Big News
Trending

ಮಳೆಗಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ: ಗುಮ್ಮಟೆ ವಾದನ, ಕುಣಿತ, ಜಾನಪದ ಹಾಡುಗಳ ವಿಶೇಷ ಪೂಜೆ

ಅಂಕೋಲಾ: ಕಳೆದೊಂದು ತಿಂಗಳಿoದ ಸರಿಯಾಗಿ ಮಳೆ ಬೀಳದೇ, ಕಂಗಾಲಾಗಿರುವ ರೈತರ ಮತ್ತು ಸ್ಥಳೀಯ ಗ್ರಾಮಸ್ಥರ ಪರವಾಗಿ, ಕುಸಲೆ ದೇವ ಎಂದೇ ಪ್ರಸಿದ್ಧವಾಗಿರುವ ಹೊನ್ನೆಬೈಲಿನ ಶ್ರೀಕೃಷ್ಣ ಮತ್ತು ಶ್ರೀ ದೇವಿ ದೇವಸ್ಥಾನದಲ್ಲಿ,ಟೆಂಪಲ್ ಟ್ರಸ್ಟಿ ಹನುಮಂತಗೌಡ ನೇತೃತ್ವದಲ್ಲಿ ವಿಶೇಷ ಪೂಜೆ sಸಲ್ಲಿಸಲಾಯಿತು. ಗುಮ್ಮಟೆ ವಾದನ, ತಾರಲೆ ಕುಣಿತ, ಜಾನಪದ ಹಾಡುಗಳ ಮೂಲಕ ಮಳೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು.

ಕಳೆದ ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ಸರಿಯಾಗಿ ಮಳೆ ಬಾರದೇ, ಮಳೆಯನ್ನೇ ನಂಬಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತಾಪಿ ವರ್ಗಕ್ಕೆ ಭತ್ತ ಮತ್ತಿತರ ಬೆಳೆ ಕೈ ತಪ್ಪಿ ಹೋಗುವ ಆತಂಕ ಎದುರಾಗಿದೆ. ಬೆಳಂಬಾರ, ಹೊನ್ನೇಬೈಲ ಸುತ್ತ ಮುತ್ತಲಿನ ಹಾಲಕ್ಕಿ ಸಮಾಜದ ಅನೇಕ ಕೃಷಿಕರು ತಮ್ಮ ಆರಾದ್ಯ ದೇವರಾದ ಕುಸ್ಲೆ ದೇವ ಎಂದು ಪ್ರಸಿದ್ಧಿಯಾಗಿರುವ ಶ್ರೀಕೃಷ್ಣ,ಮತ್ತು ಪಕ್ಕದಲ್ಲಿ ನೆಲೆ ನಿಂತಿರುವ ಶ್ರೀದೇವಿ ಗುಡಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಹಾಲಕ್ಕಿ ಒಕ್ಕಲಿಗ ಸಮಾಜದ ಅ ಜನರು ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷ ಮತ್ತು ಹೊನ್ನೆಬೈಲ್ ದೇವಾಲಯದ ಮೊಕ್ತೆಸರರಾದ ಹನುಮಂತ ಗೌಡ ಅವರ ಮುಂದಾಳತ್ವದಲ್ಲಿ ಗ್ರಾಮದ ಕುಸ್ಲೆ ದೇವಸ್ಥಾನದಲ್ಲಿ ಸೇರಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.ಸರ್ವಲಂಕೃತಗೊoಡ ಶ್ರೀ ದೇವರಿಗೆ ಹೂವು ಹಣ್ಣು ಕಾಯಿ ಸೇವೆ ಸಲ್ಲಿಸಿದರು. ಸಾಂಪ್ರದಾಯಿಕ ಗುಮಟೆ ವಾದನ, ಜಾನಪದ ಕುಣಿತಗಳನ್ನು ಪ್ರದರ್ಶಿಸಿ ಕುಸ್ಲೆ ದೇವರ ಪೂಜೆ ಸಲ್ಲಿಸಲಾಯಿತು.

