ಅಂಕೋಲಾ: ಕಳೆದ ಸುಮಾರು 5-6 ದಶಕಗಳ ಹಿಂದೆ ನದಿ ನೀರಿನ ಪ್ರವಾಹದಿಂದ ತತ್ತರಿಸಿ, ನದಿ ತಟ ಬಿಟ್ಟು ಎತ್ತರದ ಗುಡ್ಡದಲ್ಲಿ ಬದುಕು ಕಟ್ಟಿಕೊಂಡಿದ್ದವರು,ಈಗ ಗುಡ್ಡ ಕುಸಿತದ ಆತಂಕದಿಂದ ಆ ಸ್ಥಳವನ್ನು ಬಿಟ್ಟು ಬೇರೆಡೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಶಿರೂರು ಗುಡ್ಡ ಕುಸಿತದ ಭೂತ ಹತ್ತಿರದ ನಿವಾಸಿಗಳ ನಿದ್ದೆಗೆಡಿಸಿದೆ.
1961 ರಲ್ಲಿ ಗಂಗಾವಳಿ ನದಿಗೆ ಭೀಕರ ಪ್ರವಾಹ ಬಂದು ನದಿ ತಟದಲ್ಲಿ ವಾಸವಾಗಿದ್ದ ಹಲವರು ಕಂಗೆಟ್ಟು ಅತಂತ್ರವಾಗಿದ್ದರು. ಈ ವೇಳೆ ಸರ್ಕಾರ ಅವರಲ್ಲಿಯೇ ಕೆಲವರಿಗೆ ನದಿ ತಟದಿಂದ ಎತ್ತರದ ಜಾಗ ನೀಡಿ ಅಲ್ಲಿ ಮನೆಕಟ್ಟಿಕೊಳ್ಳಲು ಅವಕಾಶ ನೀಡಿತ್ತು. ಅಂದಿನಿಂದ ಸರಿ ಸುಮಾರು 5 6 ದಶಕಗಳ ವರೆಗೆ ತಮ್ಮ ಬದುಕು ಕಟ್ಟಿಕೊಂಡು ಕೆಲ ಕುಟುಂಬಗಳು ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ನೆಮ್ಮದಿಯ ಜೀವನ ನಡೆಸುತ್ತಿದ್ದರು.
ಆದರೆ ಎಂದು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಯಿತೋ ಅಂದಿನಿಂದ ನಾನಾ ಕಾರಣಗಳಿಗಾಗಿ ಆತಂಕಗೊಳ್ಳುವಂತಾಗಿತ್ತು. ಬರಬರುತ್ತ ಇವರ ಕಾಲಡಿಯೇ ರಾಕ್ಷಸ ಬಂದು ನಿಂತಂತೆ , ಇವರು ಕಟ್ಟಿ ಕೊಂಡಿದ್ದ ಮನೆ ಮತ್ತಿತರ ಕಟ್ಟಡ ಬಿಟ್ಟು ಕೊಡಬೇಕಾದ ಪರಿಸ್ಥಿತಿ, ತಲೆದೋರಿತ್ತು. ಆದರೆ ಅದಕ್ಕೆ ಸೂಕ್ತ ಪರಿಹಾರವೂ ಸಕಾಲದಲ್ಲಿ ಸಿಗದೇ ಶಿರೂರು ಗುಡ್ಡ ಕುಸಿತ ಪ್ರದೇಶದ ಅತೀ ಹತ್ತಿರ ಗುಡ್ಡ ಪ್ರದೇಶದ ಮೇಲೆಯೇ ವಾಸಿಸುತ್ತಿರುವ ನಿವಾಸಿಗಳು ಈಗ ಮತ್ತೆ ಅತಂತ್ರರಾಗುತ್ತಿದ್ದಾರೆ.
