ಅಂಕೋಲಾ: ಪಟ್ಟಣದ ಫಾರೆಸ್ಟ್ ಆಫೀಸ್ ಕೌಂಪೌಂಡ ಗೋಡೆಗೆ ಹೊಂದಿಕೊಂಡಿರುವ ಪೆಟ್ಟಿಗೆ ಅಂಗಡಿಯಲ್ಲಿ (ಗೂಡಂಗಡಿ), ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಅದಾವುದೋ ಕಾರಣದಿಂದ ಗ್ಯಾಸ್ ಸಿಲೆಂಡರ್ ಹೊತ್ತಿ ಉರಿದು, ಬೆಂಕಿಯ ಜ್ವಾಲೆ ಪಕ್ಕದ ಅಂಗಡಿಗೂ ವ್ಯಾಪಿಸಿ, ಈ ಎರಡೂ ಪೆಟ್ಟಿಗೆ ಅಂಗಡಿ ಸುಟ್ಟು ಹಾನಿಯಾದ ಘಟನೆ ಸೋಮವಾರ ರಾತ್ರಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಪೂಜಗೇರಿಯ ನಾಗೇಶ ಗಾಂವಕರ ಎನ್ನುವವರ ಪೆಟ್ಟಿಗೆ ಅಂಗಡಿಯಲ್ಲಿ, ಬೇರೊಬ್ಬರು ಮಹಿಳೆ ಕಳೆದ ಕೆಲ ದಿನಗಳ ಹಿಂದಷ್ಟೇ ರೊಟ್ಟಿ – ಕಾಳು ಪಲ್ಯೆ,ಮತ್ತಿತರ ಉಪಾಹಾರ ತಯಾರಿಸಿ ಮಾರಾಟ ಮಾರುತ್ತಿದ್ದರು ಎನ್ನಲಾಗಿದ್ದು ತಿಂಡಿ ತಯಾರಿಸುವ ಸಂದರ್ಭದಲ್ಲಿ ಅದೇಗೋ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ ಎನ್ನಲಾಗಿದ್ದು,ಅಂಗಡಿಯಲ್ಲಿದ್ದವರು ಕಂಗಾಲಾಗಿ ಸ್ವಲ್ಪ ದೂರ ಓಡಿ ಹೋದರು ಎನ್ನಲಾಗಿದೆ.
ಈ ವೇಳೆ ಪಕ್ಕದಲ್ಲಿದ್ದ ಅನಿತಾ ನಾಯ್ಕ ಎನ್ನುವವರ ಬಳೆ ಮತ್ತು ಆಟಿಕೆ ಸಾಮಗ್ರಿಗಳ ಅಂಗಡಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿ ಈ ಎರಡೂ ಪೆಟ್ಟಿಗೆ ಅಂಗಡಿ ಮತ್ತು ಅದರಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯ ಕೆಲವರು ಬೆಂಕಿ ನಂದಿಸಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ವೇಳೆಗಾಗಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು, ಅಗ್ನಿ ಶಮನ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿ,ಹೆಚ್ಚಿನ ಅಪಾಯದ ಸಾಧ್ಯತೆಯನ್ನು ತಪ್ಪಿಸಿದ್ದಾರೆ ಗ್ಯಾಸ್ ಸಿಲೆಂಡರ್ ಸ್ಪೋಟಗೊಳ್ಳುವುದನ್ನು ತಪ್ಪಿಸಿದ್ದಾರೆ,
ಬೆಂಕಿಗೆ ಆಹುತಿಯಾದ ಪೆಟ್ಟಿಗೆ ಅಂಗಡಿಯ ಅಕ್ಕಪಕ್ಕದಲ್ಲಿ ಅರಣ್ಯ ಇಲಾಖೆ ಕಚೇರಿ, ಕೆಲ ಮರ ಗಳು,ಪಕ್ಕದಲ್ಲಿ ಸಾರ್ವಜನಿಕ ಗ್ರಂಥಾಲಯ, ವಾಚನಾಲಯ, ಫ್ಯಾನ್ಸಿ ಸ್ಕೋರ್ಸ, ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತಿತರ ಸಾಮಾನು ಮಾರಾಟ ಮಾಡುವ ಅಂಗಡಿಗಳಿದ್ದವಲ್ಲದೇ,ಜನಜಂಗುಳಿಯ ಈ ರಸ್ತೆಯಲ್ಲಿ ಅಲ್ಲಲ್ಲಿ ಕೆಲ ವಾಹನಗಳು ಪಾರ್ಕಿಂಗ್ ಆಗಿರುತ್ತವೆ. ಮತ್ತು ಪಾನಿಪುರಿ ಮತ್ತಿತರ ತಿನಿಸು ತಿನ್ನಲು ಹಲವರು ಅರಣ್ಯ ಇಲಾಖೆ ಪ್ರವೇಶ ದ್ವಾರದ ಬಳಿಯೇ ಕುಳಿತು , ನಿಂತಿರುತ್ತಾರೆ.ಹಾಗಾಗಿ ಸ್ವಲ್ಪ ಮೊದಲು ಬೆಂಕಿ ಅವಗಡ ಸಂಭವಿಸಿದ್ದರೆ,ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇತ್ತೆನ್ನುತ್ತಾರೆ ಕೆಲ ಸಾರ್ವಜನಿಕರು.
