ತಂಗುದಾಣವಿಲ್ಲದೇ ಸಾರ್ವಜನಿಕರ ಪರದಾಟ – ತೆಂಗಿನ ಗರಿಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿದ ಮಹಿಳೆಯರು
ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ
ಅಂಕೋಲಾ: ಈ ಊರಿನಲ್ಲಿ ಕೇವಲ ರೈಲ್ವೆ ಮಾರ್ಗ ಮಾತ್ರ ಇರದೇ, ರೈಲ್ವೆ ನಿಲ್ದಾಣವೇ ಇದೆ. ಹಾಗಂತ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆಯಾದರೂ, ಚತುಷ್ಪಥ ಕಾಮಗಾರಿ ನಡೆದಿರುವ ಈ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಆಗಲಿ, ಸಂಬoಧಿತ ಇತರರಾಗಲಿ ತಂಗುದಾಣ ನಿರ್ಮಾಣ ಮಾಡದಿರುವುದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಉರಿ ಬಿಸಿಲಿನಲ್ಲಿ ರಕ್ಷಣೆಗಾಗಿ ಸ್ಥಳೀಯ ಮಹಿಳೆಯರೇ, ತೆಂಗಿನ ಗರಿಗಳಿಂದ ತಾತ್ಕಾಲಿಕ ತಂಗುದಾಣ ನಿರ್ಮಿಸಿಕೊಂಡು,ತಮ್ಮ ವಿನೂತನ ರೀತಿಯ ಸಾಂಕೇತಿಕ ಪ್ರತಿಭಟನೆ ಮಾಡಿ,ಸಂಬoಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಸೆಳೆಯುವ ಯತ್ನ ಮಾಡಿದ್ದಾರೆ.
ಕಾರವಾರ- ಅಂಕೋಲಾ ಮಾರ್ಗ ಮಧ್ಯೆ ಅಂಕೋಲಾ ತಾಲೂಕಿನ ಹಾರವಾಡ ಎನ್ನುವ ಗ್ರಾಮ ಒಂದಿದ್ದು ಆಧುನಿಕತೆಯ ಇಂದಿನ ದಿನಗಳಲ್ಲಿಯೂ ಇಲ್ಲಿ ಕೆಲ ಮೂಲಭೂತ ಸಮಸ್ಯೆಗಳ ಕೊರತೆ ಎದ್ದು ಕಾಣುತ್ತಿದೆ. ಈ ಊರಿನಲ್ಲಿ ರೈಲ್ವೆ ಮಾರ್ಗ ಹಾದು ಹೋಗಿದೆಯಲ್ಲದೇ ರೈಲ್ವೆ ನಿಲ್ದಾಣವೇ ಇದೆ. ಆದರೆ ಇಲ್ಲಿನ ಜನಸಾಮಾನ್ಯರು ಪ್ರತಿನಿತ್ಯ ತಾಲೂಕ ಪ್ರದೇಶ ,ಜಿಲ್ಲಾ ಪ್ರದೇಶ ಮತ್ತಿತರಡೆ ಓಡಾಡುವ ಹೆದ್ದಾರಿ ಅಂಚಿಗೆ ಮಾತ್ರ ಬಸ್ ಮತ್ತಿತರ ವಾಹನಗಳಿಗಾಗಿ ಕಾಯಲು ಬಂದು ನಿಲ್ಲುವ, ಬಹು ಮುಖ್ಯ ಸ್ಥಳದಲ್ಲಿ ಕನಿಷ್ಟ ಪಕ್ಷ ತಂಗುದಾಣವೂ ಇಲ್ಲದೇ ಪ್ರಯಾಣಿಕರು ಪರಿತಪಿಸುವಂತಾಗಿದೆ.
ಇದರಿoದ ರೋಸಿ ಹೋದ ಗ್ರಾಮದ ಮಹಿಳೆಯರೇ ಮುಂದಾಗಿ,ತೆAಗಿನ ಗರಿಗಳಿಂದ ಹೆದ್ದಾರಿ ಅಂಚಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ, ಹಾರವಾಡಾ ಬಸ್ ನಿಲ್ದಾಣ ಎಂದು ಬೋರ್ಡ್ ಲಗತ್ತಿಸಿ,ತಮ್ಮ ಆಕ್ರೋಶ ಹೊರಹಾಕ್ಕಿದ್ದು,ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. ಹಾಗಂತ ಇಲ್ಲಿನವರು ಹೆದ್ದಾರಿ ಅಂಚಿಗೆ ತಂಗುದಾಣದ ಬೇಡಿಕೆಯನ್ನು ಇಡುತ್ತಿರುವುದು ಸರಿಯಾಗಿಯೇ ಇದೆ ಎನ್ನುತ್ತಾರೆ ಅಲ್ಲಿನ ಸಮಸ್ಯೆ ಅರಿವಿರುವ ಪ್ರಜ್ಞಾವಂತರು.
