Important
Trending

ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಕಬ್ಬಡ್ಡಿ ಆಟಗಾರ: ಫೈನಲ್ ಆಟ ಆಡಲಾಗದೇ ಬದುಕಿನ ಆಟ ಮುಗಿಸಿದ ಯುವ ಕ್ರೀಡಾಪಟು

ಅಂಕೋಲಾ : ಬದುಕಿದು ಜಟಕಾ ಬಂಡಿ ,ವಿಧಿ ಅದರ ಸಾಹೇಬ ಎನ್ನುವಂತೆ , ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಫೈನಲ್ ಹಂತಕ್ಕೆ ಏರಿ ,ಅಂತಿಮ ಹಣಾಹಣಿಗೆ ಸಿದ್ದಗೊಳ್ಳುತ್ತಿದ್ದ ತಂಡವೊಂದರ ಯುವ ಕ್ರೀಡಾಪಟು ಓರ್ವ , ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಹಠಾತ್ ಆರೋಗ್ಯ ಏರುಪೇರಿನಿಂದ ,ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ಡಿ 15 ರಂದು ಸಂಭವಿಸಿದೆ.

ಬಾಸಗೋಡ – ಕೋಗ್ರೆ ನಿವಾಸಿ ಸುದರ್ಶನ ವಿನಾಯಕ ಅಗೇರ (23 ) ಮೃತ ದುರ್ದೈವಿ ಯುವ ಕ್ರೀಡಾಪಟುವಾಗಿದ್ದಾನೆ. ತಾಲೂಕಿನ ಅವರ್ಸಾದಲ್ಲಿ ಡಿ 14 ರಂದು ಆಯೋಜಿಸಿದ್ದ ಆಗೇರ ಸಮಾಜದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಯಲ್ಲಿ ಈ ಆಕಸ್ಮಿಕ ಅವಘಡ ಸಂಭವಿಸಿದೆ. ತನ್ನ ಗೆಳೆಯರೊಂದಿಗೆ ಕೋಗ್ರೆ ತಂಡವನ್ನು ಪ್ರತಿನಿಧಿಸಿ ,ಆರಂಭದ ಸುತ್ತಿನಲ್ಲಿ 2-3 ಸತತ ವಿಜಯ ದಾಖಲಿಸಿ ತಂಡ ಫೈನಲ್ ಹಂತಕ್ಕೆ ಏರಲು ,ಸುದರ್ಶನ್ ಸಹ ವೈಯಕ್ತಿಕವಾಗಿ ತಂಡಕ್ಕೆ ತನ್ನ ಕ್ರೀಡಾ ಸಾಮರ್ಥ್ಯ ಧಾರೆಯೆರೆದಿದ್ದ. ಈ ನಡುವೆ ಅಂತಿಮ ಹಣಾಹಣಿಗೆ ಸಿದ್ದಗೊಳ್ಳುವ ವಿರಾಮದ ಅವಧಿಯಲ್ಲಿ , ತಾನು ಯಾವ ಪ್ಲೇಸ್ ನಲ್ಲಿ ಅಡುವೆ ,ಇತರರು ಎಲ್ಲೆಲ್ಲಿ ಆಡಬೇಕು ಎಂದು ಚರ್ಚಿಸುತ್ತಿರುವಾಗಲೇ , ಆತನಲ್ಲಿ ಹಠಾತ್ತಾಗಿ ಉಸಿರಾಟ ಏರಿಳಿತ ಸಮಸ್ಯೆ ಕಾಡಿದಂತಾಯಿತು ಎನ್ನಲಾಗಿದೆ.

ಕೂಡಲೇ ಆತನನ್ನು ಖಾಸಗಿ ವಾಹನದಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ. ನಂತರ ಆತನ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ , ರಾಘು ಕಂತ್ರಿ ಮತ್ತು ಆಗೇರ ಸಮಾಜ ಬಾಂಧವರು ಸಹಕರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿದ್ದಾರೆ.

ಮನೆ ಮಗ ,ಅತ್ಯುತ್ತಮ ಕ್ರೀಡಾಪಟುವೂ ಹೌದೆಂದು ಈ ಹಿಂದಿನ ಕೆಲ ಪಂದ್ಯಾವಳಿಗಳಲ್ಲಿ ನೋಡಿದ್ದ ಹಾಗೂ ಇತರರಿಂದ ಕೇಳಿ ತಿಳಿದಿದ್ದ ಕುಟುಂಬ ಈ ಬಾರಿಯೂ ತಮ್ಮ ಮನೆ ಮಗ ವಿಜಯೋತ್ಸಾಹದಲ್ಲಿ ಟ್ರೋಪಿಯನ್ನು ಕೈಗೆತ್ತಿಕೊಂಡು ಮನೆಗೆ ಹಾಗೂ ಊರಿಗೆ ಕೀರ್ತಿ ತರುವನೆಂಬ ಹೆಮ್ಮೆ ಹಾಗೂ ಹಂಬಲದಲ್ಲಿದ್ದ ತಂದೆ ತಾಯಿಗಳು ಮತ್ತು ಊರವರಿಗೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಗರಬಡಿದಂತಾಗಿ ಶಾಕಿಂಗ್ ಸುದ್ದಿ ಕೇಳಿ ಬಂದಿದೆ. ಇದರಿಂದ ತಂದೆ ತಾಯಿಗಳು ಪುತ್ರಶೋಕ ಅನುಭವಿಸುವಂತಾದರೆ ಮೃತನ ಕುಟುಂಬಸ್ಥರ ಮತ್ತು ಗೆಳೆಯರ ಆಕ್ರಂದನದಿಂದ ಊರಲ್ಲಿ ಸ್ಮಶಾನ ಮೌನ ಆವರಿಸಿದಂತಿದೆ.

