ಸಿದ್ದಾಪುರ: ಮಲೆನಾಡಿನಲ್ಲಿ ಆಚರಿಸುವ ಗೌರಿ ಗಣೇಶ ಹಬ್ಬ ಬಹು ವಿಶೇಷತೆ ಪಡೆದಿದೆ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ಈ ಹಬ್ಬದಂದು ತವರಿಗೆ ಬಂದು ಗೌರಿಯನ್ನು ತುಂಬಿ ಮನೆಯಲ್ಲಿ ನಾಲ್ಕೈದು ದಿನಗಳವರೆಗೆ ಇಟ್ಟು ಪೂಜಿಸುತ್ತಾರೆ. ಗೌರಿ ತದಿಗೆಯ ದಿನದಂದು ಮನೆ ಅಥವಾ ಮನೆ ಪಕ್ಕದ ಹಳ್ಳದಲ್ಲಿ ಹೂಗಳಿಂದ ಸಿಂಗರಿಸಿ ಗೌರಿಯನ್ನ ಪೂಜಿಸಿ ಮನೆಗೆ ತಂದು ಅಲಂಕೃತವಾದ ಮಂಟಪದಲ್ಲಿ ಕೂರಿಸಿ ವಿಶೇಷ ಖಾದ್ಯದ ತಿನಿಸುಗಳನ್ನ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ.
ಪ್ರತಿನಿತ್ಯವೂ ವಿಶೇಷವಾದ ಪೂಜೆಗಳು ಜರಗುತ್ತವೆ. ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಎಲ್ಲರೂ ಬಂದು ದೇವರಿಗೆ ಪೂಜೆಯನ್ನ ಸಲ್ಲಿಸಿ ಇಷ್ಟಾರ್ಥಗಳ ಈಡೇರಿಸುವಂತೆ ಪ್ರಾರ್ಥನೆ ಮಾಡುತ್ತಾರೆ. ಕಡಕೇರಿ ಕೊಲ್ ಸಿರ್ಸಿ, ಬೇಡ್ಕಣಿ ಮುಂತಾದ ಭಾಗಗಳಲ್ಲಿ ಒಂದು ಕೇರಿಯ ಎಲ್ಲಾ ಹೆಣ್ಣು ಮಕ್ಕಳು ಒಂದೇ ಕಡೆ ಸಾಮೂಹಿಕವಾಗಿ ಗೌರಿ ತುಂಬುವುದು ಬಲು ವಿಶೇಷವಾಗಿದೆ.
ಅಲ್ಲದೆ ಬೇರೆ ಬೇರೆ ಊರುಗಳಿಂದ ಬಂದ ಹೆಣ್ಣು ಮಕ್ಕಳು ಒಂದೆಡೆ ಸೇರಿ ಈ ರೀತಿ ಹಬ್ಬ ಆಚರಿಸುವುದು ಭಾಂದವ್ಯ ಹೆಚ್ಚಿಸುವುದರ ಜೊತೆಗೆ ಹಬ್ಬದ ವಿಶೇಷತೆ ಕೂಡ ಹೆಚ್ಚುತ್ತದೆ. ಈ ಪದ್ಧತಿಯು ಈ ಭಾಗಗಳಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಸಹ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷಗಳಲ್ಲಿ ವಿಶೇಷವಾಗಿದೆ. ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಕೂಡ ದೂರದ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವವರು ಈ ದಿನಕ್ಕೆ ಮೀಸಲಿಟ್ಟು ಇಲ್ಲಿಗೆ ಆಗಮಿಸಿ ಈ ಆಚರಣೆಯನ್ನು ಮಾಡುತ್ತಾ ಬರುತ್ತಿರುವುದು ಹಬ್ಬದ ಸಂಭ್ರಮ ಹೆಚ್ಚಿಸಿದೆ.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖಂಡ ಸಿದ್ದಾಪುರ