ಕುಮಟಾ: ಸಂಸ್ಕೃತ ಭಾಷೆ ಪ್ರಾಚೀನ ಭಾಷೆ ಅದು ಎಲ್ಲ ಭಾಷೆಗಳಿಗೆ ತಾಯಿ ಇದ್ದಂತೆ. ಸಂಸ್ಕೃತ ಭಾಷೆ ಜ್ಞಾನಗಳ ಆಗರ ಅಂತಹ ಶ್ರೇಷ್ಠವಾದ ಭಾಷೆಯನ್ನು ಕಲಿತು ಸುಸಂಸ್ಕೃತರಾಗಬೇಕೆಂದು ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಆರ್ ಜಿ ಭಟ್ಟ ಕರೆ ನೀಡಿದರು. ಅವರು ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಶ್ರೀ ಶ್ರೀಧರ ಸಂಸ್ಕೃತ ಪಾಠಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದ ನಿಮಿತ್ತ “ವಿದ್ವತ್ ಸನ್ಮಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಕೃತವು ಹಿಂದೂ ಧರ್ಮದ ಆಧ್ಯಾತ್ಮಿಕ ಮತ್ತು ತಾತ್ವಿಕ ಅಡಿಪಾಯವನ್ನು ಹೊಂದಿದೆ. ಸಂಸ್ಕೃತವು ಸಮಕಾಲೀನ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಆದ್ದರಿಂದ ಸಂಸ್ಕೃತವನ್ನು ಸಾರ್ವತ್ರಿಕ ಭಾಷೆ ಎಂದು ಪರಿಗಣಿಸಲಾಗುತ್ತಿದೆ. ಅದು ಪ್ರಪಂಚದಾದ್ಯಂತ ಅನೇಕ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ವೇದಗಳು ಸಂಸ್ಕೃತದಲ್ಲಿ ರಚಿತವಾಗಿದ್ದು ವೇದಾಧ್ಯಯನ ಹಾಗೂ ಸಂಸ್ಕೃತ ಭಾಷೆಯ ಅಧ್ಯಯನದಿಂದ ಸಂಸ್ಕಾರವಂತರಾಗುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಲ್ಲಬ್ಬೆಯ ಜ್ಯೋತಿರ್ವಿದ್ವಾನ್ ಶ್ರೀ ರಾಮಕೃಷ್ಣ ಭಟ್ಟ ಹಾಗೂ ಬೆಳಕು ನೇತ್ರಾಲಯದ ಡಾಕ್ಟರ್ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅಭಿಮಾನದ ನುಡಿಗಳನ್ನಾಡಿದ ವಿದ್ವಾನ್ ರಾಮಕೃಷ್ಣ ಭಟ್ಟ ಅವರು ಸಂಸ್ಕೃತವು ಶ್ರೀಮಂತವಾದ ಭಾಷೆ, ಸಾತ್ವಿಕರಿಗೆ, ಸ್ಥಿರತೆ ಉಳ್ಳವರಿಗೆ ಸಂಸ್ಕೃತ ಭಾಷೆ ಒಲಿಯುತ್ತದೆ. ಸಾತ್ವಿಕರು ಎಂತಹ ಕಷ್ಟಕಾಲದಲ್ಲೂ ವಿಕಾರ ಮನಸ್ಸನ್ನು ಹೊಂದದೆ ಸ್ಥಿರತೆಯನ್ನು ಕಾಯ್ದುಕೊಂಡು ಸತ್ಯವನ್ನು ಹೇಳಲು ಸಾಧ್ಯವಿದೆ. ಆದ್ದರಿಂದ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಬೇಕು. ಸಂಸ್ಕೃತವು ಪ್ರತಿ ಮನೆ- ಮನಗಳಲ್ಲಿ ಬೆಳಗಿ ಭಾರತದ ಕೀರ್ತಿ ಜಗತ್ತಿನಲ್ಲಿ ಬೆಳಗುವಂತಾಗಬೇಕೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ವಿದ್ಯಾನಿಕೇತನ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿ. ಎಸ್. ಹೆಗಡೆ, ಸದಸ್ಯರಾದ ಡಾಕ್ಟರ್ ಎಸ್ ವಿ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿಗಳಾದ ಟಿ .ಎಸ್. ಭಟ್ಟ, ಪ್ರಾಚಾರ್ಯರಾದ ಜಿ.ಎಂ. ಭಟ್ಟ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವಿಸ್ಮಯ ನ್ಯೂಸ್, ಕುಮಟಾ