ಆಗಾಗ ಅಬ್ಬರಿಸುವ ಗಂಗಾವಳಿ ನದಿಯ ಪ್ರವಾಹದಿಂದ ತೀರದ ಜನರು ಶಾಶ್ವತ ಪರಿಹಾರಕ್ಕೆ ಮೊರೆಯಿಟ್ಟಾಗ ಸರ್ಕಾರ 1964ರಲ್ಲಿ ನೀಡಿದ್ದ ಎತ್ತರದ ಜಾಗದಲ್ಲಿ ಸಾವಿರಾರು ಜನಕ್ಕೆ ಪುನರ್ವಸತಿಗೆಂದು ಭೂಮಿ ನೀಡಿತ್ತು. ಆದರೆ ಸರಿಯಾದ ಹಕ್ಕು ಪತ್ರಗಳನ್ನು ನೀಡಿರಲಿಲ್ಲ. ಅದೇ ಸಂದರ್ಭದಲ್ಲಿ ಗುಡ್ಡ ಕುಸಿತದ ಮುನ್ನೂರು ಮೀಟರ್ ಹಿಂಭಾಗದಲ್ಲಿ ಅದೇ ಗುಡ್ಡದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಯ ಅಂಚಿನ ಜಾಗದಲ್ಲಿ ಮೂರು ಕುಟುಂಬಗಳು ಸರ್ಕಾರದಿಂದ ನೀಡಿದ ಭೂಮಿಯಲ್ಲಿ ಮನೆ ಮಾಡಿಕೊಂಡಿದ್ದವು. ಇನ್ನೂ ಮುಂದೆ ಪ್ರವಾಹದ ಆತಂಕವಿಲ್ಲವೆಂದು 1-2 ತಲೆಯಾರಿನಿಂದ ಬದುಕು ಕಟ್ಟಿಕೊಂಡಿದ್ದ ಈ ಕುಟುಂಬಗಳು . ದನಕರುಗಳು, ಕೋಳಿ, ಬೆಕ್ಕು ನಾಯಿಗಳನ್ನು ಸಾಕಿಕೊಂಡು ಇದ್ದುದರಲ್ಲಿಯೇ ತೃಪ್ತಿಯ ಜೀವನ ಸಾಗಿಸುತ್ತಾ ಬಂದಿದ್ದರು.
ಚತುಸ್ಫಥ ಹೆದ್ದಾರಿ ಕಾಮಗಾರಿಯ ನೆಪದಲ್ಲಿ ನಡೆದ ಕೆಲ ಬ್ಲಾಸ್ಟಿಂಗ್ ಮತ್ತು ಗುಡ್ಡ ಕೊರೆವ ಕಾರ್ಯ ಆಗಾಗ ಇವರ ಮನೆ ಮತ್ತು ಮನಗಳನ್ನು ನಡುಗಿಸಲಾರಂಭಿಸಿತ್ತು. ಬರ ಬರುತ್ತ ಕಾಮಗಾರಿ ಇವರ ಮನೆಗಳ ಹತ್ತಿರವೇ ಬಂದು ,ಇವರಿಗೆ ನೀಡಲಾದ ಜಾಗಗಳಲ್ಲಿ ಮನೆಯನ್ನು ಬಿಡದಂತೆ ಸರ್ವೆ ಕಾರ್ಯ ನಡೆಸಿ, ಮನೆಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ.
ಆ ಮನೆಗಳಿಗೆ ಪರ್ಯಾಯ ಜಾಗವನ್ನು ಇತ್ತೀಚಿಗೆ ನೀಡಿದ್ದು, ಒಬ್ಬರಿಗೆ ನೀಡಿದ ಜಾಗದಲ್ಲಿ ಈಗಾಗಲೇ ಬೇರೆಯವರು ದಾಖಲೆಗಳೊಂದಿಗೆ ಮನೆ ನಿರ್ಮಿಸಿಕೊಂಡಿದ್ದರೆ, ಇತರೆ ನಿವೇಶನಗಳಿಗೆ ಹೋಗಿ ಬರಲು ರಸ್ತೆ ಸಂಪರ್ಕವು ಇಲ್ಲದಾಗಿದೆ. ಈಗಿರುವ ಮನೆ ಬಿಟ್ಟು ಹೋಗಲು ಕಳೆದ ಡಿಸೆಂಬರ್ ನಲ್ಲಿ ನೀಡುತ್ತೇವೆ ಎನ್ನುವುದಾಗಿ ಹೇಳಿದ್ದವರು ಮೇ ತಿಂಗಳ ಅಂತ್ಯದಲ್ಲಿ ಪರಿಹಾರದ ಹಣವನ್ನು ಖಾತೆಗೆ ಜಮಾ ಮಾಡಿದ್ದರು ಎನ್ನಲಾಲಿದ್ದು, ಮಳೆಗಾಲ ಆರಂಭವಾದದ್ದರಿಂದ ಅವರಿಗೆ ತೆರೆವುಗೊಳಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಹೀಗಿರುತ್ತ ಅವರ ಮನೆಯ ಅತೀ ಹತ್ತಿರದಲ್ಲೇ ಶಿರೂರ ಗುಡ್ಡ ಕುಸಿತದ ಸುದ್ದಿ ಮನೋಸ್ಥೈರ್ಯವನ್ನೇ ಅಡಗಿಸಿದಂತಿದೆ.
