಿಗೆ ಮುಖಮಾಡಿ ಜನ ವಸತಿ ಇರುವ ಕಡೆ ನುಗ್ಗುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಈ ಭಾಗದಲ್ಲಿ ಬೋನು ಇಟ್ಟಿತ್ತು. ಸ್ಥಳೀಯರಾದ ಸೀತಾರಾಮ ಹೆಗಡೆ ಹಾಗೂ ಪ್ರೊ.ಗುರುನಾಥ ಭಟ್ಟ ಅವರ ನೇತೃತ್ವದಲ್ಲಿ ಇತರ ಗ್ರಾಮಸ್ಥರು ಕಳೆದ ಎರಡು ತಿಂಗಳುಗಳಿಂದ ಚಿರತೆ ಸೆರೆ ಹಿಡಿಯಲು ಪ್ರಯತ್ನ ನಡೆಸಿದ್ದರು. ಚಿರತೆಯ ಚಲನವಲನಗಳ ಮೇಲೆ ನಿಗಾ ಇಡುವುದರ ಜೊತೆಗೆ ದಿನನಿತ್ಯ ಬೋನಿನ ಒಂದು ಪ್ರತ್ಯೇಕ ಭಾಗದಲ್ಲಿ ನಾಯಿಯೊಂದನ್ನು ಕಟ್ಟಿ ಹಾಕಿ ಚಿರತೆ ಬೋನಿನೊಳಗೆ ಬರುವಂತೆ ಕಾರ್ಯಾಚರಣೆ ನಡೆಸಿದ್ದರು.

ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ಬರಲಾರಂಭಿಸಿದರು. ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಬೋನಿನ ಸಮೇತ ಕಾಸರಕೋಡ ನರ್ಸರಿಗೆ ಸಾಗಿಸಿದರು. ಚಿರತೆಯನ್ನು ಹತ್ತಿರದಲ್ಲೆಲ್ಲೂ ಬಿಡದೆ ದೂರದ ದಟ್ಟಾರಣ್ಯಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು.

ಬೋನಿನಲ್ಲಿರುವ ಚಿರತೆ ಜನರ ಗುಂಪಿಗೆ ಹೆದರಿ ಗಾಯ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ಚಿರತೆ ನೋಡಲು ಕಾಸರಕೋಡಿನಲ್ಲಿ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಯಿತು. ಸೆರೆ ಸಿಕ್ಕಿರುವುದು ೨-೩ ವರ್ಷದ ಪ್ರಾಯದ ಗಂಡು ಚಿರತೆ.ಜನರ ಕೋರಿಕೆಯಂತೆ ಇದನ್ನು ದೂರದ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು. ಚಿರತೆಯ ಸುರಕ್ಷತೆಯ ದೃಷ್ಟಿಯಿಂದ ಚಿರತೆ ಬಿಡುವ ಜಾಗದ ಗುರುತನ್ನು ಬಹಿರಂಗಪಡಿಸುತ್ತಿಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button