ಪಾಕಿಸ್ತಾನದ ಹೆಸರು ಉಲ್ಲೇಖಿಸಿ ವಾಲ್ ಪೋಸ್ಟರ್ ಬರೆದು – ಅಂಟಿಸಿದವನ ತೀವೃ ವಿಚಾರಣೆಗೆ ಒಳಪಡಿಸಿದ ಪೊಲೀಸರು:ಗೊಂದಲ ಹಾಗೂ ಸಂಶಯ ಮೂಡಿಸಿದ ಪೋಸ್ಟರ್ ನಲ್ಲಿ ಏನಿತ್ತು?
ಅಂಕೋಲಾ: ಪಟ್ಟಣದ ಬಂಡಿಬಜಾರ – ಕೇಣಿ- ಕನಸಿಗದ್ದೆಗೆ ಸಾಗುವ ಮುಖ್ಯ ತಿರುವಿನ ರಸ್ತೆಗೆ ಹೊಂದಿಕೊಂಡಿರುವ ಸ್ಟೋರ್ಟ್ಸ್ ಸಾಮಗ್ರಿ ಮಾರಾಟದ ಅಂಗಡಿಯ ಗೋಡೆ ಮೇಲೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ಕೈಬರಹದಲ್ಲಿ ಬರೆದ ಮೂರ್ನಾಲ್ಕು ಬಿತ್ತಿಪತ್ರಗಳು ಪಟ್ಟಣದಾದ್ಯಂತ ಹಲವು ರೀತಿಯ ಚರ್ಚೆಗೆ ಕಾರಣವಾದಂತಿದ್ದು, ಅದರಲ್ಲಿ ಬರೆದ ಕೆಲ ಶಬ್ದಗಳು , ಅಂಕೋಲಾದಲ್ಲಿಯೂ ಪಾಕಿಸ್ತಾನ ನಂಟಿದೆಯೇ ಎಂಬಷ್ಟರ ಮಟ್ಟಿಗೆ ಕೆಲವರಲ್ಲಿ ಅನುಮಾನ ಹುಟ್ಟು ಹಾಕಿದಂತಿತ್ತು. ಸುದ್ದಿ ಮಾಧ್ಯಮ ಹಾಗೂ ಇತರೆಡೆ ಈ ಸುದ್ದಿ ಎಲ್ಲಡೆ ಹರಿದಾಡಲಾರಂಭಿಸಿದಂತೆ, ಗೋಡೆಯ ಮೇಲಿದ್ದ ಬಿತ್ತಿಪತ್ರಗಳು ಕಾಣದಾಗಿ ಅವನ್ನು
ಕಿತ್ತು ಹಾಕಿದವರಾರು ? ಎಂಬಿತ್ಯಾ ದಿ ಹೊಸ ಚರ್ಚೆ ಆರಂಭವಾದಂತಿತ್ತು. ಇದರಿಂದ ಭಿತ್ತಿಪತ್ರ (ವಾಲ್ ಪೋಸ್ಟರ್) ವಿಷಯ ಹಲವು ರೀತಿಯ ಸಂಶಯಗಳಿಗೆ ಕಾರಣವಾಯಿತು.
ಕೆಂಪು ಅಕ್ಷರ; ಬಿಳಿ ಬಣ್ಣದ ಹಾಳೆ ಮೇಲೆ ಕೆಂಪು ಬಣ್ಣದ ಮಾರ್ಕರ್ ಪೆನ್ನಿನಿಂದ ಬರೆದಂತಿರುವ ಮೂರು ಪ್ರತ್ಯೇಕ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸಿಲಾಗಿತ್ತು.ಅದರಲ್ಲಿ ಬರೆಯಲಾದ ಕೆಲ ಪದಗಳು ಕೆಲ ಸಂಶಯಗಳಿಗೆ ಎಡೆ ಮಾಡಿಕೊಡುವಂತಿದ್ದು, ಯಾರೂ ಅಲಕ್ಷಿಸುವಂತಿರಲಿಲ್ಲ.
