Focus NewsImportant
Trending

ತೊಟ್ಟಿಲಲ್ಲಿ ಅವಿತು ಬುಸ್ ಎಂದ ನಾಗರ: ಹಾವಿನ ಹೊಟ್ಟೆಯಿಂದ ಹೊರ ಬಂತು ಆರು ಕೋಳಿ ಮೊಟ್ಟೆ!

ಅಂಕೋಲಾ: ಕಾವು ಕೊಟ್ಟು ಮರಿಮಾಡಲು ಕುಳ್ಳಿರಿಸಿದ್ದ ಕೋಳಿಯನ್ನು ಸಾಯಿಸಿದ್ದ ದೊಡ್ಡ ನಾಗರ ಹಾವೊಂದು ಕೋಳಿ ಮೊಟ್ಟೆಗಳನ್ನೂ ನುಂಗಿ ತೊಟ್ಟಿಲಿನಲ್ಲಿ ಅವಿತುಕೊಂಡಿದ್ದರಿಂದ ಮನೆಯವರು ಆತಂಕಗೊಂಡಿದ್ದರು. ಸುದ್ದಿ ತಿಳಿದ ಉರಗ ಸಂರಕ್ಷಕ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಹೊರ ತಂದಾಗ ಹಾವು ತಾನು ನುಂಗಿದ್ದ 6 ಕೋಳಿ ಮೊಟ್ಟೆಗಳನ್ನು ಹೊರಕಕ್ಕುವ ಅಪರೂಪದ ದೃಶ್ಯವು ಕಂಡುಬಂತು.

ಬಿರು ಬೇಸುಗೆ,ಬಿಸಿಲಿನ ಝಳ ಮತ್ತಿತರ ಕಾರಣಗಳಿಂದ ಹಾವುಗಳು ಬಿಲ ಬಿಟ್ಟು ಹೊರಬಂದು,ತಂಪು ಪ್ರದೇಶವನ್ನು ಅರಸುವುದು ಇಲ್ಲವೇ ಆಹಾರ ಅರಸಿ ಕೋಳಿಗೂಡು, ಇಲ್ಲವೇ ಮನೆಯ ಸಂಧಿ ಗೊಂದಿಗಳಲ್ಲಿ ನುಸುಳಿ ಬರುವುದನ್ನು ನೋಡಿರುತ್ತೇವೆ ಇಲ್ಲವೇ ಕೇಳಿರುತ್ತೇವೆ. ಅಂತಹುದೇ ಒಂದು ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮಗೋಡ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ರೈಲ್ವೆ ನಿಲ್ದಾಣದ ಹತ್ತಿರ ಈಶ್ವರ್ ವಿನಯ್ ಗೌಡ ಎನ್ನುವವರ ಮನೆಯಲ್ಲಿ,ಕಳೆದೊಂದು ವಾರದಲ್ಲಿ ಒಂದೆರಡು ಕೋಳಿಗಳು ರಾತ್ರಿ ಬೆಳಗಾಗುವುದರೊಳಗೆ ಸತ್ತು ಬಿದ್ದಿದ್ದವಲ್ಲದೇ,ಕೆಲ ಮೊಟ್ಟೆಗಳು ನಾಪತ್ತೆಯಾಗಿ ಮನೆಯವರ ಆತಂಕಕ್ಕೆ ಕಾರಣವಾಗಿತ್ತು. ಅದಾದ ನಾಲ್ಕಾರು ದಿನಗಳ ಬಳಿಕ ಮನೆಯ ಸಾಮಾನುಗಳನ್ನು ತುಂಬಿಟ್ಟಿದ್ದ ಕೋಣೆಯೊಂದರಲ್ಲಿ ,ಕಾವಿಗೆ ಕುಳ್ಳಿರಿಸಿದ್ದ ಕೋಳಿಯೊಂದು ಸತ್ತು ಬಿದ್ದಿದ್ದು ಅನುಮಾನ ಗೊಂಡ ಮನೆಯವರು ಕಾರಣ ಹುಡುಕಲು ಮುಂದಾಗಿದ್ದಾರೆ.

