ಸೀಳು ಗಾಯದೊಂದಿಗೆ ರೋಧಿಸುತ್ತಿದ್ದ ಮೂಕ ಪ್ರಾಣಿಗೆ ಉಪಚರಿಸಿ ಚಿಕಿತ್ಸೆ : ಕನಸಿಗದ್ದೆ ತಂಡದ ಗೋ ಪ್ರೇಮಕ್ಕೆ ಮೆಚ್ಚುಗೆ
ಅಂಕೋಲಾ: ಬಿಳಿ ಬಣ್ಣದ ಆಕಳೊಂದು , ಅದೇಗೋ ಹೊಟ್ಟೆಯ ಭಾಗದಲ್ಲಿ ಸೀಳಿದ ರೀತಿ ತೀವ್ರ ಸ್ವರೂಪದ ಗಾಯಗೊಂಡು ಬರಬರುತ್ತ ಗಾಯ ದೊಡ್ಡದಾಗಿ ಕೀವು ತುಂಬಿ , ಹುಳು ಬಾಧೆಯಿಂದ ಮನೆಗೂ ಮರಳದೇ , ನೋವು ತಾಳಲಾರದೇ ಅಲ್ಲಿ ಇಲ್ಲಿ ಸುತ್ತಾಡುತ್ತಾ ವೇದನೆ ಪಡುತ್ತಿತ್ತು. ಇದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ಅನಿಲ ಮಹಾಲೆ ತಮ್ಮ ಗೆಳೆಯರೊಂದಿಗೆ ಗಾಯಗೊಂಡ ಆಕಳಿಗೆ ಉಪಚರಿಸಲು ಮುಂದಾದರೂ , ಆಕಳು ಕೈಗೆ ಸಿಗದೇ ಅಲ್ಲಿ ಇಲ್ಲಿ ಒಡಾಡಿಕೊಂಡಿತ್ತು.
ಆಕಳನ್ನು ಹಿಡಿಯಲು 1-2 ದಿನ ಪ್ರಯತ್ನಿಸಿದ್ದ ತಂಡ ಕೊನೆಗೊ ಬಯಲು ಪ್ರದೇಶದಲ್ಲಿ ಆಕಳನ್ನು ಬೆಂಬತ್ತಿ , ಹಿಡಿದು ಪಕ್ಕ ಇರುವ ಮರದ ನೆರಳಿನ ಪ್ರದೇಶದಲ್ಲಿ ಕಟ್ಟಿ ಹಾಕಿ , ಹುಲ್ಲು -ನೀರು , ಆಹಾರ ನೀಡಿ ಉಪಚರಿಸಿದ್ದರು. ಬಳಿಕ ಈ ವಿಷಯವನ್ನು ಪಶು ವೈದ್ಯಕೀಯ ಸೇವಾ ಅಂಬುಲೆನ್ಸ್ ನವರಿಗೆ ಫೋನ್ ಕರೆಯ ಮೂಲಕ ತಿಳಿಸಿದ್ದರು. ಸ್ಥಳಕ್ಕೆ ಬಂದ ವೈದ್ಯರು ಮತ್ತು ಸಿಬ್ಬಂದಿಗಳು , ಸ್ಥಳೀಯರ ಸಹಕಾರದಲ್ಲಿ ಆಕಳಿನ ಹೊಟ್ಟೆಗೆ ಗಾಯಗೊಂಡ ಭಾಗ ಸ್ವಚ್ಛಗೊಳಿಸಿ , ಹೊಲಿಗೆ ಹಾಕಿ ಔಷಧ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಕನಸಿಗದ್ದೆಯ ಅನಿಲ ಮಹಾಲೆ , ಬೊಮ್ಮಯ್ಯ ನಾಯ್ಕ , ದಿಲೀಪ್ ನಾಯ್ಕ , ರಕ್ಷಿತ ವಿಜಯಕುಮಾರ ನಾಯ್ಕ ಇವರ ಸಮಯ ಪ್ರಜ್ಞೆ ಮತ್ತು ಗೋ ಪ್ರೇಮ ಹಾಗೂ ಪಶುವೈದ್ಯ ಹಾಗೂ ಸಿಬ್ಬಂದಿಗಳ ಸಕಾಲಿಕ ಚಿಕಿತ್ಸೆಯಿಂದ ಮೂಕ ಪ್ರಾಣಿಯೊಂದು ಜೀವಪಾಯದಿಂದ ಪಾರಾದಂತಾಗಿದೆ. ನಂತರ ಆಕಳನ್ನು ಮಾಲಕರಿಗೆ ಹಸ್ತಾಂತರಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