Important
Trending

ಅಂಕೋಲಾ ಶಿರೂರು ಬಳಿ ಮತ್ತೆ ಗುಡ್ಡ ಕುಸಿವ ಆತಂಕ ! ಅಲ್ಲಲ್ಲಿ ಬಿರುಕು? ಇನ್ನೆಷ್ಟು ದಿನ ಸಂಚಾರ ಬಂದ್?

ಅಂಕೋಲಾ :  ಶಿರೂರು ಬಳಿ  ಗುಡ್ಡ ಕುಸಿತದಿಂದ ಭೀಕರ ದುರಂತ ಸಂಭವಿಸಿ,ಈಗಾಗಲೇ 4 ಮೃತದೇಹ   ಪತ್ತೆಯಾಗಿದ್ದು, ಘಟನೆಯಲ್ಲಿ ಸಿಲುಕಿ ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ಗುಡ್ಡ ಕುಸಿತ ಪ್ರದೇಶದ ಪಕ್ಕದ ಇನ್ನೊಂದೆಡೆ, ಅಲ್ಲಲ್ಲಿ ಬಿರುಕು ಬಿಟ್ಟಂತಿದ್ದು,ಮಳೆ ಮತ್ತಿತರ ಕಾರಣಗಳಿಂದ ಬಿರುಕಿನ ಅಂತರ ಹೆಚ್ಚುತ್ತಲೇ ಇದ್ದು ಅಲ್ಲಿಯೂ  ಮಣ್ಣು ಕುಸಿಯುವ ಸಂಭವ ಹೆಚ್ಚಿದೆ.

ಈ ಮೊದಲೇ ಕುಸಿದ ಮಣ್ಣು ತೆರವು ಕಾರ್ಯ ಆರಂಭದಲ್ಲಿ ವಿಳಂಬವಾಗಿದ್ದು, ಸ್ಥಳೀಯ ಶಾಸಕರು, ಸಂಸದರು ಉಸ್ತುವಾರಿ ಮಂತ್ರಿಗಳು,ಜಿಲ್ಲೆಯ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ, ಚತುಷ್ಪಥ ಕಾಮಗಾರಿ ಗುತ್ತಿಗೆದಾರ ಕಂಪನಿ ತಡವಾಗಿ ಎಚ್ಚೆತ್ತುಕೊಂಡು, ಮಣ್ಣು ತೆರವಿಗೆ ಸ್ವಲ್ಪ ವೇಗ ನೀಡಿತ್ತಾದರೂ,ಮತ್ತೆ ನಾನಾ ಕಾರಣಗಳಿಂದ ಕಾರ್ಯಚರಣೆಗೆ ತೊಡಕಾಗುತ್ತಿದೆ .

ಇದರಿಂದ ಅಂಕೋಲಾ ಕುಮಟಾ ಹೆದ್ದಾರಿ ಮಾರ್ಗ ಸಂಚಾರ ಮುಕ್ತಗೊಳ್ಳಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.ಹಾಗಾಗಿ  ಹೆದ್ದಾರಿ ಸಂಚಾರಿಗಳ ಪಾಲಿಗೆ ಬದಲಿ ಮಾರ್ಗ ಬಳಕೆ ಅನಿವಾರ್ಯವಾಗಲಿದೆ. ಶಿರೂರು ಶಾಲೆ ಆವರಣಕ್ಕೆ ಹೊಂದಿಕೊಂಡು ಹಿಂಬದಿ ಗುಡ್ಡ ಕುಸಿತವಾಗಿದೆ.

ಅದೃಷ್ಟವಶಾತ್ ಶಾಲೆಗೆ ರಜೆ ಇಲ್ಲದಿದ್ದರೆ ತಮ್ಮ ಮಕ್ಕಳು ಮಕ್ಕಳು ಇಲ್ಲಿಯೇ ಆಟ ಆಡಿಕೊಂಡು ಓಡಾಡಿಕೊಂಡಿರುತ್ತಿದ್ದರೇನೋ ಎಂಬ ಆತಂಕ ವ್ಯಕ್ತಪಡಿಸಿದ ಕೆಲ ಪಾಲಕರು,ಶಾಲೆ ಆರಂಭವಾದರೂ ನಮ್ಮ ಮಕ್ಕಳನ್ನು ಕಳಿಸುವುದು ಹೇಗೆ ಎಂಬ ಪ್ರಶ್ನೆ ಮುಂದಿಡುತ್ತಿದ್ದು ಶಿಕ್ಷಣ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳು ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕಿದೆ.

ರಾಷ್ಟ್ರೀಯ ಹೆದ್ದಾರಿಯ ಇತರೆ ಒಂದೆರಡು ಕಡೆ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಧರೆಕುಸಿದಿದೆ. ಬಬ್ರುವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ನದಿಭಾಗ, ಕೋಡಿ ಬೀಚ್ ಬಳಿ ಸಾಗುವ ರಸ್ತೆ ಅಂಚಿನ ಗುಡ್ಡ,ಅಗಸೂರು ವ್ಯಾಪ್ತಿಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಜನ ವಸತಿ ಹೊರತಾದ ಪ್ರದೇಶ,ತಾಲೂಕಿನ ಇತರೆ ಕೆಲವೆಡೆ ಅಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು, ಅದೃಷ್ಟ ವಶಾತ್ ಯಾವುದೇ ಸಾವು ನೋವುಗಳಾಗಿಲ್ಲ. ಆದರೂ ಅಂತಹ ಪ್ರದೇಶಗಳಲ್ಲಿ ಓಡಾಡುವಾಗ ಸ್ಥಳೀಯರು ಮುನ್ನೆಚರಿಕೆ ಕೈಗೊಳ್ಳಬೇಕಿದೆ.ಬೇಕಾ ಬಿಟ್ಟಿ ಬ್ಲಾಸ್ಟಿಂಗ್ ,ಭೂಮಿಯ ಒಡಲು ಅಗೆಯುತ್ತಿರುವುದು,ಜೋರಾದ ಮಳೆ,ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಮತ್ತಿತರ ಕಾರಣಗಳು ಅದೇನೇ ಇದ್ದರೂ, ಸಂಬಂಧಿತ ಇಲಾಖೆಗಳು ಗುಡ್ಡ ಕುಸಿತಕ್ಕೆ ವೈಜ್ಞಾನಿಕ ಕಾರಣ ಕಂಡು ಹಿಡಿದು,ಸಂಭವನೀಯ ಹಾನಿ ಮತ್ತು ಅನಾಹುತ ತಪ್ಪಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button