Big News
Trending

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಅಂಕೋಲಾದ ಕುವರಿ

ಸರ್ಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿತಿದ್ದ ಗ್ರಾಮೀಣ ಪ್ರತಿಭೆ
ತಾಲೂಕಿನ ಕೀರ್ತಿಯ ಸಾಧನೆಗೆ ಹೆಮ್ಮೆ ಮೂಡಿಸಿದ ಹೇಮಾ ನಾಯಕ.

[sliders_pack id=”3491″]

ಅಂಕೋಲಾ : ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ನಡೆಸಿದ ಪರೀಕ್ಷೆಯಲ್ಲಿ ತಾಲೂಕಿನ
ಕುವರಿಯೊರ್ವಳು 225ನೇ ರ‍್ಯಾಂಕ್ ಗಳಿಸಿ ಉನ್ನತ ಸಾಧನೆ ಮಾಡಿದ್ದಾಳೆ. ಈ ಹಿಂದೆಯೂ ಹಲವರು ತಮ್ಮ ಸಾಧನೆಯ ಮೂಲಕ ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದ ಹೇಮಾ ಶಾಂತರಾಮ ನಾಯಕ ತನ್ನ ಸಾಧನೆಯ ಮೂಲಕ ತಾಲೂಕಿನ ಹೆಮ್ಮೆಗೆ ಕಾರಣಳಾಗಿದ್ದಾಳೆ. ಮೂಲತಃ ವಾಸರ-ಕುದ್ರಿಗೆ ಗ್ರಾಮದವರಾದ ಸದ್ಯ ವಂದಿಗೆಯಲ್ಲಿ ವಾಸವಿರುವ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಶಾಂತರಾಮ ಬೀರಣ್ಣ ನಾಯಕ ಮತ್ತು ಮೇಲಿನಗುಳಿ ಕಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿರುವ ರಾಜಮ್ಮ ಹಮ್ಮಣ್ಣ ನಾಯಕ ದಂಪತಿಗಳ ಪುತ್ರಿಯಾಗಿರುವ ಹೇಮಾ ಬಾಲ್ಯದಿಂದಲೂ ಚುರುಕಿನ ಹುಡುಗಿಯಾಗಿದ್ದಳು.

ಸರ್ಕಾರಿ ಪ್ರಾಥಮಿಕ ಶಾಲೆ ತೆಂಕಣಕೇರಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಜೈಹಿಂದ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣವನ್ನು ವ್ಯಾಸಂಗ ಮಾಡಿದ್ದ ಹೇಮಾ ನಾಯಕ ತನ್ನ ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಜಿ.ಸಿ ಕಾಲೇಜಿನಲ್ಲಿ ಮುಗಿಸಿರುತ್ತಾರೆ. ಪದವಿ ಶಿಕ್ಷಣದ ವೇಳೆ ಪಿ.ಎಸ್ ಕಾಮತ ಸ್ಮರಣಾರ್ಥ ನಡೆದ ಮೊದಲ ವರ್ಷದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, 50 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ವಿಶೇಷ ಪಾರಿತೋಷಕ ಪಡೆದು ಗಮನ ಸೆಳೆದಿದ್ದಳು. ಶೈಕ್ಷಣಿಕ ಹಂತದ ನೂರಾರು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಳಿಸಿದ್ದ ಈ ಬಾಲೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ಶಿಕ್ಷಕ ವೃಂದದ ಅಚ್ಚು-ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು.

ಜಿ.ಸಿ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ವ್ಯಾಸಂಗ ಮಾಡಿ ‘ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪ್ರಥಮ ರ‍್ಯಾಂಕ್‌ನೊoದಿಗೆ ಚಿನ್ನದ ಪದಕ’ ಧರಿಸಿದ್ದ ಈ ವಿದ್ಯಾರ್ಥಿನಿ, ಮೈಸೂರು ವಿಶ್ವ ವಿದ್ಯಾಲಯದಿಂದಲೂ ‘ಎಂ.ಎಸ್.ಸಿ ಪದವಿಯನ್ನೂ ಪ್ರಥಮ ರ‍್ಯಾಂಕ್’ನಲ್ಲಿಯೇ ಉತ್ತೀರ್ಣಗೊಳಿಸಿ ತನ್ನ ಸಾಧನೆಯ ಹಾದಿ ಮುಂದುವರೆಸಿದ್ದಳು. ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಉನ್ನತ ಸ್ಥಾನ ಮಾನಗಳಿಲ್ಲ ಎನ್ನುವವರ ಲೇವಡಿಗೆ, ತನ್ನ ಸತತ ಪರಿಶ್ರಮ ಮತ್ತು ಸಾಧನೆಗಳ ಮೂಲಕವೇ ಉತ್ತರ ನೀಡಿದ್ದಲ್ಲದೇ, ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಪಾಲಕರು, ಕುಟುಂಬ ವರ್ಗ, ಶಿಕ್ಷಕರು, ಊರನಾಗರಿಕರು, ಶ್ರೀರಾಮ ಸ್ಟಡಿ ಸರ್ಕಲ್, ತಾಲೂಕಿನ ಹಲವು ಗಣ್ಯರು ಮತ್ತು ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ತನ್ನ ಈ ಮೊದಲಿನ ಶೈಕ್ಷಣಿಕ ಅರ್ಹತೆಗನುಗುಣವಾಗಿ ಉತ್ತಮ ನೌಕರಿ ಮಾಡುವ ಅವಕಾಶಗಳಿದ್ದವಾದರೂ, ನೌಕರಿಯೊಂದೇ ಕಲಿಕೆಯ ಉದ್ದೇಶವಲ್ಲ ಎಂಬoತೆ ಹೆಚ್ಚಿನ ಸಾಧನೆಗೆ ಕನವರಿಸಿ, ಅದನ್ನು ನನಸಾಗಿಸಿಕೊಂಡ ತಾಲೂಕಿನ ಹೆಮ್ಮೆಯ ಕುವರಿಗೆ, ಸಾರ್ವಜನಿಕ ಸೇವೆ ಮಾಡುವ ಸದುದ್ದೇಶ ಇದಂತ್ತಿದ್ದು ಅವಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಮತ್ತು ನಾಡಿನ ಜನತೆಗೆ ಇವಳ ಸೇವೆ ದೊರೆಯುವಂತಾಗಲಿ ಎಂಬ ಶುಭ ಹಾರೈಕೆ ಸಲ್ಲಿಸೋಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button