Big News
Trending

ಉತ್ತರಾಯಣ ಪುಣ್ಯಕಾಲದ ಶುಭದಿನ: ಮಕರ ಸಂಕ್ರಾಂತಿ

ಲೇಖನ: ಉಮೇಶ್ ಮುಂಡಳ್ಳಿ ಭಟ್ಕಳ, ಸಾಹಿತಿಗಳು
9945840552

ಭಾರತದಲ್ಲಿನ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ನಂಬಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅನೇಕ ವೈಚಾರಿಕ ಪ್ರಾಕೃತಿಕ ತಳಹದಿಯ ಮೇಲೆಯೂ ಆಚರಿಸಲ್ಪಡುವಂತದ್ದು. ಪ್ರಕೃತಿಯ ಸೂರ್ಯನ ಪರಿಭ್ರಮಣೆಯ ಪ್ರಕಾರ ಆಚರಿಸಲ್ಪಡುವ ಹಿಂದುಗಳ ಒಂದು ಪವಿತ್ರ ಆಚರಣೆ ಮಕರ ಸಂಕ್ರಾಂತಿ. ಈ ಮಕರ ಸಂಕ್ರಾತಿಯ ಬಗ್ಗೆ ಕೆಲವು ಅಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ.

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಸುಗ್ಗಿಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ ಹೌದು. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಹೆಚ್ಚಾಗಿ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

ಮಕರ ಸಂಕ್ರಾಂತಿ ಒಂದು ಧರ್ಮಾತೀತ ರಾಷ್ಟೀಯ ಹಬ್ಬವೆಂದರೂ ತಪ್ಪಾಗಲಾರದು. ಈ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿಂದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬ ಅಚರಿಸಲ್ಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬ ಕರೆಯಲ್ಪಡುತ್ತದೆ. ನೇಪಾಳದಲ್ಲಿಯೂ ಮಕರ ಸಂಕ್ರಾಂತಿಯನ್ನು ಮಾಘ ಮಾಸದ ಆರಂಭದ ದಿನ ಅದ್ಧೂರಿಯಾಗಿ ಆಚರಿಸಲಾಗುತ್ತದೆಯಂತೆ. ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ಈ ಶಾಸ್ತ್ರದಂತೆ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ. ಈ ಕಾಲವು ಪ್ರತಿವರ್ಷ ಜನವರಿ ೧೪ ಅಥವಾ ೧೫ ರಂದು ನಡೆಯುತ್ತದೆ.
ಈ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಸುಗ್ಗಿಯ ಕಾಲದಲ್ಲಿ ನಡೆಯುವ ಅತ್ಯಂತ ಸಂಭ್ರಮದ ಹಬ್ಬ. ಇದನ್ನು ಪೊಂಗಲ್ ಎಂದು ಕೆಲವು ಕಡೆ ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು.

ಕರ್ನಾಟಕದಲ್ಲಿ ಎಳ್ಳು, ಸಕ್ಕರೆ -ಬೆಲ್ಲದ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ಈ ದಿನ ಮಹಿಳೆಯರು ಮಕ್ಕಳು ಹೊಸ ಬಟ್ಟೆ ತೊಟ್ಟು ಅತ್ಯಂತ ಸಂಭ್ರಮ ಹಾಗೂ ಲವಲವಿಕೆಯಿಂದ ದೇವಾಲಯಕ್ಕೆ ಹೋಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ ಸ್ನೇಹಿತವಲಯದಲ್ಲಿ ಶುಭಾಶಯ ಹಂಚಿಕೊಳ್ಳುತ್ತಾರೆ.ಕೆಲವು ಹಳ್ಳಿಗಳಲ್ಲಿ ದನಕರುಗಳಿಗೆ ಮೈ ತೊಳೆದು – ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ – ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.

ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎಂತಲೂ ಕರೆಯುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಯಾರೂ ಮುಂದಾಗದೇ ಇರಬಹುದು.ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.

ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯನು ವಿಶ್ವದ ಆತ್ಮ, ಈ ಜಗತ್ತಿನ ಕಣ್ಣು.
ಮಳೆ ಬೀಳಲು- ಬೆಳೆ-ಬೆಳೆಯಲು- ಇಳೆ ಬೆಳಗಲು ಸೂರ್ಯನೇ ಕಾರಣ.
ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು ಎಂಬುದು ಸಂಕ್ರಾಂತಿಯ ನಂಬುಗೆ.

ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಈ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಮಹಾಭಾರದಲ್ಲಿ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು ಎಂದು ಹೇಳಲಾಗುತ್ತದೆ. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ ಎನ್ನುತ್ತಾರೆ ವೇದವಿದ್ಯಾ ಪಾರಂಗತರು ಜ್ಯೋತಿಷ ಶಾಸ್ತ್ರ ಬಲ್ಲವರು.
ಸಂಕ್ರಾಂತಿಯ ಸೂರ್ಯೋದಯದಿಂದ ಸೂರ್ಯಾಸ್ತದ ಕಾಲದವರೆಗೂ ಪುಣ್ಯ ಕಾಲವಾಗಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಹೀಗೆ ಮಾಡಿದಲ್ಲಿ ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇಂದಿಗೂ ಇದೆ.

