ಗೋಕರ್ಣ: ವಾರದ ಸಂತೆ ಪೇಟೆಯಲ್ಲಿ ಆಕಸ್ಮಿಕವಾಗಿ ಬಂದೆರಗಿದ ಸಿಡಿಲಿನ ಪರಿಣಾಮ ನಾಲ್ವರು ಶಾಕ್ ಗೊಳಪಟ್ಟು ಆಸ್ಪತ್ರೆ ಸೇರಿದ ಘಟನೆ ಗೋಕರ್ಣದಲ್ಲಿ ಸಂಭವಿಸಿದೆ. ಕುಮಟಾ ತಾಲೂಕಿನ ಗೋಕರ್ಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ದಿನವಾಗಿದೆ. ಅಂತೆಯೇ ನವೆಂಬರ್ 14 ರ ಗುರುವಾರ ಸಂತೆ ವ್ಯಾಪಾರ ವಹಿವಾಟು ನಡೆದಿತ್ತು. ಸಾಯಂಕಾಲ ಸುಮಾರು ನಾಲ್ಕು ಗಂಟೆಯ ನಂತರ ಆಕಸ್ಮಿಕವಾಗಿ ಸುರಿದ ಭಾರಿ ಮಳೆಯೊಂದಿಗೆ ಗುಡುಗು ಮತ್ತು ಮಿಂಚು ಕಾಣಿಸಿಕೊಳ್ಳಲಾರಂಭಿಸಿ ತರಕಾರಿ ಮತ್ತಿತರ ಸಾಮಾನು ಖರೀದಿಸಲು ಬಂದಿದ್ದ ಕೆಲ ಗ್ರಾಹಕರು ಮತ್ತು ಸಾಮಾನು ಮಾರಲು ಬಂದ ಕೆಲ ವ್ಯಾಪಾರಸ್ಥರು ಕೆಲಕಾಲ ಕಂಗಲಾಗುವoತಾಗಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದಂತಿತ್ತು.
ಇದೇ ವೇಳೆ ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ಅಲ್ಲಿ ಇಲ್ಲಿ ಒಡಾಡಿದರೆ , ಇನ್ನು ಕೆಲವರು ಹತ್ತಿರವೇ ಇದ್ದ ಮರದ ಕೆಳಗೆ ಆಶ್ರಯ ಪಡೆಯಲು ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಸಿಡಿಲೊಂದು ಬಂದೆರಗಿ ಮರದಡಿ ನಿಂತವರು ಶಾಕ್ ಗೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ , ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ ಮತ್ತು ಸಿಬ್ಬಂದಿಗಳು ತುರ್ತು ಚಿಕಿತ್ಸೆ ನೀಡಿದ್ದು, ಸಿಡಿಲಿನಿಂದ ಆಘಾತಗೊಂಡವರು ಚೇತರಿಸಿಕೊಂಡಿದ್ದಾರೆ. ಗೋಕರ್ಣ ಸಮೀಪದ ಬಿದ್ರಗೇರಿಯ ಪರಮೇಶ್ವರ ಗೌಡ(56),ರೆಸಾರ್ಟ ಕಾಮಾಗಾರಿ ಕೆಲಸಕ್ಕೆ ಬಂದಿದ್ದ ಬಿಹಾರ ರಾಜ್ಯದ ಕಾರ್ಮಿಕರಾದ ನೂರ ಅಲಮಾ(40), ಮಹ್ಮದ್ ಆಜಾದ್ (30), ಆಯುಷ್‌ಕುಮಾರ (30) ಸಿಡಿಲಿನ ಶಾಕ್ ಗೆ ಒಳಗಾಗಿದ್ದರೂ ,ಅದೃಷ್ಟವಶಾತ್ ಸಂಭವನೀಯ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