Important
Trending

ಕಳ್ಳಮಾರ್ಗದ ಮೂಲಕ ಬಂದು ಭಟ್ಕಳದಲ್ಲಿ ನೆಲೆಸಿದ್ದ ಪಾಕಿಸ್ತಾನದ ಮಹಿಳೆ: ಆಧಾರ್​ ಕಾರ್ಡ್, ಪಾನ್ ಕಾರ್ಡ್ ಮಾಡಿಕೊಂಡು ಎಂಟು ವರ್ಷಳಿಂದ ಇಲ್ಲೆ ವಾಸ

ಈಕೆ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಬಂದು ಎಂಟು ವರ್ಷಗಳೇ ಕಳೆದಿವೆ. ಕಳ್ಳ ಮಾರ್ಗದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ, ಇಲ್ಲಿ ಆಧಾರ್​ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆ ಮಾಡಿಕೊಂಡಿದ್ದಾಳೆ. ಕೊನೆಗೂ ಈಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಭಟ್ಕಳ: ಪಾಕಿಸ್ತಾನದ ಈಕೆ ಕಳೆದ ಎಂಟು ವರ್ಷಗಳಿಂದ ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸಿದ್ದಳು. ಹೌದು, ಭಟ್ಕಳದ ನವಾಯತ್​ ಕಾಲೋನಿಯೊಂದರ ಮನೆಯಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸುಕಂಡಿದ್ದಾರೆ. ಬಂಧಿತ ಮಹಿಳೆಯನ್ನು ಖತೀಜಾ ಮೆಹರಿನ್ ಎಂದು ಗುರುತಿಸಲಾಗಿದೆ.

ಆತಂಕದ ವಿಷಯ ಅಂದರೆ ಈ ಮಹಿಳೆ ಭಟ್ಕಳದಲ್ಲಿ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಅಗತ್ಯ ದಾಖಲೆಗಳನ್ನು ಪಡೆದಿದ್ದಾಳೆ. ರೇಶನ್ ಕಾರ್ಡ್ , ಜನನ ಪ್ರಮಾಣಪತ್ರ, ಆಧಾರ್​ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ.

ಪೊಲೀಸರು ದಾಳಿ ವೇಳೆ ಈ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಈಕೆಯ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಾಕಿಸ್ತಾನದ ನಾಗರಿಕತ್ವ ಹೊಂದಿರುವ ಈ ಮಹಿಳೆ ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ 8 ವರ್ಷಗಳ ಹಿಂದೆಯೇ ಆಗಮಿಸಿ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದಳು.

ಅಲ್ಲದೆ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಆದರೆ, 2016ರಲ್ಲಿ ಪ್ರಾರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು 3 ಮಕ್ಕಳೊಂದಿಗೆ ವಾಸವಾಗಿದ್ದಳು.

ಮಹಿಳೆಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿಸಲಾಗಿದೆ. ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಬೆಳ್ಳಿಯಪ್ಪ, ಕೆ.ಯು. ಸಿಪಿಐ ದಿವಾಕರ ಪಿ.ಎಮ್, ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್​ಐ ಕುಸುಮಾ ಬಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button