Important
Trending

ಸದ್ದಿಲ್ಲದೆ ಕಬರಸ್ಥಾನವಾಗಿ ಮಾರ್ಪಾಡಾದ ಗೋಮಾಳ: ಸರ್ಕಾರಿ ಅಧಿಕಾರಿಗಳಿಂದಲೇ ದಾಖಲೆ ತಿದ್ದುಪಡಿ

ಕುಮಟಾ: ಅದು ಹಲವು ದಶಕಗಳಿಂದ ಗೋವುಗಳು ಮೇಯುತ್ತಿರುವ ಖಾಲಿ ಜಾಗ. ಮಾತ್ರವಲ್ಲದೆ ದಾಖಲೆಗಳಲ್ಲಿಯೂ ಗೋಮಾಳ ಸ್ಥಾನ ಎಂದೇ ನಮೂದಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ಜಾಗ ಯಾರ ಅರಿವಿಗೂ ಬಾರದೆ ಕಬರಸ್ಥಾನವಾಗಿ ತಿದ್ದುಪಡಿಯಾಗಿದ್ದು, ಒಂದು ಕೋಮಿಗೆ ಸೀಮಿತಗೊಳಿಸಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲದೆ ನೋಡಿ.

ಕಾಳು ಮೆಣಸಿನ ರಾಣಿ ಚೆನ್ನಾಬೈರಾದೇವಿ ಆಳಿದ ಐತಿಹಾಸಿಕ ಮಿರ್ಜಾನ್ ಕೋಟೆ ಇಂದಿಗೂ ತನ್ನ ಇತಿಹಾಸಿಕ ವೈಭವವನ್ನು ಕೋಟೆ ಮೂಲಕ ಸಾರುತ್ತಿದೆ. ಕೋಟೆ ನೂರಾರು ವರ್ಷಗಳು ಹಳೆಯದಾದರೂ ಇದರ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಆದರೆ ಇಂತಹ ಐತಿಹಾಸಿಕ ಸ್ಥಳದಿಂದ ಕೆಲವೇ ಕಿ.ಮೀ ದೂರಾದಲ್ಲಿರುವ ನೂರಾರು ವರ್ಷಗಳ ಹಿಂದಿನ ಭೂ ದಾಖಲೆಗಳು ಇದ್ದಕ್ಕಿದ್ದಂತೆ ತಿದ್ದುಪಡಿಯಾಗಿರುವುದು ಇದೀಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮಿರ್ಜಾನ ಪಂಚಾಯಿತಿಯ ಹೆದ್ದಾರಿಯ ಪಕ್ಕದ ಸರ್ವೇ ನಂ.238ರಲ್ಲಿ 9 ಎಕರೆ 12 ಗುಂಟೆ ಜಾಗ ಗೋರಸ್ಥಾನ ಎಂದು ನಮೂದಾಗಿತ್ತು. 1932 ರಿಂದಲೂ ಇದೇ ಹೆಸರಿನಲ್ಲಿದ್ದ ಖಾಲಿ ಜಾಗದಲ್ಲಿ ಗೋವುಗಳು ಮೇಯಲು ಹಾಗೂ ಶಾಲಾ ಮಕ್ಕಳ ಕ್ರೀಡಾಂಗಣವಾಗಿ ಬಳಕೆಯಾಗಿತ್ತು. ಆದರೆ ಇದೀಗ ಈ ಜಾಗವನ್ನು ಕಳೆದ ಕೆಲ ವರ್ಷದ ಹಿಂದೆ ಖಬರಸ್ಥಾನವನ್ನಾಗಿ ತಿದ್ದುಪಡಿ ಮಾಡಲಾಗಿದೆ. ಮಿರ್ಜಾನದ ನಾಡಕಚೇರಿಗೆ 2005 ರಲ್ಲಿ ಬಂದ ಕಂದಾಯ ನಿರೀಕ್ಷಕ ಎಂಎ ಖಾನ್, ತಹಸೀಲ್ದಾರ ಮಿರಾಂಡಾ ಹಾಗು ಉಪ ತಹಸೀಲ್ದಾರ ಶೇಕ್ ಎನ್ನುವವರು ಈ ದಾಖಲೆಗಳನ್ನು ತಿದ್ದುಪಡಿ ಮಾಡಿದ್ದಾರೆ.

