ಹೊನ್ನಾವರ: ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀ ರಾಘವೇಂದ್ರ ಭಾರತಿ ಸಂಸ್ಕೃತ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ 78 ನೇ ಸ್ವಾತಂತ್ರ್ಯೋತ್ಸವ, ಗುರು ಪೌರ್ಣಿಮೆ ಅಂಗವಾಗಿ ನಾದ ವೇದ ಸಂಗೀತ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ರಾಗಶ್ರೀಯ ರಜತ ಸಂಭ್ರಮದ ಈ ವರ್ಷದ ಪ್ರಯುಕ್ತ ಸುಬ್ರಹ್ಮಣ್ಯನಿಗೆ 6 ಗಂಟೆಗಳ ಶಾಸ್ತ್ರೀಯ ಸಂಗೀತ ಸೇವೆಯನ್ನು ಸಮರ್ಪಿಸಲಾಯಿತು.
ಸಂಗೀತ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳು ದೇವರ ನಾಮ ಪ್ರಸ್ತುತ ಪಡಿಸಿದರೆ, ಹಿರಿಯವಿದ್ಯಾರ್ಥಿಗಳಾದ ಇಂಚರಾ ನಾಯ್ಕ, ಭಾಗ್ಯಲಕ್ಷ್ಮೀ ಭಟ್ಟ ಹಡಿನಬಾಳ, ರಂಜಿತಾ ನಾಯ್ಕ, ಪ್ರಥಮ ಭಟ್ಟ, ಶ್ರೀನಿಧಿ ಹೆಗಡೆ, ಪ್ರಸನ್ನ ಭಟ್ಟ ಉಡುಪಿ, ಸಂಗೀತಾ ನಾಯ್ಕ ಇವರುಗಳು ಭಿನ್ನ ಭಿನ್ನ ರಾಗಗಳನ್ನು ಪ್ರಸ್ತುತ ಪಡಿಸಿದರು. ಇವರಿಗೆ ತಬಲಾದಲ್ಲಿ ಕುಮಾರ ಸಮರ್ಥ ಹೆಗಡೆ, ಯೋಗಾನಂದ ಭಟ್ಟ, ವಿನಾಯಕ ಹರಡಸೆ ತಬಲಾ ಸಾಥ್ ನೀಡಿದರೆ, ಮನೋಜ ಭಟ್ಟ ಸಂವಾದಿನಿ ಸಾಥ್ ನೀಡಿದರು.
ಶ್ರೀ ಯೋಗಾನಂದ ಭಟ್ಟ ಉತ್ತಮವಾಗಿ ತಬಲಾ ಸೋಲೋ ನುಡಿಸಿದರು. ಕುಮಾರ ರಾಕೇಶ ಭಟ್ಟ ಕೊಳಲು ವಾದನ ನುಡಿಸಿದರು. ವೇದ ವಿದ್ಯಾರ್ಥಿಗಳು ವೇದಘೋಷಗೈದು ಮೆಚ್ಚುಗೆಗೆ ಪಾತ್ರರಾದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಶ್ರೀ ರಾಜು ಹೆಬ್ಬಾರ ಖ್ಯಾತ ತಬಲಾ ವಾದಕರು ಮಾತನಾಡಿ ಜ್ಞಾನದಿಂದ ಮನುಷ್ಯ ಪೂರ್ಣತೆಯನ್ನು ಪಡೆಯುತ್ತಾನೆ, ಆ ಜ್ಞಾನ ದೇಗುಲವೇ ಗುರು ಎಂದು ಸಂಗೀತ ಮತ್ತು ವೇದದಲ್ಲಿ ಗುರುಗಳಿಗೆ ಇಂದು ಕೂಡ ಮಹತ್ವದ ಸ್ಥಾನ ಇದೆ. ಈ ಸಂಸ್ಕಾರ, ಸಂಸ್ಕೃತಿ, ಸಂಗೀತವನ್ನು ಉಳಿಸಿ – ಬೆಳೆಸುವಲ್ಲಿ ರಾಗಶ್ರೀ ಕಳೆದ 25 ವರ್ಷಗಳಿಂದ ಅವಿರತ ಶ್ರಮ ಪಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಎನ್.