ಪಟ್ಟಣದ ಜೈಹಿಂದ್ ಹೈಸ್ಕೂಲ್ ರಸ್ತೆ ಮತ್ತು ಜೈಹಿಂದ್ ಆಟದ ಮೈದಾನದ ಸುತ್ತ ಮುತ್ತಲಿನ ಪ್ರದೇಶ, ತಹಶೀಲ್ಧಾರರ ಕಾರ್ಯಾಲಯದ ಎದುರು ಫಾಸ್ಟ್ ಫುಡ್, ತಿಂಡಿ ತಿನಿಸುಗಳ ಪೆಟ್ಟಿಗೆ ಮತ್ತಿತರ ರೀತಿಯ ವ್ಯಾಪಾರ ವಹಿವಾದು ಹೆಚ್ಚುತ್ತಿದ್ದು ಬಹಳಷ್ಟು ಅಂಗಡಿಗಳಲ್ಲಿ ಗ್ಯಾಸ್ ಸಿಲೆಂಡರ್ ಗಳ ಬಳಕೆ ನಡೆಯುತ್ತಿದೆ, ಮನೆ ಬಳಕೆಯ ಸಿಲೆಂಡರ್ ಗಳನ್ನು ಸಹ ಬಳಸಲಾಗುತ್ತಿದೆ ಇದರಿಂದಾಗಿ ಅಗ್ನಿ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಪಾರ್ಕಿಂಗ್ ಸ್ಥಳ, ಮಳೆ ನೀರು ಹರಿದು ಹೋಗುವ ಕಾಲುವೆ ಮುಚ್ಚುವಂತೆ ಬೇಕಾ ಬಿಟ್ಟಿ ಪೆಟ್ಟಿಗೆ ಅಂಗಡಿಗಳಿಗೆ ಅವಕಾಶ ಮಾಡಿಕೊಟ್ಟಂತಿದ್ದು, ಅದನ್ನು ಕಂಡು ಕಾಣದಂತೆ ಸಂಬಂಧಿತ ಪುರಸಭೆಯವರು ಬಾಯಿ ತೆಗೆದು ಕಣ್ಣು ಮುಚ್ಚಿ ಕುಳಿತಂತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಂತಿದೆ . ಅಲ್ಲದೇ ಪಟ್ಟಣದ ಮುಖ್ಯ ರಸ್ತೆಗಳ ಅಂಚಿಗೆ ಮತ್ತು ರಸ್ತೆ ತಿರುವಿನ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ತೊಡಗಾಗುವಂತೆ ಕೆಲ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು,ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಇತರೆ ಇಲಾಖೆಗಳು ಕಾಲಕಾಲಕ್ಕೆ ಕಟ್ಟೆಚ್ಚರ ವಹಿಸಿ,ಯಾವುದೇ ಮುಲಾಜಿಗೆ ಒಳಗಾಗದೇ ಅಪಾಯಕಾರಿ ಸ್ಥಳ ಗುರುತಿಸಿ,ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಟ್ಟಣದ ಅಂದ ಚಂದಕ್ಕೂ ಮತ್ತು ಬೀದಿ ವ್ಯಾಪಾರಿಗಳ ದೈನಂದಿನ ಜೀವನಕ್ಕೂ ಹೊಡೆತ ಬೀಳದಂತೆ, ಸಂಬಂಧಿತ ಇಲಾಖೆ ಫುಡ್ ಕೋರ್ಟ್ ನಿರ್ಮಾಣ ಮತ್ತಿತರ ಸೂಕ್ತ ಸ್ಥಳ ನಿಗದಿಗೊಳಿಸಿ,ತನ್ನ ಜವಾಬ್ದಾರಿ ಮೆರೆಯಬೇಕೆನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ. ದಿನ ನಿತ್ಯ ಹಳ್ಳಿಯಿಂದ ತಲೆ ಮೇಲೆ ಬುಟ್ಟಿ ಹೊತ್ತು ಹಣ್ಣು ತರಕಾರಿ ಮಾರುವ ಬಡ ಮಹಿಳೆಯರಿಗೆ, ಬೀದಿ ಬದಿ ಮಾರಾಟ ಮಾಡಲು ,ಕುಡಿಯುವ ನೀರು ಶೌಚಾಲಯದಂತ ಮೂಲಸೌಕರ್ಯಗಳ ಕೊರತೆ ಇರುವ ಪಟ್ಟಣ ವ್ಯಾಪ್ತಿಯಲ್ಲಿ,ಎಲ್ಲೆಲ್ಲಿಂದಲೋ ಬಂದ ಇತರ ಕೆಲವರು ,ಯಾರ್ಯಾರಿಗೋ ವಸೂಲಿ ಹಚ್ಚಿ, ಪ್ರಭಾವ ಬಳಸಿ,ಬೇಕಾ ಬಿಟ್ಟಿಯಾಗಿ 10-20 ಫೂಟ್ ಉದ್ದ – ಅಗಲದ ಅಂಗಡಿಗಳನ್ನು ರಾಜಾ ರೋಷವಾಗಿ ತೆರೆದು,ತಮ್ಮದೇ ಮಾಲ್ಕಿ ಹಕ್ಕು ಎಂಬಂತೆ ಇನ್ನಾರಿಗೋ ಬಾಡಿಗೆ ನೀಡಿ ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು,ಎಂಜಲು ಕಾಸಿಗೆ ಕೈಯೊಡ್ಡುವ ಕೆಲವರು ಅದಕ್ಕೆ ಸಾಥ್ ನೀಡಿ,ಅಂಕೋಲಾವನ್ನು ಗೂಡಂಗಡಿ ಮಹಾನಗರವನ್ನಾಗಿ ಪರಿವರ್ತಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಕೆಲವರು ವ್ಯಂಗ್ಯದ ಮಾತನಾಡುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