Important
Trending

ಖಾಸಗಿ ವಾಹನದಲ್ಲಿ ಹೊರಟು ದಾರಿ ಮಧ್ಯೆ ಪ್ರಸವ ವೇದನೆ ಅನುಭವಿಸಿದ ತುಂಬು ಗರ್ಭಿಣಿ: ಅಂಬುಲೆನ್ಸ್ ಕರೆಸಿ, ಅಲ್ಲಿಯೇ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ರಕ್ಷಣೆ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿ

ಅಂಕೋಲಾ : ಜೀವನ್ಮರಣದ ನಡುವೆ ಹೋರಾಡುತ್ತಿದ್ದ ತಾಯಿ ಮತ್ತು ಮಗುವಿನ ಜೀವ ರಕ್ಷಣೆಗೆ ಮುಂದಾಗುವ ಮೂಲಕ ಅತ್ಯಂತ ತುರ್ತು ಸಂಧರ್ಭದಲ್ಲಿ ಸಮಯೋಚಿತ ನಿರ್ಧಾರ ಕೈಗೊಂಡು, ತಮ್ಮ ಅಮೂಲ್ಯ ಸೇವೆ ನೀಡಿದ ಸಮುದಾಯ ಆರೋಗ್ಯ ಅಧಿಕಾರಿ ಮತ್ತು ಅಂಬುಲೆನ್ಸ್ ಸಿಬ್ಬಂದಿಗಳ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ.

ತಾಲೂಕಿನ ಹೊನ್ನೆಬೈಲ್ ಗ್ರಾಮದ ಕಲಾವತಿ ಎನ್ನುವ ತುಂಬು ಗರ್ಭಿಣಿ ಮಹಿಳೆಯೋರ್ವಳಿಗೆ ಶನಿವಾರ ಮದ್ಯಾಹ್ನ ಒಮ್ಮೇಲೆ ಕಾಣಿಸಿಕೊಂಡ ಹೆರಿಗೆ ನೋವಿನಿಂದ ಆಕೆಯ ಕುಟುಂಬಸ್ಥರು, ಊರಿನ ಖಾಸಗೀ ವಾಹನವೊಂದರಲ್ಲಿ ಅವಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ.ಈ ವೇಳೆ ದಾರಿ ಮಧ್ಯೆ ಅವಳ ಪ್ರಸವ ವೇದನೆ ಹೆಚ್ಚಾಗಿ, ರಸ್ತೆಯಂಚಿನ ಮನೆಯೊಂದರ ಬಳಿ ವಾಹನ ನಿಲ್ಲಿಸಿ,ಸ್ಥಳೀಯರ ಮೂಲಕ ಮಂಜಗುಣಿಯ (ಉಪವಿಭಾಗ ) ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಗಣೇಶ ನಾಯ್ಕ ಇವರಿಗೆ ಫೋನ್ ಕರೆ ಮಾಡಿ ತುರ್ತು ಸಹಾಯ ಕೋರಿದ್ದಾರೆ.

ಕೂಡಲೇ ತಮ್ಮ ವಾಹನದ ಮೂಲಕ ಸ್ಥಳಕ್ಕೆ ಆಗಮಿಸಿದ ಸಮುದಾಯ ಆರೋಗ್ಯ ಅಧಿಕಾರಿ ಗಣೇಶ ನಾಯ್ಕ, ವೇದನೆ ಪಡುತ್ತಿರುವ ಗರ್ಭಿಣಿ ಮಹಿಳೆಗೆ ಧೈರ್ಯ ತುಂಬಿದ್ದಾರೆ. ಮತ್ತು ತಾವು ಈ ಮೊದಲೇ ಕರೆ ಮಾಡಿದ್ದ ಅಂಬುಲೆನ್ಸ್ ಬರುತ್ತಲೇ ಗರ್ಭಿಣಿ ಮಹಿಳೆಯನ್ನು ನಿಧಾನವಾಗಿ ಅಂಬುಲೆನ್ಸ ಗೆ ಶಿಫ್ಟ ಮಾಡಿ ಇನ್ನೇನು ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ,ಅವಳ ಪ್ರಸವ ವೇದನೆ ಇನ್ನಷ್ಟು ಹೆಚ್ಚಿ,ಮಗುವೂ ಸರಿಯಾಗಿ ಹೊರಬರಲಾಗದೇ ತಾಯಿ ಮತ್ತು ಮಗುವಿನ ಜೀವನ್ಮರಣದ ಹೋರಾಟ ಮನಗಂಡು, ಸಮಯ ಪ್ರಜ್ಞೆ ತೋರ್ಪಡಿಸಿ ಅಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾರೆ. ಅಂತೂ ಇಂತೂ ಅಂಬುಲೆನ್ಸ್ ಸಿಬ್ಬಂದಿಗಳ ಸಹಕಾರದಲ್ಲಿ ಸೂಸೂತ್ರ ಹೆರಿಗೆ ಮಾಡಿಸಿದ್ದು, ಮುದ್ದಾದ ಗಂಡು ಮಗು ಜನನದೊಂದಿಗೆ, ಅಲ್ಲಿ ಸೇರಿದ್ದ ಎಲ್ಲರ ಆತಂಕ ದೂರವಾಗಿ ಸಂತಸದ ವಾತಾವರಣ ಕಂಡು ಬಂದಿದೆ.

