ಗಮನಸೆಳೆಯುತ್ತಿದೆ ರಾಮಮಂದಿರ ಮಾದರಿ; 108 ಸ್ಥಳಗಳಲ್ಲಿ ಪ್ರದರ್ಶನ ಮಾಡುವ ಗುರಿ : ಊರೂರು ಸುತ್ತುತ್ತಾ ಜಾಗೃತಿ ಮೂಡಿಸುತ್ತಿರುವ ರಾಮಭಕ್ತ
ಭಟ್ಕಳ: ಅಯೋಧ್ಯೆಯ ರಾಮಮಂದಿರವನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ, ಆದರೆ ಎಲ್ಲದಕ್ಕೂ ಕಾಲ ಕೂಡಿಬರಬೇಕು. ಅಲ್ಲಿಯವರೆಗೂ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ರಾಮಮಂದಿರದ ಚಿತ್ರವನ್ನು ನೋಡಿ ತೃಪ್ತಿಪಟ್ಟುಕೊಳ್ಳಬೇಕು ಅಷ್ಟೇ. ಆದರೆ ಇಲ್ಲೊಬ್ಬ ರಾಮನ ಭಕ್ತ ತಾನೂ ಇವೆಲ್ಲಕ್ಕಿಂತ ವಿಭಿನ್ನವಾಗಿ ರಾಮಭಕ್ತರಿಗೆ ರಾಮಮಂದಿರವನ್ನು ದರ್ಶನ ಮಾಡಿಸಲು ಪಣತೊಟ್ಟು ನಿಂತಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರಾದ ಇವರ ಹೆಸರು ವಿನಯ್ ರಾಮ್ ಅಂತ. ಇವರೆ ರಾಮಮಂದಿರದ ಮಾದರಿಯನ್ನು ಸಿದ್ಧಪಡಿಸಿಕೊಂಡು ಊರೂರು ಸುತ್ತುತ್ತಿರುವ ರಾಮಭಕ್ತ. ಇವರ ಉದ್ದೇಶ ಇವರ ಮಾತಿನಲ್ಲಿ ಕೇಳಿ.
ಸನಾತನ ಧರ್ಮದ ಕುರಿತಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ವಯಸ್ಸಾದವರಿಗೆ, ರಾಮಜನ್ಮಭೂಮಿಗೆ ತೆರಳಲು ಅಶಕ್ತರಾದವರ ಮನಸ್ಸಿಗೆ ಖುಷಿ ನೀಡುವ ಮತ್ತು ಮುಂಬರುವ ದಿನಗಳಲ್ಲಿ ಶ್ರೀರಾಮಮಂದಿರಕ್ಕೆ ಭಕ್ತರು ತೆರಳಲು ಪ್ರೆರೇಪಣೆ ನೀಡುವ ಸಂಕಲ್ಪದೊoದಿಗೆ ಈ ಪಯಣ ಶುರುಮಾಡಲಾಗಿದೆ.
ಒಟ್ಟು 108 ಸ್ಥಳಗಳಲ್ಲಿ ಈ ಮಾದರಿಯನ್ನು ಪ್ರದರ್ಶನ ಮಾಡುವ ಗುರಿ ಹೊಂದಿರುವ ವಿನಯ್ ರಾಮ ಅದಾಗಲೇ 66 ಸ್ಥಳಗಳನ್ನು ಪೂರ್ಣಗೊಳಿಸಿ ಇದೀಗ 67 ನೇ ಪ್ರದರ್ಶನವನ್ನು ಭಟ್ಕಳದ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಏರ್ಪಡಿಸಿದ್ದಾರೆ. ಜೂನ್ 15 ರಿಂದ ಜೂನ್ 22 ರವರೆಗೆ ಭಕ್ತಾದಿಗಳ ದರ್ಶನಕ್ಕೆ ರಾಮಮಂದಿರದ ಮಾದರಿಯನ್ನು ಪದರ್ಶನಕ್ಕಿಡಲಾಗಿದ್ದು. ರಾಮಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆಯುವ ಸದಾಶಯವನ್ನು ಕಲಾವಿಧ ವಿನಯ್ ರಾಮ್ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