ಪೇಂಟಿಂಗ್ ಮತ್ತಿತರ ಕೂಲಿ ನಾಲಿ ಕೆಲಸ ಮಾಡಿ ಮನೆಯ ಸಂಸಾರ ಜವಾಬ್ದಾರಿ ನಿಭಾಯಿಸುತ್ತಿದ್ದ ಮನೆ ಮಗನನ್ನು ಕಳೆದು ಕೊಂಡು ನೊಂದಿರುವ ಬಡ ಕುಟುಂಬಕ್ಕೆ ,ಸಮಾಜ ಬಾಂಧವರು , ಸರ್ಕಾರ , ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ,ಸಂಘ ಸಂಸ್ಥೆಗಳು ಮತ್ತು ಮಾನವೀಯ ಅನುಕಂಪವುಳ್ಳ ದಾನಿಗಳು ,ನೆರವಿನ ಹಸ್ತ ಕೈ ಚಾಚಿ ಸಾಂತ್ವನ ಹೇಳಬೇಕಿದೆ. ಕಟ್ಟು ಮಸ್ತಾದ ದೇಹಧಾಡ್ಯತೆಯುಳ್ಳ ಅತ್ಯುತ್ತಮ ಕ್ರೀಡಾಪಟು ಒಬ್ಬ ಕಬ್ಬಡ್ಡಿ ಆಟ ಆಡಲು ಹೋಗಿ ವಿಧಿಯಾಟಕ್ಕೆ ಸಿಲುಕಿ ಅಕಾಲಿಕವಾಗಿ ನಿಧನ ಹೊಂದಿರುವುದು ಸಮಾಜಕ್ಕೆ ಮತ್ತು ತಾಲೂಕಿಗೆ ತುಂಬಲಾರದ ನಷ್ಟವೇ ಸರಿ. ಶ್ರೀರಾಮ್ ಸ್ಪೋರ್ಟ್ಸ್ ಕ್ಲಬ್ ಗಜು ನಾಯ್ಕ ಸೇರಿದಂತೆ ಕೋಗ್ರೆ , ಕಂತ್ರಿ ಮತ್ತಿತರೆಡೆಯ ನೂರಾರು ಜನ ಆಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಾವಂತ ಕ್ರೀಡಾಪಟುವಿನ ಸಾವಿಗೆ ಬೇಸರ ಹಾಗೂ ದುಃಖ ವ್ಯಕ್ತಪಡಿಸಿದರು. ಸುದರ್ಶನ ಆಗೇರ ಈತನ ಸಾವಿನ ಸುದ್ದಿ ಕೇಳಿ ತಿಳಿದ ಶಾಸಕ ಸತೀಶ್ ಸೈಲ್ , ಕಟ್ಟು ಮಸ್ತಾದ ದೇಹಧಾಡ್ಯತೆಯುಳ್ಳ ಅತ್ಯುತ್ತಮ ಯುವ ಕ್ರೀಡಾಪಟು ಒಬ್ಬ ಕಬ್ಬಡ್ಡಿ ಆಟ ಅಕಾಲಿಕವಾಗಿ ನಿಧನ ಹೊಂದಿರುವುದು ಸಮಾಜಕ್ಕೆ ಮತ್ತು ತಾಲೂಕಿಗೆ ಹಾಗೂ ಜಿಲ್ಲೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಮೃತನ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಮತ್ತು ಆತನ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ಭರಿಸಲಿ ಎಂದು ಪ್ರಾರ್ಥಿಸಿ , ಸಂತಾಪ ಸೂಚಿಸಿದ್ದಾರೆ. ಚಳಿಗಾಳಿ , ಹವಾಮಾನ ಬದಲಾವಣೆ , ವೈಪರೀತ್ಯ ,ಆಟ -ವ್ಯಾಯಾಮ ಮತ್ತಿತರ ರೀತಿಯಲ್ಲಿ ದೇಹವನ್ನು ಅತಿಯಾಗಿ ದಂಡಿಸುವುದು ,ಆಹಾರ- ನಿದ್ದೆ ಮತ್ತಿತರ ದೈನಂದಿನ ಕ್ರಮಗಳಲ್ಲಿ ನ ಬದಲಾವಣೆ ಹಾಗೂ ಅಸಮತೋಲನ ,ಎಂಥವರ ಆರೋಗ್ಯದ ಮೇಲೆಯೂ ಹಠಾತ್ ಮತ್ತು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿರುವುದರಿಂದ ,ಯಾರೂ ಸಹ ಅತಿಯಾದ ಆತ್ಮವಿಶ್ವಾಸ ತೋರದೇ ,ತಮ್ಮ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು ಆಗಾಗ ನುರಿತ ವೈದ್ಯರ ಸಲಹೆ ಪಡೆದುಕೊಳ್ಳುತ್ತಿರಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button