ಚವತಿ ಗಣಪನ ಬೆಳ್ಳಿ ಮೋದಕ ಬಿಟ್ಟು ಚಿನ್ನದ ಆಭರಣ ಕದ್ದೊಯ್ದ ಕಳ್ಳರು! ಮುಂಬಾಗಿಲ ಒಡೆದು ದುಷ್ಕೃತ್ಯ
ಅಂಕೋಲಾ: ತಾಲೂಕಿನ ಕುಂಬಾರಕೇರಿ – ಪೂಜಗೇರಿ ಮಧ್ಯದ ತೆಂಕಣಕೇರಿ ಪ್ರದೇಶದಲ್ಲಿ ಮಂಜುಗುಣಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಶಿಕ್ಷಕ ದಂಪತಿಗಳ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದ್ದು, ಬೆಳಿಗ್ಗೆ ಮನೆಯವರ ಗಮನಕ್ಕೆ ಬಂದಿದೆ.
ತೆಂಕಣಕೇರಿ ನಿವಾಸಿ ಶಿಕ್ಷಕ ಸುಭಾಷ್ ನಾರಾಯಣ ನಾಯ್ಕ ಇವರ ಮನೆಯಲ್ಲಿ ಕಳ್ಳತನವಾಗಿದ್ದು,ಇವರು ತಮ್ಮ ಕುಟುಂಬ ಸಮೇತ ಮಂಗಳವಾರ ಸಂಜೆ ಅಂಕೋಲಾದ ಮನೆಯಿಂದ,ತಮ್ಮ ಮೂಲ ಮನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಗುರುವಾರ ಬೆಳಿಗ್ಗೆ ಅಂಕೋಲಾಕ್ಕೆ ವಾಪಸ ಆದ ವೇಳೆ ಮನೆ ಮುಂಬಾಗಿಲು ಅರ್ಧ ತೆರೆದಿದ್ದನ್ನು ನೋಡಿ,ಗಾಬರಿಯಾಗಿ ಸಂಬಂಧಿ ನಾಗೇಂದ್ರ ನಾಯ್ಕ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಸಿಪಿಐ ಕೃಷ್ಣಾನಂದ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಬೆರಳಚ್ಚು ತಜ್ಞರನ್ನು ಕರೆಸಿದರು.ಪಿಎಸ್ಐ ಈಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಅಪರಾಧ ವಿಭಾಗದ ಹಿರಿಯ ಹವಾಲ್ದಾರ್ ಮೋಹನದಾಸ ಶೇಣ್ಣಿ, ಹೆಚ್ ಸಿ ಪರಮೇಶ್,ಸಿಬ್ಬಂದಿ ಶ್ರೀಕಾಂತ್ ಕಟಬರ್ ಕರ್ತವ್ಯ ನಿರ್ವಹಿಸಿದರು.
ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಗಿನ ಅವಧಿಯಲ್ಲಿ ಈ ಕಳ್ಳತನವಾಗಿರುವ ಸಾಧ್ಯತೆಯಿದ್ದು,ಮನೆಯಲ್ಲಿ ಯಾರು ಇರದಿರುವುದನ್ನು ಖಚಿತಪಡಿಸಿಕೊಂಡೆ ಸ್ಥಳೀಯರ ಸಹಕಾರದಲ್ಲಿ ಕಳ್ಳತನ ನಡೆಸಿರುವ ಸಾಧ್ಯತೆ ಕೇಳಿಬರುತ್ತಿದೆ.
ಕಳ್ಳರು ಹಿಂಬದಿ ಬಾಗಿಲು ಮೀಟಿ ಒಳಪ್ರವೇಶಿಸುವ ಯತ್ನ ನಡೆಸಿದಂತೆ ಕಂಡುಬರುತ್ತಿದ್ದು,ತದನಂತರ ಮುಂಬಾಗಿಲ ಚಾವಿ ಒಡೆದು, ಕಳ್ಳತನದ ಕುರುಹು ದೊರೆಯದಂತೆ ಆ ಚಾವಿಯನ್ನು ಸ್ಥಳದಿಂದ ನಾಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಒಳ ಪ್ರವೇಶಿಸಿದ ಕಳ್ಳರು ಪ್ರತ್ಯೇಕ ಎರಡು ಬೆಡ್ ರೂಮಗಳಲ್ಲಿದ್ದ ಕಪಾಟುಗಳನ್ನು ತೆರೆದು ಅದರಲ್ಲಿದ್ದ ವಸ್ತ್ರ,ಬ್ಯಾಗ್ ಮತ್ತಿತರ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಕಪಾಟು ಒಂದರ ಒಳಲಾಕರಿನಲ್ಲಿಟ್ಟಿದ್ದ ಚೌತಿಯ ಸಂದರ್ಭದಲ್ಲಿ ಗಣಪನ ಪೂಜೆಗೆ ಉಪಯೋಗಿಸುವ ಎರಡು ಬಂಗಾರದ ಚೈನ್,ಸೊಂಡಿಲು ಪಟ್ಟಿ,ತಿಲಕ ಸೇರಿದಂತೆ ಇತರೆ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಚಾಲಕಿ ಕಳ್ಳರು,ಬೆಳ್ಳಿ ಮೋದಕ,ಬೆಳ್ಳಿ ಕಡಗದಂತ ಆಭರಣಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.