ಈ ವೇಳೆ ಕೋಣೆಯಲ್ಲಿದ್ದ ಸಾಮಾನುಗಳನ್ನು ಸರಿಸಿ ನೋಡಲೆತ್ನಿಸಿದಾಗ,ತೊಟ್ಟಿಲಲ್ಲಿ ಅವಿತುಕೊಂಡಿದ್ದ ನಾಗರ ಹಾವು ಹೆಡೆ ಎತ್ತಿ ಬುಸ್ ಗುಡಲಾರಂಭಿಸಿದೆ. ಇದರಿಂದ ಆತಂಕಿತರಾದ ಮನೆಯವರು ಉರಗ ಸಂರಕ್ಷಕ ಅವರ್ಸಾದ ಮಹೇಶ್ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಮಹೇಶ್ ನಾಯ್ಕ ಜಮಗೋಡದ ಗೌಡರ ಮನೆಗೆ ಬಂದು, ಇಕ್ಕಟ್ಟಾದ ಜಾಗದಲ್ಲಿ ಚಾಕಚಕ್ಯತೆ ಪ್ರದರ್ಶಿಸಿ,ಭಾರಿ ಗಾತ್ರದ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು,ಮನೆಯಿಂದ ಹೊರ ತಂದಿದ್ದಾರೆ.

ಈ ವೇಳೆ ಹಾವು ತಾನು ನುಂಗಿಕೊಂಡಿದ್ದ ಸುಮಾರು 6 ಕೋಳಿ ಮೊಟ್ಟೆಗಳನ್ನು ತನ್ನ ಬಾಯಿಂದ ಹೊರ ಕಕ್ಕಿದೆ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಅಪರೂಪದ ಘಟನೆ ಮೊಬೈಲ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.ನಂತರ ಆ ಹಾವನ್ನು ಚೀಲದಲ್ಲಿ ಸೇರಿಸಿ ಸಂರಕ್ಷಿಸಿ,ಅರಣ್ಯ ಇಲಾಖೆಯ ಮೂಲಕ ಸುರಕ್ಷಿತ ಜಾಗದಲ್ಲಿ ಬಿಡಲು ಮಹೇಶ್ ನಾಯ್ಕ ಮುಂದಾಗುವ ಮೂಲಕ ಹಾವು ಬಂದಿದ್ದ ಮನೆಯವರ ಆತಂಕ ದೂರ ಮಾಡಿದರು.

ತಾವು ಸಾಕಿದ್ದ ಕೋಳಿ ಹಾವಿನ ಕಡಿತಕ್ಕೊಳಗಾಗಿ ಸತ್ತುಹೋಗಿರುವುದನ್ನು ಕಾಣಿಸಿದ ಮನೆಯ ಯಜಮಾನತಿ ಕಣ್ಣಲ್ಲಿ ಪರಿಸ್ಥಿತಿಯ ಅಸಹಾಯಕತೆ ಎದ್ದು ಕಾಣುತ್ತಿತ್ತು. ಅಂತೆಯೇ ಸ್ಥಳದಲ್ಲಿದ್ದ ಹಿರಿಯ ಮಹಿಳೆ ಸಣ್ಣಮ್ಮ ಗೌಡ ಹೇಳುವಂತೆ,ಮಹೇಶ್ ನಾಯ್ಕ ಎಲ್ಲಿಂದಲೋ ಬಂದು ನಮ್ಮ ಆತಂಕ ದೂರ ಮಾಡಿದರು.

ಆದರೆ ನಮಗಾಗುವ ಇಂತಹ ಕಷ್ಟ ಹಾಗೂ ನಷ್ಟಗಳಿಗೆ ಸಂಬಂಧಿಸಿದ ಇಲಾಖೆ ಇಲ್ಲವೇ ಜನಪ್ರತಿನಿಧಿಗಳು ಸಹಾಯ ನೀಡಲು ಮುಂದೆ ಬರುವುದಿಲ್ಲ ಎಂಬಂತೆ ಬೇಸರ ವ್ಯಕ್ತಪಡಿಸಿದರು. ಮಹೇಶ್ ನಾಯ್ಕ ಆ ಹಾವನ್ನು ಸಂರಕ್ಷಿಸಿ ,ತಮ್ಮ ಆತಂಕ ದೂರ ಮಾಡಿದ್ದಕ್ಕೆ ಮನೆಯವರು ಧನ್ಯತೆಯ ಭಾವ ವ್ಯಕ್ತಪಡಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳನ್ನು ಬತ್ತಲು ಬಿಡದೆ,ಕೆರೆಗಳನ್ನು ಸಂರಕ್ಷಿಸಬೇಕು.ಅಂತೆಯೇ ಪ್ರಾಣಿ ಪಕ್ಷಿಗಳಿಗೂ ಬದುಕಲು ಬಿಟ್ಟು ಪರಿಸರ ಸಂರಕ್ಷಣೆಯನ್ನು ಮಾಡಬೇಕಿದೆ ಎಂಬ ಸಂದೇಶ ಉರಗ ತಜ್ಞ ಮಹೇಶ್ ನಾಯಕರಿಂದ ಕೇಳಿ ಬಂತು.

ಈವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಹಾವುಗಳನ್ನು ಸಂರಕ್ಷಿಸಿರುವ ಮಹೇಶ್ ನಾಯ್ಕ ಅವರ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button