Important
Trending

ಕಳ್ಳತನ ಮಾಡಿ ಮೋಜು ಮಸ್ತಿ: ಸಿಕ್ಕಿಬಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್

ಅಂಕೋಲಾ: ಇತ್ತೀಚೆಗೆ ಸರಕಾರಿ ನೌಕರನ ಮನೆಗೆ ಕನ್ನ ಹಾಕಿ ನಗದು ಮತ್ತು ಆಭರಣಗಳು ಸೇರಿ ಅಂದಾಜು 7 ಲಕ್ಷಕ್ಕೂ ಹೆಚ್ಚಿನ ಸ್ವತ್ತು ಕಳ್ಳತನ ಮಾಡಿ ಪರಾರಿಯಾಗಿದ್ದರು ಎನ್ನಲಾದ ಖತರ್ನಾಕ್ ಕಳ್ಳರ ಗ್ಯಾಂಗನ್ನು ಪತ್ತೆ ಹಚ್ಚಿದ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ . ಮೋಜು ಮಸ್ತಿ ಕಳ್ಳತನ ಮಾಡುವುದೇ ಈ ಕುಖ್ಯಾತ ಕಳ್ಳರ ಖಯಾಲಿ ಎನ್ನಲಾಗುತ್ತಿದೆ.

ನಾಪತ್ತೆಯಾದ ಯುವತಿ: ಸುಳಿವು ಸಿಕ್ಕರೆ ಮಾಹಿತಿ ನೀಡಿ

ಅಂಕೋಲಾ ಪಟ್ಟಣ ವ್ಯಾಪ್ತಿಯ ಕೇಣಿ ರಸ್ತೆಗೆ ಹೊಂದಿಕೊಂಡಿರುವ ಕಲಭಾಗ ಹೊನ್ನೇಕೇರಿ ವ್ಯಾಪ್ತಿಯ ನಿವೃತ್ತ ಸರಕಾರಿ ನೌಕರ ಮೋಹನ ನಾರಾಯಣ ನಾಯಕ ಎನ್ನುವವವರ ಮನೆಯಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಕಳ್ಳತನವಾಗಿತ್ತು.ಅವರು ತಮ್ಮ ಮಡದಿಯೊಂದಿಗೆ ದೇಹಾರೋಗ್ಯ ತಪಾಸಣೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಅಂದರೆ ದಿನಾಂಕ 28 – 09 – 2024 ರ ಬೆಳಗಿನ 4.30 ಗಂಟೆಯಿಂದ ಸಾಯಂಕಾಲ 7.00 ಗಂಟೆ ನಡುವಿನ ಅವಧಿಯಲ್ಲಿ ಆದಾರೋ ಕಳ್ಳರು ಕಳ್ಳತನ ಮಾಡಿದ್ದರು.

ಈ ವೇಳೆ ಮನೆಯ ಬೆಡರೂಮಿನ ಒಳಗಿನ ಗೋಡೆ ಕಪಾಟಿನ ಬಾಗಲನ್ನು ತೆರೆದು, ಅದರಲ್ಲಿದ್ದ ಅಂದಾಜು ಒಟ್ಟೂ ರೂ 3.60,000 ಕಿಮ್ಮತ್ತಿನ 4 ಬಂಗಾರದ ಬಳೆಗಳು, 1 ಲಕ್ಷ 75 ಸಾವಿರ ಅಂದಾಜು ಮೌಲ್ಯದ ಮಂಗಳ ಸೂತ್ರ ಕದ್ದೊಯ್ದಿದ್ದರು. ಅಷ್ಟೇ ಅಲ್ಲದೇ ಇನ್ನೊಂದು ಬೆಡ್ ರೂಮಿನ ಗೋದ್ರೇಜ್ ಕಪಾಟ್ ಲಾಕರ್ ಮುರಿದು ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳಾದ ಮಂಗಳ ಸೂತ್ರ (2), ಅಂದಾಜು ಕಿಮ್ಮತ್ತು 1 ಲಕ್ಷ 25 ಸಾವಿರ, ಬಂಗಾರದ ಕಿವಿಯೋಲೆ 3 ಜೊತೆ ಅಂದಾಜು ಕಿಮ್ಮತ್ತು 75 ಸಾವಿರ ಮತ್ತು ನಗದು ರೂ 50 ಸಾವಿರ ಕದ್ದೊಯ್ದಿದ್ದರು.