ಬಳಿಕ ಅಧಿಕಾರಿಗಳು ಇನ್ನೊಂದು ಹೆಜ್ಜೆ ಮುಂದುವರೆದು 2017-18 ರಲ್ಲಿ ಹಜರತ್ ಕಾಕಾ ತೋಫಿಕ್ ಹಾಗು ಕಾಕಾ ರಫೀಕ ಅವರ ದರ್ಗಾ ಅಥವಾ ಖಬರಸ್ಥಾನ ಎಂದು ದಾಖಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ವಿಷಯ ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಗೋರಕ್ಷಕ ಜಾಗೆಯನ್ನು ಈ ರೀತಿ ಬದಲು ಮಾಡಿದ್ದನ್ನು ಸ್ಥಳೀಯರಾದ ಗಣೇಶ ಅಂಬಿಗ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ನೂರಾರು ವರ್ಷಗಳಿಂದ ಗೋಮಾಳ(ಗೊರಕ್ಷಕ)ಸ್ಥಾನ ಇರುವುದನ್ನು ಒಂದೇ ಕೋಮಿನ ಅಧಿಕಾರಿಗಳು ಒಟ್ಟಾಗಿ ಈ ರೀತಿ ತಿದ್ದುಪಡಿ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರ ಗಮನಕ್ಕೂ ಬಂದಿಲ್ಲ. ಅಲ್ಲದೆ ಇದರ ಪಕ್ಕದಲ್ಲಿ ಇದೇ ಹೆಸರಿನಲ್ಲಿರುವ 4 ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನನ್ನು ಸರ್ಕಾರಿ ಶಾಲೆ ನಿರ್ಮಾಣಕ್ಕೆ ನೀಡಲಾಗಿದೆ. ಸರ್ಕಾರಿ ನಿಯಮದಂತೆ ಒಂದು ಸಮುದಾಯದ ಸ್ಮಶಾನಗಳಿಗೆ ಗರಿಷ್ಠ 20 ಗುಂಟೆ ಭೂಮಿ ಮಾತ್ರ ನೀಡಬಹುದಾಗಿದೆ. ಆದರೆ ಇಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಜಾಗಕ್ಕೆ ಕಾಂಪೌoಡ್ ನಿರ್ಮಾಣ ಮಾಡಲಾಗಿದೆ.

ಇದರಿಂದ ಸ್ಥಳೀಯ ಶಾಲೆಯ ಮಕ್ಕಳಿಗೆ ಓಡಾಟ ನಡೆಸಲು, ಆಟ ಆಡಲು, ಗೋವುಗಳಿಗೆ ಮೇಯಲು ಸ್ಥಳವೇ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಡಳಿತ ಪ್ರಕರಣದಲ್ಲಿ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅಲ್ಲಿನ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆಗೆಯಬೇಕು. ಅಲ್ಲದೆ ಈ ಬಗ್ಗೆ ಕಾನೂನು ಹೋರಾಟ ಕೂಡ ನಡೆಸಲಾಗುವುದು ಎಂದು ವಕೀಲ ನಾಗರಾಜ ನಾಯಕ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಐತಿಹಾಸಿಕ ಕ್ಷೇತ್ರದಲ್ಲಿನ ನೂರಾರು ವರ್ಷಗಳ ಹಿಂದಿನ ದಾಖಲೆಗಳು ಇದ್ದಕ್ಕಿದ್ದಂತೆ ತಿದ್ದುಪಡಿ ಆಗಿರುವುದು ಇದೀಗ ದಾಖಲೆಗಳಿಂದ ಬಹಿರಂಗಗೊoಡಿದೆ. ಇದೀಗ ಎಚ್ಚೆತ್ತುಕ್ಕೊಂಡಿರುವ ಸ್ಥಳೀಯರು ಹೋರಾಟಕ್ಕೆ ಮುಂದಾಗಿದ್ದಾರೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಆಗಿರುವ ಎಡವಟ್ಟುಗಳನ್ನು ಸರಿಪಡಿಸಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button