ಕುಮಟಾ: ಕಿಂಗ್ ಕೋಬ್ರಾ.. ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳಲ್ಲೊಂದು.. ಒಂದೆ ಒಂದು ಕಡಿತಕ್ಕೆ ಮನಷ್ಯರ ಪ್ರಾಣ ತೆಗೆಯಬಲ್ಲದು.. ಈ ಬೃಹತ್ ಕಾಳಿಂಗ ಸರ್ಪ ನೋಡಿದ್ರೆ, ಎಂಥ ಗಟ್ಟಿಗರಲ್ಲೂ ಒಮ್ಮೆ ಭಯ ಆವರಿಸಿಕೊಳ್ಳುತ್ತೆ.. ಈ ವಿಷ ಸರ್ಪಗಳು ಕಾಡಿನಿಂದ ನಾಡಿಗೆ ಬರುವುದು, ಹೊಲಗದ್ದೆಗಳಿಗೆ ಆಗಮಿಸುವುದು ಸರ್ವೇ ಸಾಮಾನ್ಯವಾಗಿದೆ.. ಅದರಲ್ಲೂ ಕಾಡಂಚಿನ ಹಳ್ಳಿಗಳಲ್ಲಿ, ಕಾಳಿಂಗ ಸರ್ಪಗ ಮನೆಗಳಿಗೆ ಬರುವ ಪ್ರಕರಣಗಳು ಜಾಸ್ತಿ ಕಂಡುಬರುತ್ತಿದೆ.. ಮನೆಯಲ್ಲಿ ಈ ಬೃಹತ್ ಹಾವುಗಳನ್ನು ಕಂಡ ತಕ್ಷಣ ನೆನಪಿಗೆ ಬರುವುದು ಉರಗತಜ್ಞರು.. ಪೋನ್ ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸುವ ಇವರು, ಮನೆಯವರ ಭಯವನ್ನು ಹೋಗಲಾಡಿಸಿ, ಹಾವನ್ನೂ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುತ್ತಾರೆ..
ಇಂಥ ಉರಗತಜ್ಞರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲಭಾಗದ ಪವನ್ ಎಮ್ ನಾಯ್ಕ.. ಜಿಲ್ಲೆಯಲ್ಲಿ ಸ್ನೇಕ್‍ಮ್ಯಾನ್ ಎಂದೇ ಗುರುತಿಸಿಕೊಂಡಿರುವ ಇವರು, ಎಲ್ಲೆ ಹಾವುಕಾಣಿಸಿಕೊಂಡರು ಸಾಕು, ಕ್ಷಣಾರ್ಧದಲ್ಲಿ ಹಾಜರಿರುತ್ತಾರೆ.. ಬೃಹತ್ ಕಾಳಿಂಗ ಸರ್ಪಗಳನ್ನು, ಹಾವುಗಳನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾ, ಜನಸೇವೆ ಮಾಡಿಕೊಂಡು ಬಂದಿದ್ದಾರೆ.. ನಿಸ್ವಾರ್ಥವಾಗಿ, ಯಾವುದೇ ಪ್ರತಿಫಲ ಅಪೇಕ್ಷಿಸದೇ ಇವರ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯ… ಅಪಾಯಕಾರಿ ವಿಷಜಂತುಗಳನ್ನು ಹಿಡಿಯಲು ಗಂಡೆದೆ ಬೇಕು.. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಆಪತ್ತು ಗ್ಯಾರಂಟಿ.. ಈ ವಿಷಯ ಗೊತ್ತಿದ್ದರೂ, ತಮ್ಮ ಜೀವಕ್ಕೆ ಆಪತ್ತಿದ್ದರೂ ಲೆಕ್ಕಿಸದೆ, ಹಾವುಗಳನ್ನು ಹಿಡಿದು, ಅವುಗಳನ್ನು ರಕ್ಷಿಸುತ್ತಿರುವ ಇವರ ಕೆಲಸಕ್ಕೊಂದು ಸಲಾಂ ಹೇಳಲೇಬೇಕು..