ಎಂ. ಭಟ್ಟ ದೇವಾಲಯದ ಕಾರ್ಯದಶರ್ಿ ಮಾತನಾಡಿ ನಮ್ಮ ದೇವಾಲಯ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ, ಸತ್ಸಂಗ ಕಾರ್ಯಗಳಿಗೆ ಆಶ್ರಯವನ್ನು ನೀಡುತ್ತಿದೆ ಎಂದು ಇಂತಹ ಕಾರ್ಯಗಳು ನಡೆದು ಸಮಾಜದಲ್ಲಿ ಶಾಂತಿ – ನೆಮ್ಮದಿ ನೆಲೆಸಬೇಕು ಎಂದು ವಿವರಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಪಿ.ಎನ್.ಭಟ್ಟ, ಶ್ರೀ ಆರ್.ಜಿ.ಭಟ್ಟ ಕುಮಟಾ, ಹಾಗೂ ಹಿರಿಯ ಸಂಗೀತ ಸಂಘಟಕರಾದ ಪ್ರೊ. ಎಸ್.ಶಂಭು ಭಟ್ಟ, ಡಾ. ಅಶೋಕ ಹುಗ್ಗಣ್ಣವರ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಸಂಗೀತ ಗುರುಗಳಾದ ಡಾ. ಅಶೋಕ ಹುಗ್ಗಣ್ಣವರ, ವೇದ ಗುರುಗಳಾದ ಡಾ. ನಾಗಪತಿ ಭಟ್ಟ, ವಿದ್ವಾನ್ ಶಿವಾನಂದ ಭಟ್ಟ, ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೆಕೇರಿ ಇವರನ್ನು ರಾಗಶ್ರೀ ಸಂಗೀತ ಶಿಷ್ಯರು, ಸಂಸ್ಕೃತ ವಿದ್ಯಾಲಯದ ಶಿಷ್ಯರು ಒಗ್ಗೂಡಿ ಗುರುವಂದನೆ ಸಮರ್ಪಿಸಿದರು. ಡಾ. ನಾಗಪತಿ ಭಟ್ಟ ಗುರುವಿನ ಮಹತ್ವ ಕುರಿತು ತಮ್ಮ ಆಳ ಪಾಂಡಿತ್ಯದ ಮಾತುಗಳನ್ನಾಡಿದರು. ನಂತರದಲ್ಲಿ ಕಲಾಶ್ರೀ ಪುರಸ್ಕೃತ ಡಾ. ಅಶೋಕ ಹುಗ್ಗಣ್ಣವರ ರಾಗ ಮಾಲಕಂಸನ್ನು ಪಾಂಡಿತ್ಯ ಪೂರ್ಣವಾಗಿ ಪ್ರಸ್ತುತ ಪಡಿಸಿದರು.
ಇವರಿಗೆ ವಿದ್ವಾನ್ ಎನ್.ಜಿ.ಹೆಗಡೆ ತಬಲಾ ಹಾಗೂ ಶ್ರೀ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥ್ ನೀಡಿದರು. ಸೇರಿದ ಅಪಾರ ನಾದ – ವೇದ ಶ್ರೋತೃಗಳನ್ನು ರಾಗಶ್ರೀ ಪ್ರಾಚಾರ್ಯ ವಿದ್ವಾನ್ ಶಿವಾನಂದ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸನ್ನ ಭಟ ್ಟ ವಂದಿಸಿದರು. ಡಾ. ಗಣಪತಿ ಭಟ್ಟ, ಶ್ರೀ ವಿ.ಜಿ.ಹೆಗಡೆ ಗುಡ್ಗೆ, ಶ್ರೀ ಎನ್.ಜಿ. ಅಪಗಾಲ, ಶ್ರೀ ಕೆ.ವಿ.ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದೊಂದು ವಿಶೇಷವಾದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್, ಹೊನ್ನಾವರ