ಪೋಸ್ಟರ್ ನಲ್ಲಿ ಬರೆದಿದ್ದಾರೂ ಏನು?ಪ್ರತ್ಯೇಕ – ಪ್ರತ್ಯೇಕವಾಗಿರುವ ಒಟ್ಟೂ 3 – 4 ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸಲಾಗಿದ್ದು ಒಂದು ಪೋಸ್ಟರಿನಲ್ಲಿ ಸಂಗ್ಲಾನಿ ವೆಲಫರ್ ಟ್ರಸ್ಟ್ ಪಾಕಿಸ್ತಾನ ಕಾಂಟ್ರಾಕ್ಟ್ ಎಂಬ ತಲೆಬರಹ ಇದ್ದು ,ಕೆಳಗಡೆ ಅಂಕೊಲಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಾದ ಜೈಹಿಂದ್ ಹೈಸ್ಕೂಲ್, ಪಿ.ಎಂ.ಹೈಸ್ಕೂಲ್, ಕೆನರಾ ವೆಲಫರ್ ಟ್ರಸ್ಟ್ ಮತ್ತು ಕೆ.ಎಲ್. ಇ ಕಾಲೇಜುಗಳ ಹೆಸರು,ಪೊಲೀಸ್ ಮತ್ತು ಫಾರೆಸ್ಟ ಇಲಾಖೆ ಹೆಸರು ಬರೆದು,
ಜೈಹಿಂದ್ ಹೈಸ್ಕೂಲ್ ಸ್ಟೂಡೆಂಟ್ಸ್ ಗೆ ಎವಿಲ್ ಮಾಡಿ, ಪಿ.ಎಂ.ಹೈಸ್ಕೂಲ್ ಸ್ಟೂಡೆಂಟ್ಸ್ ಗೆ ಮೇಲೆ ತೆಗೆದು ಕೆನರಾ ವೆಲಫರ್ ಟ್ರಸ್ಟ್ ಮತ್ತು ಕೆ.ಎಲ್. ಇ ಕಾಲೇಜು ಉರ್ದು ವೆಲಫರ್ ಟ್ರಸ್ಟಿನಿಂದ ಹಣ ಕಮಾಯಿಸಿ ಎಂದು ಅದಾವುದೋ ಅರ್ಥ ಬರುವಂತೆ ವಿಚಿತ್ರವಾಗಿ ಬರೆಯಲಾಗಿದೆ.
ಅದೇ ಪೋಸ್ಟರನ ಮುಂದುವರೆದ ಭಾಗ ಎಂಬಂತೆ ಇಂಡಿಯಾ ಫಾರೆಸ್ಟ ಮಾರಿದ್ದಾರೆ, 20 ವರ್ಷಗಳಲ್ಲಿ ಎಲ್ಲಾ ಬೆಟ್ಟ ನೆಲಸಮವಾಗುತ್ತದೆ,ಎಲ್ಲರ ಜಾಗ ಸಿಗುತ್ತದೆ ಎಂದು ಬರೆಯಲಾಗಿದೆ.ಇನ್ನು ಎರಡನೇ ಪೋಸ್ಟರ್ ಕೆಳ ಭಾಗ ನೀರು ತಾಗಿ ಇಲ್ಲವೇ ಇತರೆ ಕಾರಣಗಳಿಂದ ಬಹುತೇಕ ಅಳಸಿ ಹೋಗಿದ್ದು ಮೇಲ್ಬಾಗದಲ್ಲಿ ಎವಿಲ್ ಐಟಮ್ಸ ಎಂದು ತಲೆಬರಹ ನೀಡಲಾಗಿದ್ದು ,ಧರ್ಮ ಒಂದರ ಪವಿತ್ರ ಸ್ಥಳ, ಪ್ರಾರ್ಥನಾ ಮಂದಿರಗಳ ಹೆಸರು ಬರೆಯಲಾಗಿದೆ.
ಮೂರನೇ ಪೋಸ್ಟರಿನಲ್ಲಿ ಸಂಗ್ಲಾನಿ ವೆಲಫರ್ ಟ್ರಸ್ಟ್ ಹೆಸರು ತಲೆಬರಹ ನೀಡಲಾಗಿದ್ದು ಶಿಕ್ಷಣ ಸಂಸ್ಥೆಗಳು, ಟ್ರಸ್ಟ್ ಗಳು, ಚೈನ್ ಮಾರ್ಕೆಟ್ ಕಂಪನಿ ಹೆಸರುಗಳು ಕಾಣಬಹುದಾಗಿದ್ದು 5000 ಹುಡುಗ ಹುಡುಗಿಯರು, ವಿಶ್ವ ಸುಂದರಿ ಫಿಲ್ಮ್, 100 ಲಕ್ಷ ಬಿಲಿಯನ್ ಡಾಲರ್ ಆದಾಯ ಬರುತ್ತದೆ ಎಲ್ಲರೂ ಬ್ಯಾಂಕ್ ಖಾತೆ ತೆರೆಯಿರಿ ಹೀಗೆ ಇಂಗ್ಲಿಷ್ ನಲ್ಲಿ ಬರೆದು ಕೆಳಗಡೆ ಶೇಖ್ ಖಾದ್ರಿ ಎಂಬ ಹೆಸರು ಬರೆಯಲಾಗಿದೆ.
ಈ ಪೋಸ್ಟರ್ ಗಳನ್ನು ಯಾರು ಎಷ್ಟು ದಿನಗಳ ಹಿಂದೆ ಅಂಟಿಸಿರಬಹುದು ಎನ್ನುವುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಮೊದಲು ಸಿಕ್ಕಿರಲಿಲ್ಲವಾದರೂ, ವಾಲ್ ಪೋಸ್ಟರ್ ಸುದ್ದಿ ಎಲ್ಲಡೆ ವೈರಲ್ ಆಗುತ್ತಿದ್ದಂತೆ, ಸ್ಪೋರ್ಟ್ಸ್ ಅಂಗಡಿ ಮಾಲಕನಿಂದ ದೂರು ಸ್ವೀಕರಿಸಿದ್ದ ಪೋಲೀಸರು,ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ಕಾರ್ಯಾಚರಣೆ ನಡೆಸಿ, ಪೋಸ್ಟರ್ ಹಾಗೂ ಅದನ್ನು ಬರೆದಿದ್ದ ಎನ್ನಲಾದ ಆರೋಪಿಯನ್ನು ವಶಕ್ಕೆ ಪಡೆದು ಕೊಂಡು , ತೀವ್ರ ವಿಚಾರಣೆ ನಡೆಸಿದ್ದಾರೆ.