ಹಾವುಕಂಡ ಕೂಡಲೇ ಇವರಿಗೆ ದೂರವಾಣಿ ಕರೆಗಳು ಬರುತ್ತವೆ.. ಕೂಡಲೇ ಕಾರ್ಯಪ್ರವೃತ್ತರಾಗುವ ಪವನ್ ನಾಯ್ಕ, ಹಾವುಗಳನ್ನು ಹಿಡಿದು ರಕ್ಷಣೆ ಮಾಡುವುದಲ್ಲದೆ, ಜನರಿಗೆ ಹಾವುಗಳಲ್ಲಿನ ಅಪನಂಬಿಕೆಯನ್ನು ಹೋಗಲಾಡಿಸುವಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ.. ಹಾವುಗಳನ್ನು ಕೊಲ್ಲಬಾರದು. ಹಾವುಗಳಿಂದ ಮನುಷ್ಯನಿಗೆ ಪ್ರಾಣಕ್ಕೆ ಅಪಾಯವಿಲ್ಲ ಎನ್ನುವುದನ್ನು ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಆಹಾರ ಸರಪಳಿಯಲ್ಲಿ ಹಾವುಗಳ ಪಾತ್ರ ಪ್ರಮುಖವಾದುದು. ಇವುಗಳ ಸಂಖ್ಯೆ ಕಡಿಮೆಯಾದಷ್ಟು ಇಲಿ,ಹೆಗ್ಗಣಗಳು ಹೆಚ್ಚಾಣಿ ರೈತರಿಗೆ ಬೆಳೆನಷ್ಟವಾಗುತ್ತದೆ ಎನ್ನುವುದು ಇವರ ವಾದ..
ಈ ಸ್ನೇಕ್‍ಮ್ಯಾನ್ ಪವನ್ ನಾಯ್ಕ ಇದುವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.. ಅತಿಚಿಕ್ಕವಯಸ್ಸಿನಲ್ಲೇ ಹಾವುಗಳನ್ನು ಹಿಡಿಯಲು ಆರಂಭಿಸಿದ್ದು, ಇವರಿಗೆ ಪ್ರತಿದಿನ ಐದಾರು ಕಡೆ ಕರೆಗಳು ಬರುತ್ತಿವೆ.. ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ಕೂಡಾ ಇವರಿಗೆ ಮಾಹಿತಿ ನೀಡಿ, ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.. ಇವರು ಹಾವು ಹಿಡಿಯುವ ಕೆಲ ಅಪಾಯಕಾರಿ ಕ್ಷಣಗಳನ್ನು ಖ್ಯಾತ ಛಾಯಾಗ್ರಾಹಕರಾದ ಗೋಪಿ ಜಾಲಿ ತಮ್ಮ ಕ್ಯಾಮರಾದಲ್ಲಿ ಸೆರೆಡಿದಿದ್ದಾರೆ.
ಪವನ್ ಎಮ್ ನಾಯ್ಕ ಕೇವಲ ಹಾವು ಹಿಡಿಯುವುದು ಮಾತ್ರವಲ್ಲ… ಕಡವೆ, ಕಾಡಂದಿ, ಮೊಸಳೆ, ಮಂಗ ಮುಂತಾದವುಗಳನ್ನು ಹಿಡಿದು, ರೈತರಿಗೆ ನೆರವಾಗುತ್ತಾ ಬಂದಿದ್ದಾರೆ. ಇದನ್ನು ಇವರು ಹವ್ಯಾಸಕ್ಕಾಗಿ ಮಾಡುತ್ತಿದ್ದು, ಯಾವುದೇ ಆರ್ಥಿಕ ನಿರೀಕ್ಷೆಗಳಿಲ್ಲ ಎನ್ನುತ್ತಾರೆ.. ಜೀವದ ಹಂಗು ತೊರೆದು, ಅಪಾಯಕಾರಿ ಕೆಲಸನ್ನು ಹವ್ಯಾಸವಾಗಿ ಮಾಡಿಕೊಂಡು, ಸ್ನೇಕ್‍ಮ್ಯಾನ್ ಎಂದು ಗುರುತಿಸಿಕೊಂಡಿರುವ ಪವನ್ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ.. ನೀವು ಕೂಡಾ ಅವರಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿ, ಅವರ ಈ ಸಮಾಜಮುಖಿ ಕೆಲಸವನ್ನು ಪ್ರೋತ್ಸಾಹಿಸೋಣ… ಬೆಂಬಲಿಸೋಣ…
ವಿಸ್ಮಯ ನ್ಯೂಸ್, ಕುಮಟಾ