ಮಗನಿಗೆ ಸರ್ವಸ್ವ ತ್ಯಾಗ ಮಾಡಿದಳು: ದೊಡ್ಡವನಾದ ಬಳಿಕ ವೃದ್ಧೆ ತಾಯಿಯನ್ನು ಮನೆಯಿಂದ ಹೊರಹಾಕಿದ ಮಗ
ಕುಮಟಾ: ಆ ತಾಯಿ ಮಗನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಳು. ಆದರೆ, ಈಗ ಮಗನಿಗೆ ತಾಯಿ ಬೇಡವಾಗಿದ್ದು, ಮನೆಯಿಂದಲೇ ವೃದ್ಧ ತಾಯಿಯನ್ನು ಹೊರಹಾಕಿದ್ದಾನೆ. ಈ ವೃದ್ಧ ತಾಯಿಯ ಅಳಲನ್ನು ಒಮ್ಮೆ ಕೇಳಿದ್ರೆ, ಯಾರ ಮನಸ್ಸಾದ್ರು ಕರಗದೆ ಇರದು.! ಆದರೆ, ಹೆತ್ತು – ಹೊತ್ತು ಬೆಳೆಸಿದ ಮಗನಿಗೆ ಈ ವೃದ್ಧ ತಾಯಿಯ ಬೇಡವಾಗಿದ್ದಾಳೆ. ಈ ಇಳಿ ವಯಸ್ಸಿನಲ್ಲಿ ವೃದ್ಧೆಯ ಮೂಕವೇದನೆ ಅಷ್ಟಿಷ್ಟಲ್ಲ.
ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment
76 ವರ್ಷದ ಈಕೆಯ ಹೆಸರು ಇಡಕಿ ಬೀರಾ ಗೌಡ.. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಹೆಗಲೆಯ ಈಕೆ ಕಳೆದ ನಾಲ್ಕು ವರ್ಷಗಳಿಂದ ಅನಾಥಾಶ್ರಮದಲ್ಲಿ ಬದುಕುತ್ತಿದ್ದಾಳೆ. 2 ಎಕರೆ ಅತಿಕ್ರಮಣ ಭೂಮಿಯನ್ನು ಹೊಂದಿದ್ದ ಇಡಕಿ ಬೀರಾ ಗೌಡ ಕೃಷಿ ಕೆಲಸದ ಜೊತೆಗೆ ಕೂಲಿ ಕೆಲಸವನ್ನು ಮಾಡಿ ತನ್ನ ಮಗನನ್ನು ಬೆಳೆಸಿದ್ದಳು. ಮಗನಿಗೆ ಮದುವೆಯೂ ಕೂಡ ಮಾಡಿಸಿದ್ದಳು. ಮದುವೆ ನಂತರದಲ್ಲಿ ಮಗನ ವರ್ತನೆ ಬದಲಾಗಿದೆ ಎಂಬುದು ತಾಯಿಯ ಆರೋಪ..
ಮಗ ತನ್ನ ವೃದ್ದ ತಾಯಿ ಕಷ್ಟ ಪಟ್ಟು ಕೂಲಿ ಮಾಡಿ ಕೂಡಿಟ್ಟಿದ್ದ 1 ಲಕ್ಷ ಹಣ ಹಾಗೂ ಆಕೆಯ ಒಡವೆಯನ್ನು ಕಿತ್ತುಕೊಂಡು ಹೊರಹಾಕಿದ್ದಾನೆ ಎಂಬ ಆರೋಪವಿದೆ.. ಅಷ್ಟೆ ಅಲ್ಲದೆ ಈ ಹಿಂದೆಯೂ ಕೂಡ ಆತ ತಾಯಿಯನ್ನ ಹೊರಹಾಕಿದ್ದ. ಈ ಪ್ರಕರಣ ಪೊಲಿಸ್ ಮೆಟ್ಟಿಲೇರಿತ್ತು ಆಗ ಪೊಲಿಸರು ಆತನನ್ನು ಕರೆಯಿಸಿಕೊಂಡು ಮುಚ್ಚಳಿಕೆ ಬರೆಯಿಸಿಕೊಂಡಿದ್ದರು. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ ಮಗ ಮತ್ತೆ ಅದೆ ಚಾಳಿ ಮುಂದುವರಿಸಿದ್ದನoತೆ. ಹೀಗಾಗಿ ಕುಮಟಾದ ಹೆಗಡೆಯ ಜಾನಕಿರಾಮ ವೃದ್ದಾಶ್ರಮಕ್ಕೆ ಆಶ್ರಯ ಪಡೆದಿದ್ದಳು.
ಈ ವೇಳೆ ಜಾನಕಿರಾಮ ವೃದ್ದಾಶ್ರಮದ ಸಂಸ್ಥಾಪಕರಾದ ಆಶಾ ನಾಯ್ಕ ಅವರು ಮಾತನಾಡಿ, ಇಡಕಿ ಬೀರಾ ಗೌಡ ಅವರು ನಮ್ಮ ಅಶ್ರಮಕ್ಕೆ ಬಂದು 4 ವರ್ಷಗಳು ಆಗಿದೆ. ಮನೆಯಲ್ಲಿ ಸಮಸ್ಯೆ ಇದೆ ಎಂದು ಈ ಹಿಂದೆ ಸಂಬoದಿಕರು ಬಂದು ನಮ್ಮ ಆಶ್ರಮಕ್ಕೆ ಬಂದು ಬಿಟ್ಟು ಹೋಗಿದ್ದರು. ನಂತರದಲ್ಲಿ ಮತ್ತೆ ಮನೆಗೆ ತೆರಳಿದ್ದರು. ಅದಾದ ಬಳಿಕ ಮತ್ತೆ ಮನೆಯಲ್ಲಿ ಸಮಸ್ಯೆಯಾಗಿದೆ ಸರಿಯಾಗಿ ಊಟ ನೀಡುತ್ತಿಲ್ಲ, ರಾತ್ರಿ ವೇಳೆ ಹೊಡೆಯಲು ಬಂದಿದ್ದರು ಎಂದು ನನ್ನಲ್ಲಿ ಹೇಳಿಕೊಂಡಿದ್ದರು. ನಂತರ ನಾನು ಮರಳಿ ಆಶ್ರಮಕ್ಕೆ ಕರೆದುಕೊಂಡು ಬಂದು ನನ್ನ ತಾಯಿಯೆಂದೆ ತಿಳಿದು ಆರೈಕೆ ಮಾಡುತ್ತಿದ್ದೇನೆ ಎಂದರು.
ಒಟ್ಟಾರೆ ಚಿಕ್ಕಂದಿನಿoದಲು ಮಕ್ಕಳನ್ನು ಕಷ್ಟಪಟ್ಟು ಸಾಕಿ ಸಲುಹಿದ ತಂದೆ ತಾಯಂದಿರನ್ನು ಇಂತಹ ಮುಪ್ಪಿನ ವಯಸ್ಸಿನಲ್ಲಿ ಹೊರಹಾಕದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ ಎನ್ನುವುದೇ ನಮ್ಮ ಆಶಯವಾಗಿದೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