ಅಂಕೋಲಾ : ಜಿಲ್ಲೆ ಹಾಗೂ ತಾಲೂಕಿನಲ್ಲಿ ಡೆಂಗ್ಯೂ ಮಾರಿ ಆರ್ಭಟ ಜೋರಾಗಿದ್ದು, ತಾಲೂಕಿನ ಭಾವಿಕೇರಿಯ ಹರೇರಾಮ ಭಟ್ಟ ಎನ್ನುವ ವ್ಯಕ್ತಿಯೋರ್ವ ಡೆಂಗ್ಯು ಜ್ವರಕ್ಕೆ ಬಲಿಯಾದ ಶಂಕೆಯ ಬೆನ್ನಿಗೇ, ಪಟ್ಟಣ ವ್ಯಾಪ್ತಿಯ ಇನ್ನೋರ್ವ ವಿವಾಹಿತನೂ ಡೆಂಗಿ ರೋಗಕ್ಕೆ ಬಲಿಯಾದನೇ ಎಂಬ ಮಾತು ಕೇಳಿ ಬರಲಾರಂಭಿಸಿದ್ದು, ತಾಲೂಕಿನ ಮಟ್ಟಿಗೆ ಈ ಎರಡೂ ಸಾವಿನ ಸುದ್ದಿ ಅತೀವ ಬೇಸರ ಹಾಗೂ ಆತಂಕದ ವಿಚಾರವಾದಂತಿದೆ.
ಶಾಂತಾದುರ್ಗಾ ದೇವಸ್ಥಾನದ ಹತ್ತಿರದ ನಿವಾಸಿ ನಿಶಾಂತ ದೇವಿದಾಸ ನಾರ್ವೇಕರ ಮೃತ ದುರ್ದೈವಿಯಾಗಿದ್ದಾನೆ. ಗೋಮಾಂತಕ ಸಮಾಜ ಅಭಿವೃದ್ದಿ ಸಂಘದ ಸಕ್ರಿಯ ಸದಸ್ಯರಾಗಿ, ಗೋಮಂತಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಸಮಾಜದ ಎಳ್ಗೆಯಲ್ಲಿ ತೊಡಗಿಸಿಕೊಂಡಿದ್ದ ಇವರು, ವೆಲ್ಡಿಂಗ್ ವರ್ಕ ಶಾಪ್ ಮೂಲಕ ತಮ್ಮ ಸಂಸಾರ ನಿಭಾಯಿಸುತ್ತಿದ್ದರು. ಇತ್ತೀಚೆಗೆ ಇವರನ್ನು ಕಾಡಿದ್ದ ಆಕಸ್ಮಿಕ ರೋಗ ಲಕ್ಷಣಗಳಿಂದ ಪಟ್ಟಣದ ಖಾಸಗಿ ಕ್ಲಿನಿಕ್ ಒಂದರಲ್ಲಿ ತಪಾಸಣೆಗೊಳಪಟ್ಟು ಬಳಿಕ, ಕಾರವಾರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಎನ್ನಲಾಗಿದೆ.,
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.ಆರೋಗ್ಯ ಇಲಾಖೆಯಿಂದ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ. ಮನೆಗೆ ಆಸರೆಯಾಗಿ,ಇಬ್ಬರು ಮಕ್ಕಳ ತಂದೆಯಾಗಿರುವ ನಿಶಾಂತ ನಾರ್ವೇಕರ ಅಕಾಲಿಕ ಸಾವಿನಿಂದ, ನಾರ್ವೇಕರ ಕುಟುಂಬ ಅತೀವ ಶೋಕ ಹಾಗೂ ಅಗಲುವಿಕೆ ನೋವಿನಲ್ಲಿದೆ. ಇವರ ಸಾವಿನಿಂದ ಗೋಮಾಂತಕ ಸಮಾಜಕ್ಕೂ ತುಂಬಬಾರದ ನಷ್ಟವಾಗಿದ್ದು, ಭಾಸ್ಕರ ನಾರ್ವೇಕರ, ದಿನಕರ ಅಂಕೋಲೆಕರ, ಶ್ರೀಧರ ಮುರ್ಡೇಶ್ವರ, ಸುಭಾಸ ನಾರ್ವೇಕರ ಸೇರಿದಂತೆ ಹಲವು ಪ್ರಮುಖರು, ನಿಶಾಂತ ಅಕಾಲಿಕ ನಿಧನಕ್ಕೆ ತೀವೃ ಸಂತಾಪ ಸೂಚಿಸಿದ್ದಾರೆ.