ನಂತರ ತಾಯಿ ಮತ್ತು ಮಗುವನ್ನು ಅದೇ ಆಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು,ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಈ ಅಪರೂಪದ ಘಟನೆಯ ನಂತರ ಸಮುದಾಯ ಆರೋಗ್ಯ ಅಧಿಕಾರಿ ಗಣೇಶ್ ನಾಯ್ಕ ಮತ್ತು ಅಂಬುಲೆನ್ಸ್ ಸಿಬ್ಬಂದಿಗಳ ಸೇವಾ ಕಾರ್ಯಕ್ಕೆ ಮಂಜುಗುಣಿ ಹಾಗೂ ಹೊನ್ನೇ ಬೈಲ್ ಸುತ್ತಮುತ್ತಲ ಗ್ರಾಮಸ್ಥರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ವೈದ್ಯೋ ನಾರಾಯಣೋ ಹರಿ ಎಂಬ ಉಕ್ತಿಯಂತೆ ದೇವರಂತೆ ಬಂದು ತಾಯಿ ಮತ್ತು ಮಗುವಿನ ಜೀವರಕ್ಷಣೆ ಮಾಡಿದ ಗಣೇಶ ನಾಯ್ಕ ಈತನ ಸೇವಾ ನೆನಪಿಗೆ , ಮಗುವಿಗೂ ಗಣೇಶ ಎಂದು ನಾಮಕರಣ ಮಾಡಿದ್ದರೆ ಒಳ್ಳೆಯದಿತ್ತು ಎಂದು ಸ್ಥಳೀಯ ಕೆಲವರು ಮಾತನಾಡಿಕೊಂಡಂತಿದೆ.

ಆರೋಗ್ಯ ಇಲಾಖೆಗಳ ಈ ಸೇವಾ ಕಾರ್ಯದಲ್ಲಿ ಸುಕ್ರಿ ಗೋವಿಂದ ಗೌಡ ಕುಟುಂಬಸ್ಥರು ಮತ್ತು ಸ್ಥಳೀಯರು ನೆರವಾದರು. ಜಮಗೋಡು ನಿವಾಸಿ ಆಗಿರುವ ನೀಳಕಾಯದ ಆರೋಗ್ಯ ಇಲಾಖೆಯ ಸಿಬ್ಬಂದಿ ಗಣೇಶ ಉಮೇಶ ನಾಯ್ಕ,ಈ ಹಿಂದೆಯೂ ಕರೋನಾ ಸಂಕಷ್ಟ ಕಾಲ, ಗಂಗಾವಳಿ ನದಿ ಪ್ರವಾಹದಂತ ತುರ್ತು ಸಂಧರ್ಭಗಳಲ್ಲಿ, ತನ್ನ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ,ಜನಮಾನಸದಲ್ಲಿ ನೆಲೆ ನಿಂತಿದ್ದು ಇಂಥವರ ಸೇವೆಯನ್ನು ಆರೋಗ್ಯ ಇಲಾಖೆ,ಜಿಲ್ಲಾಡಳಿತ,ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವಂತಾಗಬೇಕು ಮತ್ತು ಆ ಮೂಲಕ ಜನಪರ ಆರೋಗ್ಯ ಕಾಳಜಿ ಮತ್ತು ಸೇವೆಗೆ ಮತ್ತಷ್ಟು ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವಂತಾಗಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button