
ಕುಮಟಾ: ಧರ್ಮಸ್ಥಳ ಕ್ಷೇತ್ರದ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳ ಷಡ್ಯಂತ್ರದ ವಿರುದ್ಧ ಪ್ರತಿಭಟನೆಯನ್ನು ಆಗಷ್ಟ್ 25 ರಸೋಮವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಸಮಸ್ತ ಹಿಂದೂ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದೂ ಧರ್ಮ ಹಾಗೂ ಧರ್ಮಕ್ಷೇತ್ರದ ಉಳಿವಿಗಾಗಿ ಕೈಜೋಡಿಸಬೇಕು ಎಂದು ಸನಾತನ ಧರ್ಮ ಜಾಗೃತಿ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್.ಜಿ. ಭಟ್ ಹೇಳಿದರು.
ಕ್ಷೇತ್ರದ ವಿರುದ್ಧದ ಸುಳ್ಳು ಆರೋಪಕ್ಕೆ ಖಂಡನೆ
ಅವರು ಕುಮಟಾ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವೂ ಒಂದಾಗಿದೆ. ದಕ್ಷಿಣಕಾಶಿ ಎಂದು ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದ ಮೇಲೆ ಕೆಲವು ಕಿಡಿಗೇಡಿಗಳು ಕಳಂಕ ತರುವ ವಿಡಿಯೋ ತುಣುಕುಗಳನ್ನು ತಯಾರಿಸಿ ಅದನ್ನು ಸಮೂಹ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ತಿಮ್ಮರೋಡಿ ಮಹೇಶ ಶೆಟ್ಟಿ, ಜಯಂತ ಡಿ ಹಾಗೂ ಸಮೀರನಂತಹ ಕೆಲವು ಕಿಡಿಗೇಡಿಗಳು ಧರ್ಮಸ್ಥಳದ ಕ್ಷೇತ್ರದ ಮೇಲೆ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ.
ಇದಕ್ಕೂ ಪೂರ್ವದಲ್ಲಿ ಸೌಜನ್ಯ ಕೊಲೆಯ ಬಗ್ಗೆ ಸೂಕ್ತ ತನಿಖೆಯ ಬಗ್ಗೆಯೂ ಸಹ ಹೋರಾಟ ಆರಂಭ ಮಾಡಿದ್ದರು. ಆದರೆ ಇದೀಗ ಧರ್ಮಸ್ಥಳ ಕ್ಷೇತ್ರದ ಮೇಲೆ ಅವ್ಯಾಹತವಾಗಿ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಧರ್ಮಸ್ಥಳ ಕ್ಷೇತ್ರ ಮತ್ತು ಪೂಜ್ಯರಾದ ಡಾ. ವಿರೇಂದ್ರ ಹೆಗ್ಗಡೆಯವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಸಮಸ್ತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಇಂತಹ ಕಿಡಿಗೇಡಿಗಳ ವಿರುದ್ಧ ತಕ್ಷಣ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಮಸ್ತ ಹಿಂದೂ ಬಾಂದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದೂ ಧರ್ಮ ಹಾಗೂ ಧರ್ಮಕ್ಷೇತ್ರದ ಉಳಿವಿಗಾಗಿ ಕೈಜೋಡಿಸಬೇಕು ಎಂದು ಹೇಳಿದರು.
ಬಿಜೆಪಿ ಮಂಡಲಾಧ್ಯಕ್ಷ ಜಿ.ಆಯ್. ಹೆಗಡೆ ಮಾತನಾಡಿ ಧಾರ್ಮಿಕ ನಂಬಿಕೆಯುಳ್ಳ ಧರ್ಮಸ್ಥಳದಂತಹ ಕ್ಷೇತ್ರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಧಾರ್ಮಿಕ ನಂಬಿಕೆ ಧಕ್ಕೆ ತಂದಿರುವ ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೇಮಂತಕುಮಾರ್ ಗಾಂವ್ಕರ್, ಬಿಜೆಪಿ ಮಹಿಳಾ ಮೋರ್ಚಾದ ಜಯಾ ಶೇಟ್, ಹೊಲನಗದ್ದೆ ಪಂಚಾಯತ್ ಅಧ್ಯಕ್ಷ ಎಮ್. ಎಮ್. ಹೆಗಡೆ, ದೀಪಾ ಹಿಣಿ, ಜಿನೇಂದ್ರ ನಾಯಕ್, ತಿಮ್ಮಪ್ಪ ಮುಕ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