ಮೃತ ನಿಶಾಂತ, ತನ್ನ ಸರಳ ನಡೆ-ನುಡಿ, ಜನಪರ ವ್ಯಕ್ತಿತ್ವದ ಮೂಲಕ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ದಿನದಿಂದ ದಿನಕ್ಕೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ಡೆಂಗ್ಯೂ ಮಾರಿ ಆರ್ಭಟಿಸುತ್ತಲೇ ಇದೆ.ಜ್ವರ ಮತ್ತಿತರ ರೋಗ ಲಕ್ಷಣಗಳುಳ್ಳವರು ಅವನ್ನು ನಿರ್ಲಕ್ಷಿಸಿದೇ, ಅಥವಾ ಸ್ವಯಂ ವೈದ್ಯಕೀಯ ಉಪಚಾರ ಪದ್ಧತಿ ಅನುಸರಿಸದೇ, ಕೂಡಲೇ ಪರಿಣಿತ ವೈದ್ಯರ ಸಲಹೆ ಪಡೆದು, ಚಿಕಿತ್ಸೆ ಪಡೆದುಕೊಳ್ಳಬೇಕಿದೆ.
ಸಾರ್ವಜನಿಕರು ಯಾರೂ ಕೂಡ ಅನಗತ್ಯ ಆತಂಕ ಪಡದೇ ರೋಗ ಹರಡುವಿಕೆ ವಿರುದ್ಧ ಸೂಕ್ತ ಮುಂಜಾಗೃತೆ ವಹಿಸಿ, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಮತ್ತು ತಮ್ಮ ವಾಸಸ್ಥಳ ಮತ್ತಿತರೆಡೆ ಸೊಳ್ಳೆ ಸಂತತಿ ಉತ್ಪತ್ತಿಗೆ ಕಾರಣವಾಗುವ ನೀರು ನಿಲ್ಲದಂತೆ ಕ್ರಮ ವಹಿಸಿ,ಸ್ವಚ್ಛತೆಗೆ ಆದ್ಯತೆ ನೀಡಿ,ಡೆಂಗ್ಯೂ ನಿವಾರಣೆಗೆ ಆರೋಗ್ಯ ಇಲಾಖೆ ಜೊತೆ ಕೈ ಜೋಡಿಸಬೇಕಿದೆ.ಪುರಸಭೆ ಹಾಗೂ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಿದೆ.
ಅಂತೆಯೇ ಇತರೆ ಆರೋಗ್ಯವಂತ ನಾಗರಿಕರು, ತುರ್ತು ಸಂದರ್ಭಗಳಲ್ಲಿ , ಅವಶ್ಯಕತೆ ಇರುವ ರೋಗಿಗಳಿಗೆ ಬಿಳಿರಕ್ತಕಣ ಪೂರೈಸಿ, ರಕ್ತದಾನ ಮಾಡಿ ಪರರ ಜೀವ ಉಳಿಸುವ ಕಾರ್ಯಕ್ಕೆ ಮಾನವೀಯ ನೆಲೆಯಲ್ಲಿ ಸೇವೆ ನೀಡುವುದು ಈ ಹಿಂದೆಂದಿಗಿಂತಲೂ ಅತ್ಯವಶ್ಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