Focus News
Trending

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ: ಬಿಜೆಪಿ

ಅಂಕೋಲಾ: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತಪರ ಯೋಜನೆಗಳನ್ನು ರದ್ದು ಪಡಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರವಾರ -ಅಂಕೋಲಾ ಮಂಡಲಗಳ ರೈತ ಮೋರ್ಛಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ಧಾರರಿಗೆ ಮನವಿ ಸಲ್ಲಿಸಲಾಯಿತು. ಜೈಹಿಂದ್ ಹೈಸ್ಕೂಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.

ಬಿಜೆಪಿ ಸರ್ಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಎ.ಪಿ.ಎಂ.ಸಿ ಕಾನೂನು ರದ್ದು ಪಡಿಸಿ ರೈತರ ಆದಾಯಕ್ಕೆ ಕುತ್ತು ತಂದಿದೆ, ಅವೈಜ್ಞಾನಿಕ ವಿದ್ಯುತ್ ದರ ಏರಿಕೆಯಿಂದ ಕೃಷಿ ಆಧಾರಿತ ಕೈಗಾರಿಕೆಗಳು ಸಂಕಷ್ಟ ಎದುರಿಸುತ್ತಿವೆ, ರೈತ ವಿದ್ಯಾನಿಧಿ ಯೋಜನೆ ರದ್ದು ಪಡಿಸಿ ಬಡ ರೈತರ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ, ಜಿಲ್ಲೆಗೊಂದು ಗೋ ಶಾಲೆ ಯೋಜನೆ ರದ್ದು ಪಡಿಸಿ ಅಕ್ರಮ ಗೋ ಸಾಗಾಟಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಕಿಸಾನ್ ಸಮ್ಮಾನ ಯೋಜನೆ, ಭೂ ಸಿರಿ ಯೋಜನೆ ಕೈಬಿಡಲಾಗುತ್ತಿದೆ. ರೈತರಿಗೆ ಅನುಕೂಲ ಆಗಿರುವ ಕೃಷಿ ಭೂಮಿ ಮಾರಾಟ ಕಾಯ್ದೆ, ಹಾಲು ಉತ್ಪಾದಕರಿಗೆ ಅನುಕೂಲ ಆಗಿರುವ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಯೋಜನೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಭೂ ರಹಿತ ಮಹಿಳಾ ಕಾರ್ಮಿಕರಿಗೆ ಸಹಾಯ ಧನ ನೀಡುವ ಶ್ರಮ ಶಕ್ತಿ ಯೋಜನೆ, ಸಣ್ಣ ರೈತರ ಕುಟುಂಬಗಳಿಗೆ ಆಧಾರವಾಗುವ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು, ಸಿರಿ ಧಾನ್ಯ ಸಂಸ್ಕರಿಸುವ ರೈತ ಉತ್ಪಾದಕ ಸಂಸ್ಥೆ ರದ್ದು ಮಾಡಲಾಗಿದೆ. ಹೀಗೆ ರೈತರ ಜೀವನಕ್ಕೆ ಅನುಕೂಲ ಒದಗಿಸುವ ಅತ್ಯುತ್ತಮ ಯೋಜನೆಗಳನ್ನು ಕೈ ಬಿಡಲಾಗಿದ್ಧು ಎರಡೇ ತಿಂಗಳುಗಳಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ನಾಗರಾಜ ನಾಯಕ ಮಾತನಾಡಿ ಮುಂಗಾರು ವೈಪಲ್ಯದಿಂದ ರೈತರು ಕಂಗಾಲಾಗಿದ್ದು ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದೆ, ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಗೋವುಗಳ ರಕ್ಷಕರನ್ನು ಹೆದರಿಸಿ ಅಕ್ರಮ ಗೋವುಗಳ ಸಾಗಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. ಹಿಂದುಳಿದ ವರ್ಗಗಳ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗಿವೆ ಎಂದರು.

ಬಿಜೆಪಿ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಕಾರವಾರ ಮಂಡಲ ಅಧ್ಯಕ್ಷ ಸುಭಾಷ ಗುನಗಿ ,ರೈತ ಮೋರ್ಛಾ ಅಧ್ಯಕ್ಷ ವಿ.ಎಸ್. ಭಟ್ಟ, ಪ್ರಮುಖರುಗಳಾದ ಭಾಸ್ಕರ ನಾರ್ವೇಕರ್, ಸುಬ್ರಹ್ಮಣ್ಯ ರೇವಣಕರ, ಹೂವಾ ಖಂಡೇಕರ, ಮಂಜು ಠಾಕೇಕರ, ಪ್ರಶಾಂತ ನಾಯಕ, ಜಯಾ ನಾಯ್ಕ, ಆಶಾ ನಾಯ್ಕ, ಸುಲಕ್ಷಾ ಭೋವಿ,ತಾರಾ ನಾಯ್ಕ, ತಾರಾ ಗಾಂವಕರ, ಮಾದೇವ ಗೌಡ, ವೆಂಕಟೇಶ ಗೌಡ, ಮಾರುತಿ ಗೌಡ, ನಿಲೇಶ ನಾಯ್ಕ, ವಿಶ್ವನಾಥ ನಾಯ್ಕ, ಗಣಪತಿ ನಾಯ್ಕ, ರಾಘವೇಂದ್ರ ಭಟ್, ನಾಗೇಶ ಕಿಣಿ, ರಾಘವೇಂದ್ರ ನಾಯ್ಕ, ಬಿಂದೇಶ ನಾಯಕ, ಪ್ರವೀಣ ನಾಯಕ, ವಿನೋದ ಸೇರಿದಂತೆ ಪಕ್ಷದ ಹಿರಿಕಿರಿಯ ಮುಖಂಡರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button