ಮುರ್ಡೇಶ್ವರಕ್ಕೆ ಹರಿದುಬರುತ್ತಿರುವ ಜನಸಾಗರ: ವಾಹನ ನಿಲುಗಡೆಗೆ ಸ್ಥಳದ ಅಭಾವ: ಬೀಚ್ನಲ್ಲೇ ಪಾರ್ಕಿಂಗ್ ಮಾಡಬೇಕಾದ ದುಸ್ಥಿತಿ
ಮುರ್ಡೇಶ್ವರ: ಜಗತ್ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಹೀಗೆ ಬಂದ ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಸ್ಥಳವಿಲ್ಲದೇ ನೇರವಾಗಿ ಸಮುದ್ರಕ್ಕೆ ವಾಹನಗಳನ್ನು ಕೊಂಡೊಯ್ಯುತ್ತಿದ್ದು ಇದು ಕಡಲ ಸೌಂದರ್ಯ ಆಸ್ವಾದಿಸಲು ಬರುವವರ ಕಿರಿ ಕಿರಿಗೆ ಕಾರಣವಾಗಿದೆ.
ಏಷ್ಯಾದ ಎರಡನೇ ಅತಿ ಎತ್ತರದ ಈಶ್ವರನ ಬೃಹತ್ ಮೂರ್ತಿ ಹೊಂದಿರುವ ಮತ್ತು ಪಕ್ಕದಲ್ಲಿಯೇ ಕಡಲತೀರವನ್ನು ಇರುವ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಅದರಲ್ಲಿಯೂ ಕಳೆದ ಹದಿನೈದು ದಿನಗಳಿಂದ ನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಬರುವ ಪ್ರವಾಸಿಗರು ವಾಹನ ನಿಲುಗಡೆ ಮಾಡುವುದೇ ಬಹು ದೊಡ್ಡ ಸಮಸ್ಯೆ ಆಗಿದೆ. ಎಲ್ಲಿಯೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಪ್ರವಾಸಿಗರು ಬಿಚ್ ನಲ್ಲಿ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಉಂಟಾಗಿದೆ.
ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಸಂಘಟನೆಯೊoದು ಅಕ್ರಮವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಅಕ್ರಮ ವಸೂಲಿಯನ್ನು ನಿಲ್ಲಿಸಲು ಕೂಡಲೇ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಇನ್ನು ನಿತ್ಯ ಸಾವಿರಾರು ವಾಹನಗಳಿಂದ ಪ್ರವಾಸಿಗರು ಇಲ್ಲಿಗೆ ಬಂದು, ಗಂಟೆ ಗಟ್ಟಲೆ ಬಿಚ್ ನಲ್ಲೆ ಆಟ ಆಡುತ್ತ ತಮ್ಮ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.
ಬಿಚ್ ನಲ್ಲಿ ಆಟ ಆಡುವ ಸಂದರ್ಭದಲ್ಲಿ ಅಲ್ಲಿಯೇ ವಾಹನಗಳು ಓಡಾಟ ಮಾಡುವುದರಿಂದ ಕಿರಿ ಕಿರಿ ಉಂಟಾಗುತ್ತದೆ. ಅಷ್ಟೆ ಅಲ್ಲದೆ ಅಲೆಗಳು ಇನ್ನೂ ಜಾಸ್ತಿ ಹೊರಗೆ ಬಂದರೆ ಬಿಚ್ ನಲ್ಲಿ ಆಟ ಆಡಲು ಸ್ಥಳ ಇಲ್ಲದಂತಾಗುತ್ತದೆ. ಇನ್ನು ಸಮುದ್ರದಲ್ಲೇ ಪಾರ್ಕಿಂಗ್ ಮಾಡಬೇಕಿದ್ದು ಇದರಿಂದಾಗಿ ಸಮುದ್ರದ ಅಲೆಗಳು ಹೊಡೆದು ವಾಹನಗಳಿಗೆ ಸಮಸ್ಯೆ ಯಾದರೇ ಮರಳಿನಲ್ಲಿ ಹಲವು ವಾಹನಗಳು ಹುದಿಗಿ ಪ್ರವಾಸಿಗರು ತೊಂದರೆ ಪಡುವಂತಾಗಿದೆ.
ಇದಲ್ಲದೇ ಅಕ್ರಮವಾಗಿ ಹಲವು ಅಂಗಡಿ ಮುಂಗಟ್ಟುಗಳು ತೆರದಿದ್ದು ಬೀಚ್ ನ ಸೌಂದರ್ಯವನ್ನು ಹಾಳಾಗುವಂತಾಗಿದೆ. ಆದರೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಪ್ರವಾಸೋದ್ಯಮ ಇಲಾಖೆ ಮಾತ್ರ ಮೌನ ವಹಿಸಿದ್ದು ಈ ಬಗ್ಗೆ ಕೇಳಿದ್ರೆ ತಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸೌಂದರ್ಯ ಕ್ಕೆ ಹೆಸರಾದ ಮುರುಡೇಶ್ವರ ಕಡಲತೀರವೀಗ ಜನರಿಂದ ಗಿಜುಗುಡುತ್ತಿದೆ.
ಡಿಸೆಂಬರ್ ಕೊನೆ ವಾರದಿಂದ ಜನವರಿ ಮೊದಲವಾರದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸಲಿದ್ದು ಜಿಲ್ಲಾಡಳಿತ ಮಾತ್ರ ಈ ಭಾಗದಲ್ಲಿ ಪ್ರವಾಸಿಗರಿಗೆ ಶೌಚಾಲಯದಿಂದ ಹಿಡಿದು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡದೇ ನಿರ್ಲಕ್ಷ ತೋರಿದೆ. ಇದರಿಂದಾಗಿ ಪ್ರವಾಸಿಗರು ಸಮಸ್ಯೆ ಎದುರಿಸಬೇಕಾಗಿದ್ದು ಇನ್ನಾದರೂ ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್, ಕಾರವಾರ