ನಮ್ಮ ಮನೆಯ ಎಡಭಾಗದಲ್ಲಿ ಗುಡ್ಡ ಕುಸಿತವಾಗಿದೆ. ನಂತರ ನಮಗೆ ಭಯ ಆವರಿಸಿದೆ, ಆಯ್ ಆರ್ ಬಿ ಅವರು ದಬ್ಬಾಳಿಕೆ ರೀತಿಯಲ್ಲಿ ವರ್ತಿಸುತ್ತಾರೆ. ಈಗ ನಾವಿರುವ ಜಾಗ ಸುರಕ್ಷಿತವಾಗಿಲ್ಲ ಎಂಬ ಅರಿವಿದೆ. ಆದರೆ ನಾವು ಈಗ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದ್ದು, ನಮ್ಮ ಮನೆಯಲ್ಲಿರುವ ಕೋಳಿ ಬೆಕ್ಕು ಮತ್ತಿತರ ಸಾಕು ಪ್ರಾಣಿಗಳಿಗೆ ಆಹಾರ ನೀಡಲು ದಿನಕ್ಕೆ ಒಮ್ಮೆ ಆದರೂ ಅಲ್ಲ, ಬಂದು ಹೋಗಲೇಬೇಕಿದೆ. ನಮ್ಮ ಮನೆಗೆ ಸಿಂಗಲ್ ಪೇಮೆಂಟ್ ನೀಡಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಧಾರಾವಾಡ ಹೈಕೋರ್ಟಿಗೆ ದಾವೆ ಹೂಡಲಾಗಿದೆ. ಐಆರ್.ಬಿ ಮಾರ್ಕಿಂಗ್ ಮಾಡಿದ ಕಂಬ ಮನೆಯ ಹಿಂಭಾಗದಲ್ಲಿದೆ. ಕೋರ್ಟ್ ತೀರ್ಪು ಬಂದು ಮಳೆಗಾಲ ಮುಗಿದ ಮೇಲೆ ಮನೆ ಖಾಲಿ ಮಾಡುತ್ತೇವೆ ಎಂದು ಸ್ಥಳೀಯ ನಿವಾಸಿ ಬೀರಪ್ಪ ನಾಯ್ಕ್ ಎನ್ನುವವರು ನ ನೊಂದು ನುಡಿಯುತ್ತಾರೆ .
ಒಟ್ಟಿನಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಬಾರದೆಂದು ಮೇಲೇರಿ ಹೋಗಿ ಗುಡ್ಡದ ಮಲೇರಿ ಹೋಗಿ ಬದುಕು ಕಟ್ಟಿ ಕೊಂಡಿದ್ದ ಬಡ ಜನತೆಗೆ, ಈಗ ಗುಡ್ಡ ಕುಸಿತದ ಭೀತಿ ಆವರಿಸಿ, ಅಲ್ಲಿಂದ ಮತ್ತೆ ಮನೆ ಬಿಟ್ಟು ಬಂದು ಇನ್ನೆಲ್ಲಿಯೋ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು,ಮತ್ತೆ ಮತ್ತೆ ನಿರಾಶ್ರಿತರಾಗುತ್ತ, ಅತಂತ್ರ ಜೀವನ ಸಾಗಿಸಬೇಕಾದ ಇವರಿಗೆ ಸರ್ಕಾರ ಸೂಕ್ತ ಸೌಲಭ್ಯಗಳೊಂದಿಗೆ ಶಾಶ್ವತ ಸೂರು ನಿರ್ಮಿಸಿಕೊಂಡು ಬದುಕು ಕಟ್ಟಿಕೊಳ್ಳಲು ಅತ್ಯವಶ್ಯ ಕ್ರಮ ಕೈಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