Follow Us On

WhatsApp Group
Focus News
Trending

ಅಂಕೋಲಾದಲ್ಲಿ ಅಮೃತ ಕಲಶ ಯಾತ್ರೆ: ಪವಿತ್ರ ಮಣ್ಣಿನ ಸಂಗ್ರಹ – “ಪಂಚಪ್ರಾಣ” ಪ್ರತಿಜ್ಞೆ ಸ್ವೀಕಾರ

ಅಂಕೋಲಾ: ದೇಶ ವ್ಯಾಪಿ ನಡೆಯುತ್ತಿರುವ ಮೇರಿ ಮಿಟ್ಠೀ ಮೇರಾ ದೇಶ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಬಾರ್ಡೋಲಿ ಖ್ಯಾತಿಯ ಅಂಕೋಲಾದಲ್ಲಿಯೂ ಪವಿತ್ರ ಮಣ್ಣನ್ನು ಸಂಗ್ರಹಿಸಿ, ಅಮೃತ ಕಲಶ ಯಾತ್ರೆಯ ಮೂಲಕ ನನ್ನ ದೇಶ ನನ್ನ ಮಣ್ಣು ಎಂಬ ಹೆಮ್ಮೆ ಹಾಗೂ ಅಭಿಮಾನ ವ್ಯಕ್ತಪಡಿಸಲಾಯಿತು.

ದೇಶದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಆಚರಣೆಯ ಮುಂದುವರಿದ ಭಾಗವಾಗಿ,ದೇಶದಾದ್ಯಂತ ,ಏಕತೆ ಮತ್ತು ಐಕ್ಯತೆಯ ಪ್ರತೀಕವಾಗಿ ಮೇರಿ ಮಿಟ್ಠೀ ಮೇರಾ ದೇಶ ಅಮೃತ ಕಲಶ ಯಾತ್ರೆ ಆರಂಭಿಸಲಾಗಿದೆ. ಇದೇ ವೇಳೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಕರ್ನಾಟಕದ ಬಾರ್ಡೋಲಿ ಖ್ಯಾತಿಯ ಅಂಕೋಲಾ ತಾಲೂಕಿನಲ್ಲಿ ತಾಲೂಕಾ ಮಟ್ಟದ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸಲಾಗಿತ್ತು.

ತಾ.ಪಂ ಎದುರು ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಹಸಿರು ನಿಶಾನೆ ತೋರಿಸಿ ,ಅಮೃತ ಕಲಶ ಯಾತ್ರೆಗೆ ಚಾಲನೆ ನೀಡಿದರು. ತಾಲೂಕಾ ಪಂಚಾಯತ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿoದ, ಆಯಾ ಭಾಗದ ಪವಿತ್ರ ಮೃತ್ತಿಕೆಯನ್ನು, ಅಮೃತ ಕಲಶಗಳಲ್ಲಿ ಸಂಗ್ರಹಿಸಿ ತಂದು, ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿಸಲಾಯಿತು..

ನಂತರ ಪುನ: ತಾಲೂಕಾ ಪಂಚಾಯಿತಿಗೆ ಬಂದ ಮೆರವಣಿಗೆ, ಪ್ರತೀ ಗ್ರಾ.ಪಂ.ಗಳಿoದ ತಂದಿರುವ ಕಲಶಗಳಿಂದ ಒಂದೊoದು ಹಿಡಿ ಮಣ್ಣನ್ನು ತಾಲೂಕಾ ಮಟ್ಟದ ಅಮೃತ ಕಲಶದಲ್ಲಿ ಹಾಕಿ ನನ್ನ ದೇಶ ನನ್ನ ಮಣ್ಣು ಎಂಬ ಹೆಮ್ಮೆ ಹಾಗೂ ಅಭಿಮಾನದ ಕಾರ್ಯಕ್ಕೆ ಕೈ ಜೋಡಿಸಿ, ಕರ ಮುಗಿದರು. ಅಧಿಕಾರಿ ಹಾಗೂ ಸಿಬ್ಬಂದಿಗಳು , ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ನೆರೆದವರೆಲ್ಲರೂ “ಪಂಚಪ್ರಾಣ” ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಸರ್ಕಾರಿ ನೌಕರರು ಮತ್ತು ಗ್ರಾಮ ಪಂಚಾಯತ್ ಮುಖಂಡರು ಭಾಗವಹಿಸಿ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಸಕ್ರಿಯವಾಗಿ ಭಾಗವಹಿಸಿ ದೇಶದ ಏಕತೆ ಮತ್ತು ಐಕ್ಯತೆಗಾಗಿ ಶ್ರಮಿಸುವುದಾಗಿ ಮತ್ತು ವಸಾಹತುಶಾಹಿ ಆಡಳಿತದಿಂದ ಹೊರಬರಲು ತಮ್ಮ ಪರಮೋಚ್ಚ ಜೀವನವನ್ನು ತ್ಯಾಗ ಮಾಡಿದ ಸ್ವಾತಂತ್ರ‍್ಯ ಹೋರಾಟಗಾರರನ್ನು ಗೌರವಿಸುವುದಾಗಿ ಭಾಗವಹಿಸುವವರು ಪ್ರತಿಜ್ಞೆ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಯಶ್ವಂತ ಯಾದವ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರಾಷ್ಟ್ರದಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದ್ದು ಅಂಕೋಲಾದ ಎಲ್ಲ ಗ್ರಾಮ ಪಂಚಾಯತಗಳು ಬಹಳ ಸಂಭ್ರಮದಿoದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಮಾತನಾಡಿ ಅಮೃತ್ ಮಹೋತ್ಸವದ ಆಚರಣೆಗಳೊಂದಿಗೆ ಹುತಾತ್ಮರಾದ ವೀರ ಪುರುಷ ಮತ್ತು ಮಹಿಳೆಯರನ್ನು ಗೌರವಿಸುವ ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ಭಾಗವಾಗಿ, ನಮ್ಮ ಅಮರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಿಪಿಐ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಅಮೃತ ಕಳಸ ಮೆರವಣಿಗೆ ಸಾಗುವ ಮುಖ್ಯ ರಸ್ತೆಗಳಲ್ಲಿ ಪಿಎಸ್ಐಗಳಾದ ಸುನಿಲ್ ಹುಲ್ಲೊಳ್ಳಿ, ಜಯಶ್ರೀ ಪ್ರಭಾಕರ ಹಾಗೂ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button