Focus News

Tulsi Gowda: ಪರಿಸರ ಜಾಗೃತಿಗೆ ಕರೆ ನೀಡಿದ ಪದ್ಮಶ್ರೀ ತುಳಸೀ ಗೌಡ

ಅಂಕೋಲಾ : ನಾನು ಅಕ್ಷರಾಭ್ಯಾಸ ಕಲಿಯದಿದ್ದರೂ ಪರಿಸರ ಕಾಳಜಿಯಿಂದ ಇಷ್ಟು ಸಾಧನೆ ಮಾಡಿರುವಾಗಿ ಅಕ್ಷರ ಕಲಿತ ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿ ನನಗಿಂತ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಬೇಕು. ಕಲಿತವರೆಲ್ಲ ಪರಿಸರದ ರಕ್ಷಣೆಗೆ ಜಾಗೃತಿ ಮೂಡಿಸಿ ಎಂದು ಪದ್ಮಶ್ರೀ ತುಳಸೀ ಗೌಡ ಹೇಳಿದರು.

ಅವರು ಅರಣ್ಯ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ವಾಸರಕುದ್ರಿಗೆ ಗ್ರಾ.ಪಂ. ವ್ಯಾಪ್ತಿಯ ಬಲಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಗಿಡ ನೆಟ್ಟು ಶಾಲೆಯ ವತಿಯಿಂದ ಮತ್ತು ವಾಸರ ಕುದ್ರಿಗೆ ಗ್ರಾ. ಪಂ. ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಾಸರಕುದ್ರಿಗೆ ಗ್ರಾ. ಪಂ. ಅಧ್ಯಕ್ಷ ಪ್ರದೀಪ ನಾಯಕ ಮಾತನಾಡಿ ನಾವು ಮಾಡುವ ಕಾರ್ಯದಲ್ಲಿ ಶೃದ್ಧೆ ಇರಬೇಕು. ಶೃದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಸಾಧನೆ ಮಾಡಬಹುದು ಆಗ ಮಾತ್ರ ಪ್ರಶಸ್ತಿ ಪುರಸ್ಕಾರಗಳು ನಮ್ಮನ್ನು ಅರಸಿಕೊಂಡು ಬರುತ್ತವೆ. ಇದಕ್ಕೆ ಪದ್ಮಶ್ರೀ ಪುರಸ್ಕ್ರತ ಡಾ. ತುಳಸೀ ಗೌಡರವರೇ ಸಾಕ್ಷಿ. ತುಳಸಜ್ಜಿಯವರಿಗೆ ತಾವು ಗಿಡ ನೆಟ್ಟರೆ ಮುಂದೊಂದು ದಿನ ಪ್ರಶಸ್ತಿ ಬರುತ್ತದೆ ಎಂದು ಗೊತ್ತಿರಲಿಲ್ಲ. ಅವರಿಗೆ ಗೊತ್ತಿರುವದು ಕೇವಲ ಗಿಡ ನೆಡುವದು ನಂತರ ಅವುಗಳನ್ನು ಪೋಷಿಸುವದು.

ಸುತ್ತಲಿನ ಪರಿಸರವನ್ನು ಹಸಿರಾಗಿಸುವದು. ಅಂತಹ ಪರಿಸರ ಕಾಳಜಿಯ ಶೃದ್ಧೆಯೇ ಅವರನ್ನು ದೇಶವೇ ಗುರುತಿಸುವಂತೆ ಮಾಡಿದೆ. ಇವರ ಹಾಗೆ ಎಲ್ಲರೂ ಪರಿಸರ ಕಾಳಜಿ ಹೊಂದಿದರೆ ಜಗತ್ತನ್ನೇ ಹಸಿರಾಗಿಸಬಹುದು. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಜೊತೆ ಪರಿಸರ ರಕ್ಷಣೆಯ ಕಾರ್ಯಕ್ರಮಕ್ಕೆ ಗ್ರಾ.ಪಂ. ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಅರಣ್ಯ ಇಲಾಖೆಯ ಮಾಸ್ತಿಕಟ್ಟಾ ವಲಯದ ಬೀಟ್ ಫಾರೆಸ್ಟರ್ ಅಭಿ ಧರೆಣ್ಣನವರ ಮಾತನಾಡಿ ಸರಕಾರದಿಂದ ಪ್ರತೀವರ್ಷ ಪರಿಸರ ಸಂರಕ್ಷಣೆ ಕುರಿತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಆದರೆ ಸಾರ್ವಜನಿಕರು ಇದು ಕೇವಲ ಸರಕಾರಿ ಕಾರ್ಯಕ್ರಮ ಎಂದು ಆಚರಿಸದೆ ನಿಜವಾದ ಪರಿಸರ ಕಳಕಳಿಯಿಂದ ಹಸಿರೀಕರಣಕ್ಕೆ ಮುಂದಾಗಬೇಕು. ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದೆ. ಇದನ್ನು ಉಳಿಸುವದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಪತ್ರಕರ್ತ ಕೆ ರಮೇಶ ಮಾತನಾಡಿ ತುಳಸೀ ಗೌಡರು ಪರಿಸರ ಸಂರಕ್ಷಣೆಯಲ್ಲಿ ನೀಡಿದ ಕೊಡುಗೆಯ ಕುರಿತು ಮಾತನಾಡಿದರು. ಇನ್ನೋರ್ವ ಪತ್ರಕರ್ತ ನಾಗರಾಜ‌ ಜಾಂಬಳೇಕರ ಮಾತನಾಡಿ ಅರಣ್ಯ ಇಲಾಖೆ ಮತ್ತು ಗ್ರಾ.ಪಂ. ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ಕೊಟ್ಟು ಅವುಗಳನ್ನು ನೆಟ್ಟು ಒಂದು ವರ್ಷದವರೆಗೆ ಉತ್ತಮವಾಗಿ ಪೋಷಿಸಿದವರಿಗೆ ಬಹುಮಾನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಗ್ರಾ.ಪಂ. ಕಾರ್ಯದರ್ಶಿ ಚಿತ್ರಾ ನಾಯ್ಕ, ವೃಕ್ಷಮಾತೆ ಟ್ರಸ್ಟ್ ಸದಸ್ಯ ಸಂತೋಷ ಗೌಡ ಮಾತನಾಡಿದರು. ವೇದಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗಪ್ಪ ಗೌಡ, ಗ್ರಾ.ಪಂ. ಸದಸ್ಯ ಸುಬ್ರಾಯ ಗೌಡ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಸಣ್ಣಪ್ಪ ನಾಯಕ ಸ್ವಾಗತಿಸಿದರು. ಶಿಕ್ಷಕಿ ಮೋಹಿನಿ ನಾಯ್ಕ ನಿರೂಪಿಸಿದರು. ಶಿಕ್ಷಕ ಗೌರೀಶ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಂಕಾಳಿ ಗೌಡ, ಅಡುಗೆ ಸಹಾಯಕಿ ರೇಣುಕಾ ಗೌಡ, ಆಶಾ ಕಾರ್ಯಕರ್ತೆ ಶೋಭಾ ವಿ ಗೌಡ, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button