ಈ ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ಅಕ್ಕ ಪಕ್ಕಗಳಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಹತ್ತಾರು ಪ್ರಯಾಣಿಕರ ತಂಗುದಾಣಗಳಿದ್ದವಾದರೂ, ಹೆದ್ದಾರಿ ಚಥುಷ್ಪತ ಕಾಮಗಾರಿ ಸಂದರ್ಭದಲ್ಲಿ , ಗುತ್ತಿಗೆದಾರ ಐ ಆರ್ ಬಿ ಕಂಪನಿಯವರು ಅವುಗಳನು ನೆಲಸಮಗೊಳಿಸಿ, ಜಾಗಾ ಖುಲ್ಲಾ ಪಡಿಸಿದೆ. ಬಳಿಕ ಅಂತಹ ಕೆಲವು ಸ್ಥಳಗಳ ಅಕ್ಕ ಪಕ್ಕ ಮಾತ್ರ ತಗಡಿನ ಶೆಲ್ಟರ್ ಮಾದರಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿ, ಅದೇಕೊ ಹೆದ್ದಾರಿಯ ಎರಡೂ ಕಡೆ ಅವನ್ನು ನಿರ್ಮಾಣ ಮಾಡದೇ,ಕೆಲವನ್ನು ಕೈ ಬಿಟ್ಟು, ಈ ವರೆಗೂ ಮಾಡದೇ ಅಷ್ಟಕ್ಕೆ ಕೈ ತೊಳೆದು ಕೊಂಡAತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ನೂರಾರು ಕುಟುಂಬಗಳು ವಾಸವಾಗಿರುವ ಹಾರವಾಡ ಭಾಗದ ಜನರು ತಮ್ಮ ದಿನನಿತ್ಯದ ವ್ಯಾಪಾರ- ವಹಿವಾಟು, ಜೀವನ ನಿರ್ವಹಣೆ, ವಿದ್ಯಾಭ್ಯಾಸ, ಉದ್ಯೋಗ, ಮತ್ತಿತರ ಕೆಲಸ ಕಾರ್ಯಗಳಿಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಬರಲು ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ವಾಹನಗಳಿಗೆ ಕಾಯಬೇಕಾಗಿದೆ. ಆದರೆ, ತಂಗುದಾಣ ಇಲ್ಲದ ಕಾರಣ ಇಲ್ಲಿ ಬಸ್ ನಿಲುಗಡೆ ಸಹ ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಬಾರಿ ಬಿಸಿಲಿನ ತಾಪ ತೀವ್ರವಾಗಿರುವುದರಿಂದ ಮಹಿಳೆಯರು,ಶಾಲಾ ಮಕ್ಕಳು ಸುಡು ಬಿಸಿಲಿನಲ್ಲಿ ಪ್ರತಿದಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದರು, ಬಿಸಿಲಿನ ತಾಪಕ್ಕೆ ಕೆಲವರು ತಲೆ ಸುತ್ತಿ ಬಿದ್ದ ಘಟನೆಗಳು ನಡೆದಿವೆ. ಇದನ್ನು ಮನಗಂಡ ಸ್ಥಳೀಯ ಮಹಿಳೆಯರು ಸ್ವತಃ ಕಾರ್ಯಪೃವೃತ್ತರಾಗಿ ತಾವೇ ಮುಂದೆ ನಿಂತು, ಕಂಬಗಳನ್ನು ಹುಗಿದು ಮೇಲ್ಛಾವಣಿ ನಿರ್ಮಾಣ ಮಾಡಿ ಮೇಲ್ಬಾಗದಲ್ಲಿ ಮತ್ತು ಸುತ್ತ ಮುತ್ತ ತೆಂಗಿನ ಗರಿಗಳನ್ಪು ಹೊದಿಸಿ ತಾತ್ಕಾಲಿಕವಾಗಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುನೀಲ ನಾಯ್ಕ ಹೊನ್ನಿಕೇರಿ,ಸಾಮಾಜಿಕ ಜಾಲತಾಣಗಳ ಮೂಲಕ ಇಲ್ಲಿಯ ಸಮಸ್ಯೆಯನ್ನು ತೆರೆದಿಡುವ ಪ್ರಯತ್ನ ಮಾಡಿದರೆ,ಸಾಮಾಜಿಕ ಕಾರ್ಯಕರ್ತ ಮತ್ತು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಸಹ,ಸ್ಥಳೀಯರ ಬೇಡಿಕೆಗೆ ಬೆಂಬಲ ಸೂಚಿಸಿ, ತಂಗುದಾಣದ ಶೀಘ್ರ ನಿರ್ಮಾಣ ಮಾಡುವಂತೆ ಸಂಬoಧಿಸಿದವರನ್ನು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