
ಹೊನ್ನಾವರ: ಯುವಕರು ದೇಶದ ಆಸ್ತಿ. ಅವರಲ್ಲಿ ಸೇವಾ ಮನೋಭಾವದ ಕೊರತೆ ಎದ್ದು ಕಾಣುತ್ತಿದೆ.ಎನ್.ಎಸ್.ಎಸ್.ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಿದೆ. ಸೇವೆಯಿಂದ ನಮ್ಮ ಬದುಕು ಅರಳುತ್ತದೆ ಎಂದು ಕಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಹೇಳಿದರು. ಅವರು ಕ.ವಿ.ವಿ.ಧಾರವಾಡದ ಎನ್.ಎಸ್.ಎಸ್. ಕೋಶ ಮತ್ತು ಪಟ್ಟಣದ ಎಸ್. ಡಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ಕಡ್ಲೆ ಗ್ರಾ. ಪಂ. ವ್ಯಾಪ್ತಿಯ ವಂದೂರಿನಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಯುವಜನತೆ ದುಡ್ಡಿನ ಹಿಂದೆ ಬಿದ್ದಿದೆ. ಸಾಕ್ಷರ ವ್ಯಕ್ತಿಗಳೇ ಸಮಾಜಕ್ಕೆ ಶಾಪವಾಗುತ್ತಿದ್ದಾರೆ. ಪದವಿ ಪಡೆದ ಮಾತ್ರಕ್ಕೆ ಜೀವನ ಯಶಸ್ವಿಯಾಗುವುದಿಲ್ಲ. ಸಮಾಜದ ಋಣ ತೀರಿಸಲು ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ದೇಶ ಸೇವೆ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಡಿ.ಎಲ್.ಹೆಬ್ಬಾರ್ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಸೇವೆ ಎನಿಸಿಕೊಳ್ಳುತ್ತದೆ. ‘ಮಾನವ ಸೇವೆಯೇ ಮಾಧವ ಸೇವೆ’ ಎಂಬುದನ್ನು ನಾವು ನೆನಪಿಡಬೇಕು. ನಮ್ಮ ಶ್ರಮದಾನದ ಮೂಲಕ ಗ್ರಾಮೀಣ ಪರಿಸರಕ್ಕೆ ನೀಡಿದ ಕೊಡುಗೆ ಸದಾ ನೆನಪಿನಲ್ಲಿ ಉಳಿಯುತ್ತದೆ. ಅಂತಹ ಕೆಲಸಗಳು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಗಲಿ ಎಂದರು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯ ಗೋವಿಂದ ಗೌಡ, ಶಾಲಾ ಮುಖ್ಯಾಧ್ಯಾಪಕ ಶಂಕರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್.ಯೋಜನಾಧಿಕಾರಿ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಬಿರಾಧಿಕಾರಿ ಪ್ರಶಾಂತ ಮೂಡಲಮನೆ ವಂದಿಸಿದರು. ಎನ್.ಎಸ್.ಎಸ್.ಪ್ರಶಿಕ್ಷಣಾರ್ಥಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಹೊನ್ನಾವರ