Big News
Trending

ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್‌ ಜನ್ಮತ್ರಿಶತಮಾನೋತ್ಸವ

ಭಾರತದ ಇತಿಹಾಸದಲ್ಲಿ ಅದೆಷ್ಟೋ ರಾಜರ್ಷಿಗಳು ತಮ್ಮ ದಿವ್ಯತೆಯಿಂದಾಗಿ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ಅಂಥವರಲ್ಲೊಬ್ಬರು ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಒಬ್ಬ ಹೆಣ್ಣುಮಗಳು. ಜನ್ಮಜಾತವಾದ ತನ್ನ ಪವಿತ್ರತಮ ತೇಜಸ್ಸಿನಿಂದಾಗಿ ಮರಾಠಾ ಸಾಮ್ರಾಜ್ಯದ- ಮಾಳ್ವಾ ಪ್ರಾಂತದ ಹೋಳ್ಕರ್ ಮನೆತನದ ಸೊಸೆಯಾಗಿ ಕುಲವನ್ನು ಬೆಳಗಿದವರಿವರು.

ಯಾವುದೇ ಸಾಮಾನ್ಯ ಮಹಿಳೆಯು ಎದುರಿಸಲು ಅಸಾಧ್ಯವಾದ ಸಂಕಷ್ಟಗಳನ್ನು, ಸವಾಲುಗಳನ್ನು ರಾಣಿ ಅಹಿಲ್ಯಾಬಾಯಿ ಹೋಳ್ಕರ್ ತಮ್ಮ ಜೀವನದಲ್ಲಿ ಎದುರಿಸಿದರು. ಪ್ರೀತಿಪಾತ್ರರಾದ ಪತಿ, ಮಾವ, ಮಗಳು, ಅಳಿಯ, ಮೊಮ್ಮಗ ಹೀಗೆ ಆಪ್ತರ ಸಾವುಗಳಿಂದ ಮನಸ್ಸು ಘಾಸಿಗೊಂಡಿದ್ದರೂ ದೃಢ ಚಿತ್ತದಿಂದ ನೋವುಗಳನ್ನೆಲ್ಲ ಸಹಿಸಿ ಪ್ರಜಾಹಿತದಲ್ಲೇ ಸ್ವಹಿತವನ್ನು ಕಂಡು ಕರ್ತೃತ್ವಕ್ಕೆ ಪರಮ ಆದರ್ಶವಾದವರು ಈ ರಾಷ್ಟ್ರಮಾತೆ. ಆಡಳಿತದ ಸಾಮರ್ಥ್ಯ, ಶೌರ್ಯ, ಸಮರಕಲೆ, ದಾನಗುಣ, ರಾಜತಾಂತ್ರಿಕತೆ, ನ್ಯಾಯಗುಣಗಳನ್ನು ಹೊಂದಿದ್ದ ದೇವಿ ಅಹಿಲ್ಯಾಬಾಯಿ ಮಹಿಳಾ ಸಬಲೀಕರಣದ ಪ್ರತೀಕವಾಗಿದ್ದಾರೆ.

ಕರ್ನಾಟಕದ ಉತ್ತರ ಭಾಗದಲ್ಲಿ ಶಿವಭಕ್ತೆ ದೇವಿ ಅಹಿಲ್ಯಾಬಾಯಿಯವರಿಂದ ಪ್ರತಿಷ್ಠಾಪಿತವಾದ ರೇವಾಳೇಶ್ವರ ಎಂಬ ಹೆಸರಿನ ಶಿವ ಮಂದಿರ ಸಹಿತವಾದ ಅನ್ನ ಛತ್ರವಿರುವುದು ಗೋಕರ್ಣ ಕ್ಷೇತ್ರದಲ್ಲಿ. ಇಲ್ಲಿ ಅವರ ಮೂರ್ತಿಯು ಸ್ಥಾಪಿತವಾಗಿದ್ದು ಇಂದಿಗೂ ನಿತ್ಯ ಪೂಜೆಯು ನಡೆಯುತ್ತಿದೆ. ಅಲ್ಲದೇ ಕ್ಷೇತ್ರಾಧಿದೇವತೆಯಾದ ಮಹಾಬಲೇಶ್ವರನಿಗೂ ಅಹಿಲ್ಯಾಬಾಯಿಯವರ ಹೆಸರಿನಲ್ಲಿ ನಿತ್ಯವೂ ಅರ್ಚನೆ ನಡೆಯುತ್ತಿದ್ದು ಅವರ ಹೆಸರು ಚಿರಸ್ಥಾಯಿಯಾಗಿದೆ.

ಲೋಕಮಾತಾ ಅಹಿಲ್ಯಾಬಾಯಿಯವರ 300 ನೇ ಜನ್ಮವರ್ಷಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಹಲವಾರು ಸಮಾಜಮುಖೀ ಸಂಘಟನೆಗಳು ಸೇರಿ ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಮಾನೋತ್ಸವ ಸಮಿತಿಯ ಮೂಲಕ ಜನವರಿ 12, ರವಿವಾರದಂದು ಗೋಕರ್ಣದ ಮುಖ್ಯ ಕಡಲತೀರದಲ್ಲಿ ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿವೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಗಣೇಶ್ವರ ಸಾಂಬ ದೀಕ್ಷಿತ ಇವರು ವಹಿಸಲಿದ್ದು, ಪ್ರಾಸ್ತಾವಿಕವಾಗಿ ರಾಷ್ಟ್ರ ಸೇವಿಕಾ ಸಮಿತಿ, ವಿಜಯನಗರ ಪ್ರಾಂತ ಇದರ ಪ್ರಾಂತ ಕಾರ್ಯವಾಹಿಕಾ ಮಾನನೀಯ ವೇದಾ ಕುಲಕರ್ಣಿ ಇವರು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀಮತಿ ಕೆ. ಲಕ್ಷ್ಮೀಪ್ರಿಯಾ ಇವರು ಉಪಸ್ಥಿತರಿರಲಿದ್ದು,ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ, ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀ ರವೀಂದ್ರ ಇವರು ಆಗಮಿಸಲಿದ್ದಾರೆ.

ಶೋಭಾಯಾತ್ರೆಯು ಸಂಜೆ 4 ಗಂಟೆಯಿಂದ ರಥಬೀದಿಯಲ್ಲಿರುವ ಅಹಿಲ್ಯಾಬಾಯಿ ಅನ್ನಛತ್ರದಿಂದ ಪ್ರಾರಂಭವಾಗಿ ಗೋಕರ್ಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.ದೇವಿ ಅಹಿಲ್ಯಾಬಾಯಿ ಅನ್ನಛತ್ರದ ಎದುರು ಲೋಕಮಾತಾ ಅಹಿಲ್ಯಾಬಾಯಿಯವರ ಜೀವನದ ಪ್ರಮುಖ ಘಟ್ಟಗಳನ್ನು ಬಿತ್ತರಿಸುವ ಪ್ರದರ್ಶಿನಿಯನ್ನು ಏರ್ಪಡಿಸಲಾಗುವುದು ಹಾಗೂ ಪುಸ್ತಕ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಅಧ್ಯಕ್ಷರು: ವಿದ್ವಾನ್ ಗಣೇಶ್ವರ ಸಾಂಬ ದೀಕ್ಷಿತ, ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್‌ ಜನ್ಮತ್ರಿಶತಮಾನೋತ್ಸವ ಸಮಿತಿ, ಗೋಕರ್ಣ
ಹಾಗೂ ಪದಾಧಿಕಾರಿಗಳು.

Back to top button