Focus News
Trending

ಮೂರನೇ ಬಾರಿ ಯುನಿವರ್ಸಿಟಿ ಬ್ಲ್ಯೂ ಆಗಿ ಮಿಂಚಿದ ಸ್ಥಳೀಯ ಪ್ರತಿಭೆ

ಅಂಕೋಲಾ: ಜಿಲ್ಲೆಯ ಮಣ್ಣಿನ ಮಗನಾದ ಯುವ ಕ್ರೀಡಾಪಟು ಓರ್ವ, ವಾಲಿಬಾಲ್ ಕ್ರೀಡೆಯಲ್ಲಿ ತನ್ನ ಆಲ್ ರೌಂಡರ್ ಪ್ರದರ್ಶನದ ಮೂಲಕ ರಾಜ್ಯ ರಾಜಧಾನಿಯಲ್ಲಿ 3 ನೇ ಬಾರಿ ಯುನಿರ್ವಸಿಟಿ ಬ್ಲೂ ಆಗಿ ಮಿಂಚಿದ್ದು, ದಕ್ಷಿಣ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಹೆಮ್ಮೆ ಮೂಡಿಸಿದ್ದಾನೆ ಸ್ಪಾತಂತ್ರ್ಯ ಸಂಗ್ರಾಮದಲ್ಲಿ ಕರಬಂದಿ ನಾಡು ಎಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮ ,ಸ್ಥಳೀಯ ಯುವ ಕ್ರೀಡಾ ಪ್ರತಿಭೆ ಓರ್ವರ ಮೂಲಕ ಮತ್ತಷ್ಟು ಪ್ರಸಿದ್ಧಿ ಹೊಂದುವಂತಾಗಿದೆ.

ಈ ಗ್ರಾಮದ ವ್ಯವಹಾರಸ್ಥ ಕಸುಬಿನ ರವೀಂದ್ರ ನಾಯಕ ಮತ್ತು ಶಿಕ್ಷಕಿ ವಿನುತಾ ನಾಯಕ ದಂಪತಿಗಳ ಸುಪುತ್ರ ವಿಶ್ವಜಿತ್ ನಾಯಕ ತನ್ನ ಸತತ ಪ್ರಯತ್ನ ಮತ್ತು ಸಾಧನೆ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದ್ದಾನೆ. ಕಾರವಾರ ಬಾಲ ಮಂದಿರ ಶಾಲಾ ವಿದ್ಯಾರ್ಥಿಯಾಗಿದ್ದ ವಿಶ್ವಜಿತ, ಈಗ 20 ರ ತರುಣನಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಸುರಾನಾ’ ಸೌತ್ ಎಂಡ್ ಕಾಲೇಜಿನಲ್ಲಿ ಬಿ ಎ ಫೈನಲ್ ವಿಭಾಗದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ತನ್ನ ಸವ್ಯಸಾಚಿ ಆಟದ ಮೂಲಕ ಆಲರೌಂಡರ ರೂಪದ ಪ್ರತಿಭೆಯಾಗಿ ಹೊರಹೊಮ್ಮಿ,ಮೂರನೇ ಬಾರಿ ಯುನಿವರ್ಸಿಟಿ ಬ್ಲೂ ಆಗಿ ಮಿಂಚಿದ್ದು,ಡಿಸೆಂಬರ್ 22 ರಿಂದ 25 ರವರೆಗೆ ಮಂಡ್ಯದ ಪಿಇ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.

ಅಶೋಕ್ ಕೆ ಸಿ ಇವರಿಂದ ವಿಶೇಷ ತರಬೇತಿ ಪಡೆದುಕೊಳ್ಳುತ್ತಿರುವ ವಿಶ್ವಜಿತ್, 2021 – 22 ನೇ ಸಾಲಿನ 18 ವರ್ಷ ವಯೋಮಿತಿಯ ರಾಷ್ಟ್ರೀಯ ವಿಭಾಗ,2022-23 ನೇ ಸಾಲಿನ ಯೂಥ್ ನ್ಯಾಷನಲ್ ಕ್ಯಾಂಪಿನಲ್ಲಿ ಭಾಗವಹಿಸಿದ್ದಲ್ಲದೇ, ಖೆಲೋ ಇಂಡಿಯಾ 2023 – 24 ನೇ ಸಾಲಿನ ವಲ್ಡ್ ಚಾಂಪ್ ಮತ್ತಿತರಡೆ ತನ್ನ ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾನೆ. ಯುನಿವರ್ಸಿಟಿ ಬ್ಲೂ ಆಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಈ ಯುವ ಪ್ರತಿಭೆ ಕೇವಲ ತನ್ನ ತಂದೆ ತಾಯಿಗಳು, ಕುಟುಂಬಕಷ್ಟೇ ಅಲ್ಲದೇ, ಹುಟ್ಟಿದ ಊರು, ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದು,ಯುವ ಪ್ರತಿಭೆಯ ಈ ಕ್ರೀಡಾ ಸಾಧನೆಗೆ ಶಾಸಕ ಸತೀಶ ಸೈಲ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿ, ಆತನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ಅಂತೆಯೇ ಸ್ಥಳೀಯ ಗ್ರಾಮಸ್ಥರ ಪರವಾಗಿ ರವಿ ನಾಯಕ,ಯೋಗೀಶ ನಾಯಕ ಮತ್ತಿತರರು ವಿಶ್ವಜಿತ್ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Back to top button