ಇದಕ್ಕಾಗಿಯೇ ಎಳ್ಳು – ಬೆಲ್ಲ ಹಂಚುವ ಸಂಪ್ರದಾಯ ರೂಡಿಯಲ್ಲಿ ಬಂದಿರುವುದಾಗಿ ಬಲ್ಲವರು ಹೇಳುತ್ತಾರೆ.
ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸ್ವಾಮಿ ಅಯ್ಯಪ್ಪನಿಗೆ ಪಂದಳದಿಂದ ಭವ್ಯ ಮೆರವಣಿಗೆಯಲ್ಲಿ ಬರುವ ವಿಶೇಷ ಅಭರಣ ತೊಡಿಸಿ ಪೂಜೆ ಮಾಎಲಾಗುತ್ತದೆ. ಈ ದಿನ ಶಬರಿಮಲೆ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿ ಜ್ಯೋತಿ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.ಲಕ್ಷಾಂತರ ಮಾಲಾಧಾರಿ ಭಕ್ತರು ಈ ಪರಮ ದಿವ್ಯ ಕ್ಷಣಕ್ಕಾಗಿ ಅಲ್ಲಿ ಕಣ್ ರೆಪ್ಪೆ ಮುಚ್ಚದೇ ಕಾಯುತ್ತಿರುತ್ತಾರೆ. ಜ್ಯೊತಿ ದರ್ಶನದ ನಂತರವೇ ಅವರು ಮರು ಪ್ರಯಾಣ ಬೆಳೆಸುತ್ತಾರೆ.

ಇಂತಹ ಸಂಭ್ರಮದ ಹಬ್ಬ ಇತ್ತೀಚೆಗೆ ತನ್ನ ಸಂಭ್ರಮ ಕಳೆದೆಕೊಳ್ಳುತ್ತಿದೆಯೇನೋ ಅನ್ನಿಸದೇ ಇರಲಾರದು. ಮೊಬೈಲ್ ನಮ್ಮೆಲ್ಲನ್ನೂ ಆವರಿಸುವ ಪೂರ್ವದಲ್ಲಿ ಯುವ ಜನಾಂಗದಲ್ಲಿ ಸಂಕ್ರಾತಿಯ ಬಗ್ಗೆ ಬೇರೆಯದೇ ಸಂಭ್ರಮ ಕಾಣಬಹುದಿತ್ತು.ತಿಂಗಳಿಗೂ ಮೊದಲೇ ಮಾರುಕಟ್ಟೆಯಲ್ಲಿ ಬಗೆಬಗೆಯ ಗ್ರಿಟಿಂಗ್ಸ್ ಕಾರ್ಡಗಳು ಮಾರಾಟಕ್ಕೆ ಲಭ್ಯವಿರುತ್ತಿದ್ದವು. ಹೊರಗಡೆ ಇರುವ ತಮ್ಮ ಸಹೋದರ ಸಹೋದರಿಯರು ಸ್ನೇಹಿತರು ಬಂಧು ಬಾಂದವರು ಸಂಬಂಧಿಗಳಿಗೆ ಶುಭಾಶಯ ಕಳಿಸಲೆಂದೇ ಎಷ್ಟೊ ಹೆಣ್ಣು ಮಕ್ಕಳು ಮಹಿಳೆಯರು ಮಾರುಕಟ್ಟೆಗೆ ತೆರಳಿ ಗ್ರಿಟಿಂಗ್ಸ್ ಕಾರ್ಡ್ ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಯಾರಿಗೆ ಯಾವುದನ್ನು ಕಳಿಸುವುದು ಶುಭಾಶಯಗಳನ್ನು ಹೇಗೆ ಹಂಚಿಕೊಳ್ಳಲಿ, ಅವರ ಶುಭಾಶಯ ಪತ್ರಗಳು ಎಂದು ನನ್ನ ಸೇರುವುದು, ಹೀಗೆ ಅವರ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ.

ಆದರೆ ಇಂದು ಅಂತ ಯಾವ ಉತ್ಸಾಹ ಲವಲವಿಕೆ ಬಾಂಧ್ಯವ್ಯ ನೀರಿಕ್ಷಿಸಲು ಸಾಧ್ಯವಿಲ್ಲ. ಆದರೂ ಹಬ್ಬಗಳು ನಿರಂತರವಾಗಿದೆ ಆ ಎಲ್ಲ ಒತ್ತಡ ಅನ್ಯ ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವಗಳ ನಡೆವೆಯೂ ನಮ್ಮ ತನದ ಉಳಿವು ಇದೆ ಎನ್ನುವ ತೃಪ್ತಿ ಇದೆ. ಏನೆ ಇರಲಿ ಈ ಸಂಪ್ರದಾಯ ಆಚರಣೆ ಹಬ್ಬ ಹರಿದಿನಗಳು ಕೇವಲ ಔಪಚಾರಿಕವಲ್ಲ ಇವೆಲ್ಲದರ ಹಿಂದೆ ವೈಜ್ಞಾನಿಕ ವೈಚಾರಿ ತಾತ್ವಿಕವಾದ ಭದ್ರ ಅಡಿಪಾಯವಿದೆ.ಇವು ನಮ್ಮ ಬದುಕಿನ ಭಾಗವು ಹೌದು ಎನ್ನುವುದನ್ನು ಮನದಲ್ಲಿ ಇಟ್ಟುಕೊಂಡು ಈ ಸಂಭ್ರಮದ ನಿರಂತರತೆಯನ್ನು ಕಾಯ್ದುಕೊಳ್ಳೊಣ ಎನ್ನುವ ಹಂಬಲ ನನ್ನದು.

Back to top button