ಒಟ್ಟಾರೆಯಾಗಿ ನಗದು ಮತ್ತು ಅಭರಣ ಸೇರಿ ಒಟ್ಟೂ ಅಂದಾಜು 7 ಲಕ್ಷ 80 ಸಾವಿರ ಮೌಲ್ಯದ ಸ್ವತ್ತನ್ನು ಕದ್ದೊಯ್ದಿದ್ದರು. ಈ ಕಳ್ಳತನ ಕೃತ್ಯದ ಕುರಿತಂತೆ ಅಂಕೋಲಾ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಕಳ್ಳತನ ಕೃತ್ಯ ನಡೆದು ಕೆಲವು ದಿನಗಳಾಗುತ್ತ ಬಂದಿತ್ತು. ಇದೇ ವೇಳೆ ಅಂಕೋಲಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಪಡದ ಬೇರೆ ಪ್ರಕರಣದಲ್ಲಿ ಚಿಂತಾಮಣಿ ವ್ಯಾಪ್ತಿಯ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿತರೇ , ಅಂಕೋಲಾ ಕಳ್ಳತನ ಕೃತ್ಯದಲ್ಲಿಯೂ ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಅವರನ್ನು ವಿಚಾರಣೆಗೊಳಪಡಿಸಿ ಅಂಕೋಲಾಕ್ಕೆ ಕರತರಲಾಗಿತ್ತು.

ಈ ವೇಳೆ ಅಂಕೋಲಾದ ಸ್ಥಳೀಯ ಪೊಲೀಸರು ಹಾಜರಿದ್ದರು. ಈ ಕತರ್ನಾಕ್ ಗ್ಯಾಂಗಿನಲ್ಲಿ ಆಂಧ್ರ , ಬೆಂಗಳೂರು ,ಚಿಕ್ಕಬಳ್ಳಾಪುರದವರು ಎನ್ನಲಾದ ಒಟ್ಟೂ ಮೂವರು ಆರೋಪಿತರು ಇದ್ದರು ಎನ್ನಲಾಗಿದೆ. ಕಾರಿನಲ್ಲಿ ತಿರುಗಾಡುತ್ತ ಅಥವಾ ಇತರೆ ರೀತಿಯಲ್ಲಿ ರಸ್ತೆ ಅಂಚಿನ ಯಾವ ಮನೆ ಮತ್ತು ಗೇಟ್ ಗಳಿಗೆ ಬೀಗ ಹಾಕಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಿ ಇವರು ತಮ್ಮ ಚಾಲಾಕಿ ಬುದ್ಧಿ ಬಳಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.ಮೋಜು ಮಸ್ತಿ ಮತ್ತಿತರ ಕಾರಣಗಳಿಂದ ಕಳ್ಳತನ ಕೃತ್ಯ ಇವರಿಗೆ ಖಯಾಲಿಯಾದಂತಿದ್ದು ನೆರೆ ರಾಜ್ಯ ಗೋವಾ ಮತ್ತಿತರಡೆ ಮಜಾ ಉಡಯಿಸುತ್ತಿದ್ದರು ಎನ್ನಲಾಗಿದೆ.

ಜಿಲ್ಲೆಯ ಮುರ್ಡೇಶ್ವರ ವ್ಯಾಪ್ತಿಯಲ್ಲಿಯೂ ಇವರೇ ಕಳ್ಳತನ ಪ್ರಕರಣ ಒಂದರಲ್ಲಿಭಾಗಿಯಾಗಿದ್ದರು ಎನ್ನಲಾಗಿದೆ. ಈ ಆರೋಪಿತರಾರು? ಈ ಹಿಂದೆ ಅಂಕೋಲಾ , ಮುರ್ಡೇಶ್ವರ ಹಾಗೂ ಇತರಡೆ ಎಲ್ಲೆಲ್ಲಿ ಕಳ್ಳತನ ಕೃತ್ಯ ನಡೆಸಿದ್ದರು ಎಂಬಿತ್ಯಾದಿ ವಿಷಯಗಳ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button