Join Our

WhatsApp Group
Important
Trending

ಕಾರು ಪಲ್ಟಿ: ದೇಗುಲ ದರ್ಶನ ಮುಗಿಸಿ ಮರಳುತ್ತಿರುವಾಗ ದೈವಾಧೀನರಾದ ದಂಪತಿಗಳು

ಅಂಕೋಲಾ: ಕಾರು ಪಲ್ಟಿಯಾಗಿ ದಂಪತಿ ಮೃತ ಪಟ್ಟು ಮೂವರು ಗಾಯಗೊಂಡ ಘಟನೆ ತಾಲೂಕಿನ ಜಮಗೋಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ. ಮುಂಬೈ ಅಂಧೇರಿಯ ನಿವಾಸಿಗಳಾದ ನಾಗೇಂದ್ರ ಸದಾಶಿವ ಭಟ್ಕಳ (72) ಮತ್ತು ಸುಧಾ ನಾಗೇಂದ್ರ ಭಟ್ಕಳ(65) ಮೃತ ದುರ್ದೈವಿ ದಂಪತಿಯಾಗಿದ್ದು ಮಂಗಳೂರು ಉರ್ವ ನಿವಾಸಿ ನಿತ್ಯಾನಂದ ವಾಮನ ನಾಯಕ(61) ನಮಿತಾ ನಿತ್ಯಾನಂದ ನಾಯಕ (56) ಮುಂಬೈ ಅಂಧೇರಿಯ ದೀಪ್ತಿ ವಿಶ್ವಾಸ ಪ್ರಭು(36) ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಫಟ್ಟಿದ್ದಾರೆ.

ದೀಪ್ತಿ ಪ್ರಭು ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಅಂಕೋಲಾ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರು ಜಮಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರೈಲ್ವೆ ಸ್ಟೇಷನ್ ಬಳಿ ಪಲ್ಟಿಯಾಗಿದ್ದು ಮಂಗಳೂರು ಮೂಲದವರಾದ ಇವರು ದೈವೀ ಕಾರ್ಯಕ್ರಮದ ಪ್ರಯುಕ್ತ ಅಂಕೋಲಾದ ದೇವಾಲಯವೊಂದಕ್ಕೆ ಆಗಮಿಸಿ ಮಂಗಳೂರಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ.

ಕಾರು ಪಲ್ಟಿಯಾಗಿ ಕಾರಿನಲ್ಲಿ ಸಿಲುಕಿಬಿದ್ದವರನ್ನು ಎನ್ ಎಚ್ ಎ ಐ ಅಂಬುಲೆನ್ಸ್ 1033 ಅಂಬುಲೆನ್ಸ್ ಸಿಬ್ಬಂದಿ ಶಿವಾ ನಾಯ್ಕ , ಸ್ಥಳೀಯರು ಹಾಗೂ ಅಂಕೋಲಾ ಹಾಗೂ ಸುತ್ತಮುತ್ತಲಿನ ಕೆಲ ನಾಮಾಜಿಕ ಕಾರ್ಯಕರ್ತರು , ದಾರಿಯೋಕರು , 108 ಅಂಬುಲೆನ್ಸ್ ವಾಹನ ಸಿಬ್ಬಂದಿಗಳು , ಪೊಲೀಸರು ಮತ್ತಿತರರು ಹರಸಾಹಸ ಪಟ್ಟು ಹೊರತೆಗೆದರು. ದಂಪತಿ ಹಾಗೂ ಇತರೆ ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ , ಆ ವೇಳೆಗಾಗಲೇ ಮುಂಬೈ ನಿವಾಸಿ ದಂಪತಿ ಮೃತ ಪಟ್ಟಿದ್ದರು ಎನ್ನಲಾಗಿದೆ.

ಕಾರವಾರ ಡಿ.ವೈ.ಎಸ್. ಪಿ ಗಿರೀಶ್, ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರು ಚಲಾಯಿಸುತ್ತಿದ್ದ ನಿತ್ಯಾನಂದ ನಾಯಕ ಅವರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತದ ಘಟನೆ ಕುರಿತಂತೆ ಕಾನೂನು ಕ್ರಮ ಮುಂದುವರೆದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button