ಲಾಕ್ಡೌನ್ ನಿಂದ ಮಗಳ ವಿವಾಹ ಮುಂದೂಡಲ್ಪಟ್ಟು,ಮದುವೆಗೆ ಮಾಡಿಸಿದ ಬಂಗಾರ ದೊರೆಯಬಹುದೆಂದು ಕಳ್ಳರು ಸಂಚು ನಡೆಸಿರುವ ಸಾಧ್ಯತೆಯು ಕೇಳಿಬಂದಿತ್ತು,ಮನೆಯವರ ಪ್ರಜ್ಞಾವಂತಿಕೆ ಯಿಂದ ಆ ಬಂಗಾರಗಳನ್ನು ಸೇಫ್ ಲಾಕರ್ ಇಲ್ಲವೇ ತಮ್ಮ ಜೊತೆ ಕೊಂಡೊಯ್ದು ಇತರೆ ಸುರಕ್ಷಿತ ಸ್ಥಳಗಳಲ್ಲಿ ಇಟ್ಟಿದ್ದರಿಂದ ಅವು ಕಳ್ಳರ ಪಾಲಾಗಲಿಲ್ಲ ಎನ್ನಲಾಗಿದೆ.ಆದರೂ ಕಳ್ಳರು ಬೆಲೆಬಾಳುವ ಸೀರೆಗಳನ್ನು ಕಳ್ಳತನ ನಡೆಸಿರುವ ಮಾಹಿತಿ ಇದೆ.
ಈ ಹಿಂದೆಯೂ ಇದೇ ರಸ್ತೆಯಲ್ಲಿ ದೇವಸ್ಥಾನದ ಪಕ್ಕದ ಮನೆಯ ನಿವೃತ್ತ ಶಿಕ್ಷಕರೊಬ್ಬರುಮನೆ ಬಿಟ್ಟು ಹೊರ ತೆರಳಿದ್ದ ವೇಳೆ ಕಳ್ಳತನ ಸಂಭವಿಸಿತ್ತು. ತಾಲೂಕಿನಲ್ಲಿ ವಿವಿಧ ದೇವಸ್ಥಾನ, ಅಂಗಡಿ, ಮನೆ, ಕಛೇರಿ ಸೇರಿದಂತೆ ನೂರಾರು ಕಳ್ಳತನ ನಡೆದಿದ್ದು ಕೆಲ ಪ್ರಕರಣಗಳು ಮಾತ್ರ ದಾಖಲಾಗಿದೆ. ಅದರಲ್ಲಿ ಪೋಲೀಸರು ಬೆರಳೆಣಿಕೆ ಪ್ರಕರಣ ಮಾತ್ರ ಭೇದಿಸಿದ್ದಾರೆ. ಲಾಕ್ಡೌನ್ ಮತ್ತಿತರ ತುರ್ತು ಸಂದರ್ಭಗಳ ನಿರ್ವಹಣೆ ಒತ್ತಡ ವಿದ್ದರೂ, ಕಳ್ಳರ ಪತ್ತೆ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಪೊಲೀಸ್ ಇಲಾಖೆ ತನ್ನ ದಕ್ಷತೆ ಮೆರೆಯಬೇಕೆನ್ನುವುದು ಪ್ರಜ್ಞಾನಂತರ ಅನಿಸಿಕೆಯಾಗಿದೆ.
ಸಿಬ್ಬಂದಿಗಳ ಕೊರತೆ ಮತ್ತಿತರ ಕಾರಣಗಳಿಂದ ಕಳ್ಳತನವಾಗದಂತೆ ತಡೆಯುವುದು ಪೋಲಿಸರಿಂದಲೂ ತುಸು ಕಷ್ಟದಾಯಕ ಎಂದೆನಿಸಿದಂತಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆನ್ನುವುದು ಅಧಿಕಾರಿಗಳ ಕೋರಿಕೆ ಆಗಿದೆ.
ಸಾರ್ವಜನಿಕರು ತಾವು ತಮ್ಮ ಮನೆ ಬಿಟ್ಟು ಹೊರಗಡೆ ತೆರಳುವ ವೇಳೆ ತಮ್ಮ ಅಕ್ಕಪಕ್ಕದ ಮನೆಯವರಿಗೆ,ಸಂಬಂಧಿಗಳಿಗೆ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಮತ್ತು ಆ ವೇಳೆಯಲ್ಲಿ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತು,ನಗದು ಹಾಗೂ ಚಿನ್ನಾಭರಣಗಳನ್ನು ಇಡದೆ, ಇತರೇ ಸುರಕ್ಷಾ ಕ್ರಮಗಳನ್ನು ಅನುಸರಿಸ ಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