ಗ್ರಾಮಸ್ಥರ ಪರವಾಗಿ ದೇವಸ್ಥಾನದ ಟ್ರಸ್ಟಿ ಹನುಮಂತ ಗೌಡ,ದೇವಸ್ಥಾನದ ಗುನಗರ ಮೂಲಕವಾಗಿ ಮಳೆಗಾಗಿ ಬೇಡಿಕೊಂಡರು. ಗುನಗರು ಶ್ರೀದೇವರ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳ ಇಷ್ಟ ಈಡೇರಿಸುವಂತೆ ಮತ್ತೆ ಕಾಲಕ್ಕೆ ತಕ್ಕಂತೆ ಮಳೆ ನಕ್ಷತ್ರಗಳನ್ನು ಧರೆಗಿಳಿಸಿ ಗ್ರಾಮದಲ್ಲಿ ಮಳೆ ಬೆಳೆ ಚೆನ್ನಾಗಿ ಆಗುವಂತೆ ಪ್ರಾರ್ಥಿಸಿದರು.

ಶ್ರೀಕೃಷ್ಣ ಸ್ವರೂಪಿ ಕುಸ್ಲೆ ದೇವರಲ್ಲಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರೆ ಕೆಲವೇ ಸಮಯದಲ್ಲಿ ಮಳೆ ಸುರಿದು ರೈತರ ಸಂಕಷ್ಟ ದೂರ ಆಗುವುದು ಎಂಬ ನಂಬಿಕೆ ಇಲ್ಲಿನ ಹಲವು ಭಕ್ತರಲ್ಲಿದೆ. ಈ ಹಿಂದೆಯೂ ವಿಳಂಬ ಮುಂಗಾರು ಮತ್ತಿತರ ಕಾರಣದಿಂದ ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕೆ ವಿಳಂಬವಾದ ಸಂದರ್ಭದಲ್ಲಿ ಕುಸ್ಲೆ ದೇವರಲ್ಲಿ ಪೂಜೆ ಸಲ್ಲಿಸಿದ ದಿನವೇ ಮಳೆ ಸುರಿದು ರೈತರ ಸಂತೋಷಕ್ಕೆ ಕಾರಣವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಕೆಲ ಭಕ್ತರು.

ಇದೀಗ ನಾಟಿ ಕೆಲಸದ ನಂತರ ಮತ್ತೆ ಮಳೆ ಕೈಕೊಟ್ಟ ಪರಿಣಾಮ ಈ ವರ್ಷದ ಭತ್ತ ತರಕಾರಿ ಮತ್ತಿತರ ಕೆಲ ಬೆಳೆ ಕೈ ಸೇರುವ ಹೊತ್ತಿಗೆ ಮಳೆಯ ಅಭಾವದಿಂದ ಬೆಳೆಗಾರರು ಮತ್ತು ರೈತರು ಆತಂಕಗೊoಡಿದ್ದು, ಹಾಲಕ್ಕಿ ಸಮಾಜದ ಭಕ್ತ ಜನರು ಮತ್ತೊಮ್ಮೆ ಕುಸ್ಲೆ ದೇವರ ಮೊರೆ ಹೋಗಿದ್ದಾರೆ. ಈ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ ದೇವಸ್ಥಾನದ ದೇವಸ್ಥಾನದ ಟ್ರಸ್ಟಿ ಹನುಮಂತ ಗೌಡ,ರೈತಾಭಿಯನ್ನೇ ಹೆಚ್ಚಾಗಿ ನಂಬಿರುವ ನಾವು ಬೆಳೆ ಬೆಳೆಯಲು ಮಳೆಯನ್ನೇ ಅವಲಂಬಿಸಿದ್ದೇವೆ. ನಾವು ನಂಬಿದ ದೇವರು ಮಳೆಯನ್ನು ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ ಎಂದರು. ದೇವಾಲಯದ ಅರ್ಚಕರು, ಇತರೆ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button