ಸೋಮವಾರ ಸ್ವತಃ ಎಡಿಶನಲ್ ಎಸ್ಪಿ, ಡಿವೈಎಸ್ಪಿ ಅಂಕೋಲಾ ಠಾಣೆಗೆ ಭೇಟಿ ನೀಡಿ, ಆರೋಪಿತನನ್ನು ವಿಚಾರಣೆಗೊಳಪಡಿಸಿ,ಕಾಗದಪತ್ರಗಳನ್ನು ಸಹ ಪರಿಶೀಲಿಸಿದರು.
ಕೃತ್ಯ ಎಸಗಿದವನಾರು?:
ವಾಲ್ ಪೋಸ್ಟರ್ ನಲ್ಲಿ ಮೇಲ್ನೋಟಕೆ ಕಂಡು ಬರುವ ವಿಚಿತ್ರ ಬರವಣಿಗೆ ಯಾರೋ ಮಾನಸಿಕ ಅಸ್ವಸ್ಥ ಬರೆದು ಅಂಟಿಸಿರಬಹುದು ಎಂಬಂತೆ ಕಂಡು ಬಂದರೂ ಪಾಕಿಸ್ತಾನದ ಕಾಂಟ್ರಾಕ್ಟ್ ಎಂದು ಬರೆದಿರುವುದು ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳ ಹೆಸರು ಉಲ್ಲೇಖಿಸಿರುವುದು ನಾನಾ ರೀತಿಯ ಸಂಶಯಗಳಿಗೆ ಕಾರಣವಾಗಿತ್ತು., ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುವುದರಿಂದ ಸ್ಥಳೀಯರೇ ಈ ಕೃತ್ಯ ಎಸಗಿರುವ ಸಾಧ್ಯತೆ ಕೇಳಿ ಬಂದಿತ್ತು. ಆದರೂ
ಇದರ ಹಿಂದೆ ಯಾರಿದ್ದಾರೆ?ಯಾವ ಉದ್ದೇಶದಿಂದ ಈ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು? ಒಂದೊಮ್ಮೆ ಮಾನಸಿಕ ಅಸ್ವಸ್ಥನೆ ಆಗಿದ್ದರೂ ಆತನ ಬರವಣಿಗೆ ಶೈಲಿ ಮತ್ತು ವಿಚಾರಧಾರೆಗಳ ಕುರಿತು ನಾನಾ ಪ್ರಶ್ನೆಗಳು ಮೂಡುವಂತಾಗಿತ್ತು.
ಅಂಕೋಲಾದ ಸ್ಥಳೀಯನೇ ಆಗಿರುವ ವ್ಯಕ್ತಿ ಓರ್ವ ಇಲ್ಲಿಯೇ ಶಾಲೆ ಕಲಿತು ನಂತರ ಉದ್ಯೋಗಕ್ಕಾಗಿ ವಿದೇಶದಲ್ಲಿದ್ದವನು, ಅದಾವುದೊ ಕಾರಣದಿಂದ ಅಲ್ಲಿಯೂ ಸರಿಯಾಗಿ ಉದ್ಯೋಗ ಮಾಡಲಾಗದೇ, ನಂತರ ಮುರಿದು ಬಿದ್ದ ತನ್ನ ಮದುವೆ ಸಂಬಂಧ ಮತ್ತಿತರ ಕಾರಣಗಳಿಂದ ಮಾನಸಿಕ ಖಿನ್ನತೆ ಗೋಳಗಾಗಿ, ಹೊನ್ನಾವರ ಮತ್ತಿತರೆಡೆ ಆಗಾಗ ಚಿಕಿತ್ಸೆಗೊಳಪಡುತ್ತಿದ್ದ ಎನ್ನಲಾಗಿದೆ. ಆದರೂ ಆತನ ಅಸಲಿಯತ್ತಿನ ಕುರಿತು ಪೋಲೀಸ್ ತನಿಖೆಯಿಂದ ಸ್ಪಷ್ಟ ಮಾಹಿತಿ ದೊರೆಯಬೇಕಿದೆ.
ಈ ಎಲ್ಲ ಘಟನೆಗಳು ಕೆಲವರಿಗೆ ತಮಾಷೆ ಎನಿಸಿದರೆ,ಇನ್ನು ಕೆಲವರು ಇದರ ಹಿಂದೆ ಏನೋ ಇರಬಹುದು ಎಂದರೆ, ಮತ್ತೆ ಕೆಲವರು ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ಯಾವುದನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಪ್ರಜ್ಞಾವಂತಿಕೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ*